ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆ ಉಲ್ಬಣಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಈ ಆತಂಕದ ನಡುವೆ ಗ್ರಾಮಸ್ಥರೋರ್ವರು ಬರೆದ ಹೃದಯ ವಿದ್ರಾವಕ ಪತ್ರ ಇಲ್ಲಿದೆ.
ಸಾಗರ ತಾಲೂಕಿನ ಅರಳಗೋಡು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಮ್ಮೂರನ್ನು ನಮ್ಮವರನ್ನು ಜೀವಭಯ ಆವರಿಸಿದೆ. ನೆರೆಯೂರಲ್ಲಿ ನಿಂತವರಂತೆ ನಿತ್ಯ ಆತಂಕದ ಅಗ್ನಿಕುಂಡದಲ್ಲಿ ಬೇಯುತ್ತಿರುವ ಅವರ ಮನಃಸ್ಥಿತಿ ಮತ್ತು ಪರಿಸ್ಥಿತಿಯನ್ನು ಕಂಡಾಗ ಮನಸ್ಸು ಮರುಗುತ್ತದೆ. ಒಂದು ಸಣ್ಣ ತಲೆನೋವು, ತುಸು ಜ್ವರ ಶುರುವಾದರೂ ತನ್ನ ಅಂತ್ಯ ಸಮೀಪಿಸುತ್ತಿದೆ ಎನ್ನುವಷ್ಟು ಭಯಭೀತರಾಗುತ್ತಿದ್ದಾರೆ ಅಲ್ಲಿಯ ಜನ. ನಮ್ಮೂರಿನಲ್ಲೊಂದಷ್ಟು ಆದ್ರತೆಯಿತ್ತು. ಒಂದಿಷ್ಟು ಜೀವಂತಿಕೆಯಿತ್ತು. ಕಾಡಿಗೆ ಹೋಗುವ ಉತ್ಸಾಹ ತುಂಬುವ ಸನ್ನಿವೇಶವಿತ್ತು. ಈಗ ಮಂಗನ ಕಾಯಿಲೆಯೆಂಬ ಮಹಾಮಾರಿ ಆ ಎಲ್ಲ ಜೀವಂತಿಕೆಯನ್ನೂ ಹೊಸಕಿ ಹಾಕಿದೆ. ನಮ್ಮ ಗ್ರಾಮದ ಪಕ್ಕದ ಅರಳಗೋಡಿನಲ್ಲಿ ಈಗಾಗಲೇ ಆರು ಮಂದಿ ಸತ್ತಿದ್ದಾರೆ. ಅದರಲ್ಲಿ ಎರಡನೇ ಪಿಯುಸಿ ಓದುತ್ತಿರುವ ಶ್ವೇತಾ ಜೈನ್ ರಂತಹ ಯುವಜೀವವೂ ಇದೆ. ಪಾರ್ಶ್ವ ನಾಥರಂತಹ ಮಧ್ಯಮ ವಯಸ್ಕರೂ ಇದ್ದಾರೆ. ಈಗಂತೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಮಣಿಪಾಲಕ್ಕೆ ಸೇರಿದ್ದಾರೆ. ಹತ್ತು ಹನ್ನೆರಡು ಮಂದಿ ಕೋಟೇಶ್ವರ ಸೇರಿದ್ದಾರೆ. ಇನ್ನು ಸಾಗರ ಶಿವಮೊಗ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ನಲವತ್ತೈವತ್ತು ಮಂದಿ.
ಮಂಗನಕಾಯಿಲೆ: ಎಚ್ಚೆತ್ತುಕೊಳ್ಳದ ಸರ್ಕಾರದ ವಿರುದ್ಧ ಸಿಡಿದೆದ್ದ ಹರತಾಳು ಹಾಲಪ್ಪ
undefined
ಎರಡೆರಡು ಮುಳುಗಡೆ, ಸರ್ಕಾರದ ಅಸ್ಥಿರ ಅರಣ್ಯ ಕಾರ್ಯನೀತಿ, ಕಸ್ತೂರಿ ರಂಗನ್, ಬಯೋ ಡೈವರ್ಸಿಟಿ ಹಾಟ್ ಸ್ಪಾಟ್‌ನಂತಹ ವರದಿಗಳು, ಯೋಜನಾ ಪ್ರದೇಶದ ಹುಚ್ಚಾಟಗಳು, ಅರಣ್ಯ ಅಧಿಕಾರಿಗಳ ಕಿರುಕುಳಗಳ ನಡುವೆ ಹಿನ್ನೀರಿನ ಹತ್ತು ಹಲವು ತಾಪತ್ರಯಗಳಿಗೆ ಸಿಕ್ಕು ನರಳುತ್ತಿದ್ದ ಜನರನ್ನು ಈ ಬಾರಿ ಕಾಡುತ್ತಿರುವುದು ಅವರು ಅಪಾರವಾಗಿ ಪ್ರೀತಿಸುತ್ತಿರುವ ಕಾಡು. ಇದುವರೆಗೂ ಕಾಡು ಅವರಿಗೆ ಏಕಕಾಲದಲ್ಲಿ ಮಿತ್ರನೂ ಹೌದು, ಶತ್ರುವೂ ಹೌದು ಎನ್ನಲಾಗುತ್ತಿತ್ತು. ಆದರೆ ಈಗ ಅವರ ನೆಚ್ಚಿನ ಕಾಡೇ ಅವರನ್ನು ಭಯಭೀತರನ್ನಾಗಿಸಿದೆ. ತೋಟಕ್ಕೆ, ಗದ್ದೆಗೆ ಹೋಗಲೂ ಧೈರ್ಯವಿಲ್ಲದೆ ನಡುಗುತ್ತಿದ್ದಾರೆ.
