ಗೋಮಾಂಸ ಸೇವಿಸುವವರಿಗೆ ರಕ್ಷಣೆಯಿದೆ, ಧರ್ಮ ರಕ್ಷಕರಿಗೆ ಯಾಕಿಲ್ಲ? ಮುತಾಲಿಕ್ ಪ್ರಶ್ನೆ

By Suvarna Web DeskFirst Published Sep 20, 2017, 5:58 PM IST
Highlights

ಹಿಂದೂ ವಿರೋಧಿಗಳಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರ ಧರ್ಮ ಪಾಲಕರಿಗೆ ರಕ್ಷಣೆ ನೀಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ತಕ್ಷಣ ಧರ್ಮ ಪಾಲಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು: ಹಿಂದೂ ವಿರೋಧಿಗಳಿಗೆ ರಕ್ಷಣೆ ನೀಡುವ ರಾಜ್ಯ ಸರ್ಕಾರ ಧರ್ಮ ಪಾಲಕರಿಗೆ ರಕ್ಷಣೆ ನೀಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ತಕ್ಷಣ ಧರ್ಮ ಪಾಲಕರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಆನಂದ್ ಗುರೂಜಿ ಅವರ ನಿವಾಸ ಆವರಣದಲ್ಲಿ ಗೋಮಾಂಸ, ಮದ್ಯ ಬಾಟಲಿ ಎಸೆದ ಕಿಡಿಗೇಡಿಗಳ ಕೃತ್ಯ ಖಂಡಿಸಿ ಪುರಭವನದ ಮುಂದೆ ಬೆಂಬಲಿಗರೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿ ಮಾತನಾಡಿದರು.

ಆನಂದ್ ಗುರೂಜಿ ಅವರ ಮೇಲೆ ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಅವರಿಗೆ ರಕ್ಷಣೆ ನೀಡಬೇಕು. ಗೋಮಾಂಸ ಸೇವಿಸುವವರಿಗೆ ರಕ್ಷಣೆ ಕೊಡಲಾಗುತ್ತದೆ. ಆದರೆ ಗೋ ರಕ್ಷಿಸುವವರಿಗೆ ಭದ್ರತೆ ಇಲ್ಲವಾಗಿದೆ. ಹಿಂದೂ ವಿರೋಧಿಗಳಿಗೆ ರಕ್ಷಣೆ ಕಲ್ಪಿಸುವ ಸರ್ಕಾರ ಧರ್ಮ ಪಾಲಕರಿಗೆ ನೀಡುತ್ತಿಲ್ಲ. ತಕ್ಷಣ ಈ ಬಗ್ಗೆ ಸರ್ಕಾರ ಗಮನಿಸಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಕೆಲವು ಕಿಡಿಗೇಡಿಗಳು ಗೋಮಾಂಸ, ಮದ್ಯಬಾಟಲಿ ಎಸೆಯುವ ಮೂಲಕ ಆನಂದ ಗುರೂಜಿ ಅವರನ್ನು ಅವಮಾನ ಮಾಡಲಾಗಿದೆ. ಅವರು ಯಾವುದೇ ಒಂದು ಸಮಾಜಕ್ಕೆ ಸೇರಿದವರಲ್ಲ. ಧರ್ಮದ ಪಾಲಕರಾಗಿದ್ದಾರೆ. ಗುರೂಜಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯು ಖಂಡನೀಯ. ನಮ್ಮ ನಡುವೆ ವೈಚಾರಿಕ ಸಂಘರ್ಷ ನಡೆದಿತ್ತೆ ವಿನಃ ವೈಯಕ್ತಿಕ ಸಂಘರ್ಷ ಇರಲಿಲ್ಲ. ಹಿಂಸೆಯಲ್ಲಿ ನಮಗೆ ನಂಬಿಕೆ ಇಲ್ಲ. ಇಸ್ಲಾಮಿಕ್, ಕಮ್ಯೂನಿಸ್ಟ್ ಪಕ್ಷದವರು, ಮಾರ್ಕ್ಸ್ ವಾದಿಗಳು ಹಿಂಸೆ ಮಾಡುತ್ತಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇದೆ. ಹಿಂದೂಗಳು, ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡಲಾಗುತ್ತಿದೆ. ಪೊಲೀಸರ ತನಿಖೆಯ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ತನಿಖೆಗೆ ಅಡ್ಡಿಪಡಿಸುವಂತಹ ಕೆಲಸ ಮಾಡಬಾರದು ಎಂದು ವಿಚಾರವಾದಿಗಳಿಗೆ ಎಚ್ಚರಿಕೆ ನೀಡಿದರು.

click me!