ನೆ.ಲ. ನರೇಂದ್ರ ಬಾಬು ಶೀಘ್ರ ಬಿಜೆಪಿಗೆ ಸೇರ್ಪಡೆ

By Suvarna Web DeskFirst Published Sep 20, 2017, 5:25 PM IST
Highlights

ರಾಜ್ಯ ರಾಜಕಾರಣದಲ್ಲಿ ‘ಕೈ’ ಬಿಟ್ಟು ‘ಕಮಲ’ ಹಿಡಿಯುವ ಪರ್ವ ಮುಂದುವರಿದ್ದು, ಇದೀಗ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನೆ.ಲ. ನರೇಂದ್ರ ಬಾಬು ಅವರ ಸರದಿ. ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಅ.1 ಅಥವಾ ಅ.2ರಂದು ಬಿಜೆಪಿ ಕಚೇರಿಯಲ್ಲಿ ನರೇಂದ್ರ ಬಾಬು ಅವರು ತಮ್ಮ ಬೆಂಬಲಿಗರೊಂದಿಗೆ ಸೇರುವ ಸಾಧ್ಯತೆ ಇದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ‘ಕೈ’ ಬಿಟ್ಟು ‘ಕಮಲ’ ಹಿಡಿಯುವ ಪರ್ವ ಮುಂದುವರಿದ್ದು, ಇದೀಗ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನಾಯಕ ನೆ.ಲ. ನರೇಂದ್ರ ಬಾಬು ಅವರ ಸರದಿ.

ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಅ.1 ಅಥವಾ ಅ.2ರಂದು ಬಿಜೆಪಿ ಕಚೇರಿಯಲ್ಲಿ ನರೇಂದ್ರ ಬಾಬು ಅವರು ತಮ್ಮ ಬೆಂಬಲಿಗರೊಂದಿಗೆ ಸೇರುವ ಸಾಧ್ಯತೆ ಇದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಕಮಲ ಪಾಳೆಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಈ ಸಂಬಂಧ ಬುಧವಾರ (ಸೆ.20) ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ.

ನರೇಂದ್ರಬಾಬು ಅವರನ್ನು ಪಕ್ಷಕ್ಕೆ ಕರೆತರುವ ಸಂಬಂಧ ಯಡಿಯೂರಪ್ಪ ಸೇರಿದಂತೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮತ್ತು ಸ್ಥಳೀಯ ನಾಯಕರು ಮೂರು ಸುತ್ತಿನ ಚರ್ಚೆ ನಡೆಸಿದ್ದರು. ಮಾತುಕತೆ ಫಲಪ್ರದವಾಗಿದ್ದು, ಬಿಜೆಪಿ ಸೇರ್ಪಡೆಗೆ ನರೇಂದ್ರಬಾಬು ಸಹ ಸಹಮತ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಸದಸ್ಯರಾಗುವ ಮೂಲಕ ರಾಜಕಾರಣಕ್ಕೆ ಪ್ರವೇಶಿಸಿದ ನೆ.ಲ. ನರೇಂದ್ರ ಬಾಬು ಅವರು 2004ರಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿದ್ದರು. ಬಳಿಕ ಕ್ಷೇತ್ರಮರುವಿಂಗಡಣೆ ಪರಿಣಾಮ 2008ರಲ್ಲಿ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ವಲಸೆ ಹೋಗಿ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದರು.

ಮೂರನೇ ಬಾರಿ ಕಣಕ್ಕಿಳಿದ ನರೇಂದ್ರ ಬಾಬು ಅವರ ವಿಧಾನಸಭೆ ಪ್ರವೇಶದ ಕನಸು ಭಗ್ನವಾಯಿತು. ಜೆಡಿಎಸ್‌ನ ಗೋಪಾಲಯ್ಯ ವಿರುದ್ಧ ಸೋಲನುಭವಿಸಿದರು. ಕಾಂಗ್ರೆಸ್‌ನಲ್ಲಿ ಪ್ರಸ್ತುತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ನರೇಂದ್ರ ಬಾಬು ಅವರಿಗೆ ಬಿಜೆಪಿ ಸೇರ್ಪಡೆ ಬಳಿಕ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡದಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ. ನರೇಂದ್ರ ಬಾಬು ಅವರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಪಕ್ಷಕ್ಕೆ ಸೇರಿದ ಬಳಿಕ ಸೂಕ್ತ ಸ್ಥಾನ-ಮಾನ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಮುಖಂಡರು ಸಹಮತ ವ್ಯಕ್ತಪಡಿಸಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂ. ನಾಗರಾಜ್’ಗೆ ಟಿಕೆಟ್ ಸಾಧ್ಯತೆ:

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಉಪಮೇಯರ್ ಎಸ್. ಹರೀಶ್ ಮತ್ತು ಕುರುಬ ಸಮುದಾಯದ ಎಂ. ನಾಗರಾಜು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಬಿಬಿಎಂಪಿಯ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಹಿಂದುಳಿದ ವರ್ಗದ ಮುಖಂಡ ಎಂ. ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ಟಿಕೆಟ್ ಲಭಿಸುವುದು ಬಹುತೇಕ ಖಚಿತವಾಗಿದೆ. ಅಲ್ಲದೇ, ನಾಗರಾಜು ಅವರಿಗೆ ಟಿಕೆಟ್ ನೀಡಲು ಯಡಿಯೂರಪ್ಪ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿ ಇದ್ದು, ಕ್ಷೇತ್ರದಿಂದ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

click me!