ಶಿವಮೊಗ್ಗದಲ್ಲಿ ಹರಡುತ್ತಿದೆ ಮಂಗನ ಕಾಯಿಲೆ
ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತಿದ್ದೇವೆ ಎನ್ನುತ್ತಿದೆ. ಆದರೆ ಜನ ಸಾಯುತ್ತಲೇ ಇದ್ದಾರೆ. ಸತ್ತವರಿಗೆ ಒಂದಷ್ಟು ಪರಿಹಾರ ಘೋಷಿಸಲೂ ಸರ್ಕಾರಕ್ಕೆ ಕರುಣೆಯಿಲ್ಲ. ಕೋಮು ಗಲಭೆಯಲ್ಲಿ ಸತ್ತವರಿಗೆ ಹತ್ತೆಂಟು ಲಕ್ಷ ಘೋಷಿಸುವ, ಬಯಲು ಸೀಮೆಯಲ್ಲೋ ನಗರಗಳಲ್ಲೋ ಯಾವುದೋ ಆಕಸ್ಮಿಕಗಳಲ್ಲಿ ಮಡಿದವರಿಗೆ ಐದಾರು ಲಕ್ಷ ಪರಿಹಾರ ನೀಡುವ ಸರ್ಕಾರಕ್ಕೆ ಶರಾವತಿ ತೀರದ ಈ ನತದೃಷ್ಟರಿಗೆ ಪರಿಹಾರ ನೀಡಲು ಹಣವಿಲ್ಲ. ಕೇವಲ ಶರಾವತಿ ಯೋಜನೆಯೊಂದರಿಂದಲೇ ಕನಿಷ್ಟ ವರ್ಷಕ್ಕೆ ಐದು ಸಾವಿರ ಮಿಲಿಯನ್ ಉತ್ಪಾದನೆ ಆಗುತ್ತಿದೆ. ಯೂನಿಟ್ಟಿಗೆ ಐದು ರುಪಾಯಿ ಲೆಕ್ಕಹಾಕಿದರೂ ಕನಿಷ್ಟ ಎರಡೂವರೆ ಸಾವಿರ ಕೋಟಿ ರುಪಾಯಿ ನೇರ ಉತ್ಪತ್ತಿ. ಅಷ್ಟಿದ್ದೂ ಹಿನ್ನೀರಿನ ಮಂದಿಯ ಸಂಕಷ್ಟಕ್ಕೆ ನೀಡುತ್ತಿರುವ ನೆರವು ಶೂನ್ಯ.
ಊರಿನ ಋುಣದಲ್ಲಿ ಬೆಳೆದ ನನ್ನಂತವರಿಗೆ ಊರಿಗೇನೂ ಮಾಡಲಾಗದ ಸಂಕಟ. ಕೊನೇ ಪಕ್ಷ ಜೊತೆಯಲ್ಲಿ ನಾವಿದ್ದೇವೆ ಎಂಬ ನೆಮ್ಮದಿಯಾದರೂ ಇರಲೆಂದು ಮತ್ತೆ ಮತ್ತೆ ಊರಿಗೆ ಹೋಗಿ ಬರುವುದನ್ನು ಬಿಟ್ಟರೆ ನಾವೂ ಮಾತಿನವೀರರೇ. ಮನಸ್ಸೆಲ್ಲ ಮುದುಡಿ ಹೋದ ಅಸಹಾಯಕತೆ, ಅನಾಥ ಪ್ರಜ್ಞೆ. ನಿನ್ನೆ ರೈಲಿನಲ್ಲಿ ಬರುವಾಗಲೇ ತಮಗಿದನ್ನು ತಿಳಿಸಬೇಕೆಂದು ಯೋಚಿಸಿದ್ದೆ, ಮನುಷ್ಯರಿಗೆ ಮುಪ್ಪು ಬಂದರೆ ಹೇಗೋ ಸಹಿಸಿಕೊಳ್ಳಬಹುದು, ಆದರೆ ಊರಿಗೇ ಮುಪ್ಪು ಬಂದರೆ, ಬಹಳ ಸಂಕಟವಾಗುತ್ತದೆ.
ಗಜಾನನ ಶರ್ಮ : ಹುಕ್ಕಲು