ಮನ್ನಾರ್'ಗುಡಿ ಗ್ಯಾಂಗ್'ನಿಂದ ಜಯಲಲಿತಾರನ್ನು ಬಚಾವ್ ಮಾಡಿದ್ದರೇ ನರೇಂದ್ರ ಮೋದಿ?

By Suvarna Web DeskFirst Published Dec 7, 2016, 8:50 AM IST
Highlights

ತಮಿಳುನಾಡಿನಲ್ಲಿ ಶಶಿಕಲಾ ಅಂಡ್ ಗ್ಯಾಂಗ್'ನ ಕಪಿಮುಷ್ಠಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಂದು ಮೋದಿಯವರು 2011ರಲ್ಲಿ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಮಾಹಿತಿ ನೀಡಿದ್ದರು.

ಚೆನ್ನೈ(ಡಿ. 07): ನರೇಂದ್ರ ಮೋದಿ ಮತ್ತು ಜಯಲಲಿತಾ ನಡುವೆ ಸ್ನೇಹ ಮತ್ತು ಬಾಂಧವ್ಯ ಇಂದು ನಿನ್ನೆಯದಲ್ಲ, ಎರಡು ದಶಕದ ಹಿಂದನದ್ದು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದಲೂ ಜಯಲಲಿತಾ ಜೊತೆ ವೈಯಕ್ತಿಕ ಸ್ನೇಹ ಇಟ್ಟುಕೊಂಡಿದ್ದರು. 2011ರಲ್ಲಿ ಶಶಿಕಲಾರನ್ನ ಪಕ್ಷದಿಂದ ಹಾಗೂ ತಮ್ಮ ನಿವಾಸದಿಂದ ಜಯಲಲಿತಾ ಹೊರಗೋಡಿಸಿದಾಗ ಮೋದಿಯವರ ಹೆಸರು ಥಳುಕು ಹಾಕಿಕೊಂಡಿತ್ತು.

ಜಯಾರನ್ನು ಎಚ್ಚರಿಸಿದ್ದ ಮೋದಿ:
ಮನ್ನಾರ್'ಗುಡಿ ಗ್ಯಾಂಗ್ ಎಂದೇ ಕುಖ್ಯಾತರಾಗಿರುವ ಶಶಿಕಲಾ ಮತ್ತವರ ಬಳಗವು ಜಯಲಲಿತಾ ಸುತ್ತಮುತ್ತ ಆಡಳಿತದ ಸಂಪೂರ್ಣ  ಹಿಡಿತ ಹೊಂದಿತ್ತು ಎಂಬ ಸುದ್ದಿ ಅನೇಕ ವರ್ಷಗಳಿಂದಲೂ ಇದೆ. ಜಯಲಲಿತಾ ಬರೇ ದಾಳದಂತಾಗಿದ್ದರೆನ್ನಲಾಗಿದೆ. ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಈ ಬಗ್ಗೆ ಜಯಲಲಿತಾರನ್ನು ಎಚ್ಚರಿದ್ದರು. ತಮಿಳುನಾಡಿನಲ್ಲಿ ಶಶಿಕಲಾ ಅಂಡ್ ಗ್ಯಾಂಗ್'ನ ಕಪಿಮುಷ್ಠಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆಂದು ಮೋದಿಯವರು 2011ರಲ್ಲಿ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ಮಾಹಿತಿ ನೀಡಿದ್ದರು. ಮೋದಿ ಸಲಹೆಯನ್ನು ಗ್ರಹಿಸಿದ ಜಯಲಲಿತಾ ತತ್'ಕ್ಷಣವೇ ಕಾರ್ಯಪ್ರವೃತ್ತರಾಗಿ ಮನ್ನಾರ್'ಗುಡಿ ಗ್ಯಾಂಗ್'ನವರನ್ನು ದೂರವಿಡಲು ಪ್ರಾರಂಭಿಸಿದರು. ಶಶಿಕಲಾ, ಆಕೆಯ ಗಂಡ, ಸೋದರ ಇತ್ಯಾದಿ ಮನ್ನಾರ್'ಗುಡಿಯ ಮುಖ್ಯ ಸದಸ್ಯರನ್ನು ಆಡಳಿತ ಆಯಕಟ್ಟಿನ ಸ್ಥಾನದಿಂದ ಕಿತ್ತುಹಾಕಿದರು. ಶಶಿಕಲಾಗೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ಗುರುತಿಸಿ ಅವರನ್ನು ಉಚ್ಚಾಟಿಸುವ ಕೆಲಸ ಮಾಡಿದರು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಯವರ ಸಲಹೆಯಿಂದಾಗಿಯೇ.

ಆದರೆ, ಅದೇನಾಯಿತೋ ಗೊತ್ತಿಲ್ಲ, ಇತ್ತೀಚೆಗಷ್ಟೇ ಜಯಲಲಿತಾ ಮತ್ತೊಮ್ಮೆ ಶಶಿಕಲಾ ಸಖ್ಯಕ್ಕೆ ಬಿದ್ದರು. ಕಾಕತಾಳೀಯವೆಂಬಂತೆ, ಈ ಜಯಲಲಿತಾ ಕಥೆ ಈಗ ದುರಂತ ಅಂತ್ಯ ಕಂಡಿರುವುದು ದುರದೃಷ್ಟಕರವೇ ಸರಿ.

click me!