
ಬೆಂಗಳೂರು (ಜ.3): ನಾಲ್ಕು ದಿನಗಳ ಹಿಂದೆ ಸಂಗಮ್ ರಸ್ತೆಯ ಮನೆ ಯೊಂದರಲ್ಲಿ ನಡೆದಿದ್ದ ಗೃಹಿಣಿ ತಾರಾ ಕೊಲೆ ಪ್ರಕರಣ ಭೇದಿಸಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು, ಈ ಸಂಬಂಧ ಮೃತರ ಪತಿಯ ಸ್ನೇಹಿತನನ್ನು ಮಂಗಳವಾರ ಬಂಧಿಸಿದ್ದಾರೆ.
ಹೊರಮಾವು ನಿವಾಸಿ ಗೋಪಿನಾಥ್ ಬಂಧಿತನಾಗಿದ್ದು, ಹಣಕಾಸು ವಿವಾದ ಹಿನ್ನೆಲೆಯಲ್ಲಿ ತಾರಾ ಅವರನ್ನು ಆರೋಪಿ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಈ ಹಣಕಾಸು ವಿವಾದ ವಿಷಯ ತಿಳಿಯತು. ಕೂಡಲೇ ಗೋಪಿನಾಥ್ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲಾಯಿತು. ಆಗ ಡಿ.29 ರಂದು ಮಧ್ಯಾಹ್ನ ಮೊಬೈಲ್ ಸಂಗಮ್ ರಸ್ತೆಯ ಟವರ್‌ನಿಂದಲೇ ಆತ ಸಂಪರ್ಕ ಪಡೆದಿದ್ದ ಸಂಗತಿ ಗೊತ್ತಾಯಿತು. ಕೊನೆಗೆ ಅನುಮಾನದ ಮೇರೆಗೆ ಮಂಗಳವಾರ ಬೆಳಗ್ಗೆ ಆತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಗೋಪಿನಾಥ್, ಮೃತರ ಪತಿ ಪ್ರಭುಕುಮಾರ್ ಅವರ ಸ್ನೇಹಿತನಾಗಿದ್ದು, ಎಚ್‌ಎಎಲ್ ಹತ್ತಿರದ ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾಗಿದ್ದರು. ವರ್ಷದ ಹಿಂದೆ ಉದ್ಯೋಗ ತೊರೆದಿದ್ದ ಆತ, ತಾರಾ ಜತೆಗೆ ವಿಶೇಷ ಆತ್ಮೀಯತೆ ಹೊಂದಿದ್ದ. ಇತ್ತೀಚಿಗೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಈ ಆತ್ಮೀಯತೆಯ ಹಿನ್ನೆಲೆಯಲ್ಲಿ ಆತ ‘ ನಾನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇನೆ. ಹೇಗಾದರೂ ಮಾಡಿ ಸಾಲದ ರೂಪದಲ್ಲಿ ಹಣ ಕೊಡಿ. ಬಡ್ಡಿ ಸಮೇತ ಮರಳಿಸುತ್ತೇನೆ’ ಎಂದು ತಾರಾ ಅವರಿಗೆ ಆರೋಪಿ ಮನವಿ ಮಾಡಿದ್ದ. ಈ ಮಾತು ನಂಬಿದ ಅವರು, ನಾಲ್ಕು ಕಂತುಗಳಲ್ಲಿ ಗೆಳೆಯನಿಗೆ 11.8 ಲಕ್ಷ ಕೊಟ್ಟಿದ್ದರು. ಆದರೆ, ಸಾಲ ಮರಳಿಸದ ಕಾರಣಕ್ಕೆ ಅವರಿಬ್ಬರ ಮಧ್ಯೆ ಮನಸ್ತಾಪವಾಗಿತ್ತು. ತಾರಾ ಹಣಕ್ಕೆ ಗಲಾಟೆ
ಮಾಡುತ್ತಿದ್ದ ಕಾರಣಕ್ಕೆ ಕೆರಳಿದ ಗೋಪಿನಾಥ್, ಆಕೆಯ ಕೊಲೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾರಾ ಅವರು, ತಮ್ಮ ಪತ್ನಿ ಮತ್ತು ಮಕ್ಕಳ ಜತೆ ಜೆ.ಸಿ.ನಗರದ ಮಾರಪ್ಪ ಗಾರ್ಡನ್‌ನಲ್ಲಿ ನೆಲೆಸಿದ್ದರು. ಅವರ ತಾಯಿಯು ಸಂಗಮ್ ರಸ್ತೆಯಲ್ಲಿರುವ ಸ್ವಂತ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದರು.
ಡಿಸೆಂಬರ್ 28ರಂದು ಮಗಳಿಗೆ ಕರೆ ಮಾಡಿದ್ದ ಅವರು, ನೆರೆಹೊರೆಯವರ ಜತೆ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುತ್ತೇನೆ. ‘ನಾನು ವಾಪಸ್ ಬರುವವರೆಗೂ ನೀನು ಬಂದು ಮನೆಯಲ್ಲಿರು’ ಎಂದಿದ್ದರು. ಇದಕ್ಕೆ ಸಮ್ಮತಿಸಿದ ತಾರಾ, ಅಂದು ಮಧ್ಯಾಹ್ನವೇ ತವರು ಮನೆಗೆ ಬಂದು ತಾಯಿಯನ್ನು ಪ್ರವಾಸಕ್ಕೆ ಕಳುಹಿಸಿ ಕೊಟ್ಟಿದ್ದರು. ಮರುದಿನ ಮಧ್ಯಾಹ್ನ ಆ ಮನೆಗೆ ತೆರಳಿದ್ದ ಗೋಪಿನಾಥ್, ಬಟ್ಟೆಯಿಂದ ಕುತ್ತಿಗೆ ಬಿಗಿದಿದ್ದ. ನಂತರ ಚಾಕುವಿನಿಂದ ಕುತ್ತಿಗೆ ಕೊಯ್ದು ಹೊರಗಿನಿಂದ ಚಿಲಕ ಹಾಕಿಕೊಂಡು ಹೋಗಿದ್ದ. ಸೋಮವಾರ ಸಂಜೆ ಮನೆಗೆ ಮೃತರ ತಾಯಿ ಸರಳ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಸೋಮವಾರ ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ತಾರಾ ಮೃತಪಟ್ಟು 3 ದಿನ ಕಳೆದಿವೆ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.