
ನವದೆಹಲಿ(ಜುಲೈ 30): ದೇಶದಲ್ಲಿ ಕ್ರಾಂತಿಕಾರಿ ಜಿಎಸ್'ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತಂದ ರೀತಿಯು ವಿವಿಗಳ ಅಧ್ಯಯನಕ್ಕೆ ಒಂದು ಕೇಸ್ ಸ್ಟಡಿಯಂತಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಈ ತಿಂಗಳ ಮನ್'ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಇಂದು ಮಾತನಾಡಿದ ಮೋದಿ, ಜಿಎಸ್'ಟಿಯಂತಹ ಬೃಹತ್ ಮತ್ತು ವ್ಯಾಪಕ ವ್ಯವಸ್ಥೆಯು ಇಷ್ಟು ಸುಲಲಿತವಾಗಿ ಜಾರಿಯಾಗಿದ್ದು ನಿಜಕ್ಕೂ ಐತಿಹಾಸಿಕ ಎಂದು ಬಣ್ಣಿಸಿದರು. "ಒಂದು ರಾಷ್ಟ್ರ ಒಂದು ತೆರಿಗೆ ಪದ್ಧತಿ ಜಿಎಸ್'ಟಿ ಕೇವಲ ತೆರಿಗೆ ಸುಧಾರಣೆಯಷ್ಟೇ ಅಲ್ಲ, ಅದೊಂದು ಹೊಸ ಸಂಸ್ಕೃತಿಯಾಗಿದೆ.. ಜಿಎಸ್'ಟಿ ನಮ್ಮ ದೇಶದ ಆರ್ಥಿಕತೆಯನ್ನು ಪರಿವರ್ತಿಸಿದೆ" ಎಂದೂ ಮೋದಿ ಹೇಳಿದರು.
"ಜಿಎಸ್'ಟಿ ಜಾರಿಯಾಗಿ ಒಂದು ತಿಂಗಳಾಯಿತು. ಬಡವರಿಗೆ ಅಗತ್ಯವಾಗಿರುವ ವಸ್ತುಗಳ ಬೆಲೆಗಳು ಜಿಎಸ್'ಟಿಯಿಂದಾಗಿ ಕಡಿಮೆಯಾಗಿವೆ ಎಂದು ಯಾರಾದರೂ ನನಗೆ ತಿಳಿಸಿದರೆ ನಿಜಕ್ಕೂ ಸಂತೋಷವಾಗುತ್ತದೆ," ಎಂದು ಪ್ರಧಾನಿ ತಮ್ಮ ಮನದ ಮಾತನ್ನು ವ್ಯಕ್ತಪಡಿಸಿದರು.
ಭಾರತದ ಜಿಎಸ್'ಟಿ ಪದ್ಧತಿ ಮತ್ತು ಅದನ್ನು ಜಾರಿಗೆ ತಂದ ರೀತಿಯು ವಿಶ್ವದ ವಿಶ್ವವಿದ್ಯಾಲಯಗಳಿಗೆ ಒಂದು ಅಧ್ಯಯನದ ವಸ್ತುವಾಗಲಿದೆ ಎಂದೂ ಮೋದಿ ಬಣ್ಣಿಸಿದರು.
30 ನಿಮಿಷಗಳ ಮನ್'ಕೀ ಬಾತ್'ನಲ್ಲಿ ಜಿಎಸ್'ಟಿ ಜೊತೆಗೆ ಇನ್ನೂ ಕೆಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು. ದೇಶದ ವಿವಿಧೆಡೆ ಅಪ್ಪಳಿಸಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಖೇದ ವ್ಯಕ್ತಪಡಿಸಿದರು. ಆಂತರಿಕ ಸ್ವತಂತ್ರ ಚಲನೆಯ ಅಗತ್ಯತೆಯನ್ನು ಒತ್ತಿಹೇಳಿದರು; ಹಬ್ಬ ಆಚರಣೆಗಳಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನ ಬಳಸಬೇಕೆಂದು ಜನತೆಗೆ ಕರೆ ನೀಡಿದರು; ವಿಶ್ವಕಪ್'ನ ಫೈನಲ್'ಗೇರಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸಾಧನೆಯನ್ನು ಶ್ಲಾಘಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.