ಇತಿಹಾಸದಲ್ಲೇ ಅತೀ ಬೃಹತ್ ಹೆರಾಯಿನ್ ವಶ; ಪನಾಮಾ ನೊಂದಣಿ, ಇರಾನ್'ನಿಂದ ಬರುತ್ತಿದ್ದ ಹಡಗು ಕರಾವಳಿಯಲ್ಲಿ ವಶಕ್ಕೆ

By Suvarna Web DeskFirst Published Jul 30, 2017, 4:09 PM IST
Highlights

ದೇಶದ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದು ಇದೇ ಮೊದಲ ಬಾರಿ ಎನ್ನಲಾಗಿದೆ. ಹಡಗಿನಲ್ಲಿ ಹೆರಾಯಿನ್ ಸಾಗಿಸಲಾಗುತ್ತಿರುವ ಬಗ್ಗೆ ಎನ್'ಟಿಆರ್'ಒ ಮತ್ತಿತರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿ ಎಚ್ಚರಿಸಿದ್ದವು. ಸಮುದ್ರ ಪಾವಕ್ ಮತ್ತು ಅಂಕಿತ್ ಎಂಬ ಕಾವಲು ಹಡಗುಗಳು ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದವು.

ಅಹ್ಮದಾಬಾದ್(ಜುಲೈ 30): ಗುಜರಾತ್'ನ ಕರಾವಳಿಯಲ್ಲಿ 1,500 ಕಿಲೋ ಪ್ರಮಾಣದ ಹೆರಾಯಿನ್ ಡ್ರಗ್ಸ್'ನ್ನು ವಶಪಡಿಸಿಕೊಳ್ಳಲಾಗಿದೆ. 3500 ಕೋಟಿ ರೂ ಮೌಲ್ಯದ ಮಾದಕವಸ್ತುವನ್ನು ಸಾಗಿಸಲಾಗುತ್ತಿದ್ದ ಹಡಗನ್ನೂ ವಶಕ್ಕೆ ಪಡೆಯಲಾಗಿದೆ. ಭಾರತೀಯ ಕರಾವಳಿ ಪಡೆಯವರು ಹಡಗಿನ 8 ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಎಲ್ಲಾ ಸಿಬ್ಬಂದಿಯೂ ಭಾರತೀಯರೇ ಆಗಿದ್ದಾರೆ. ವಶಪಡಿಸಿಕೊಳ್ಳಲಾದ ಎಂವಿ ಹೆನ್ರೀ ಎಂಬ ಈ ಹಡಗು ಪನಾಮಾ ದೇಶದ ನೊಂದಣಿ ಹೊಂದಿತ್ತು. ಇರಾನ್'ನಿಂದ ಆಗಮಿಸಿದ ಅದು ಗುಜರಾತ್'ನ ಆಲಂಗ್'ನತ್ತ ಹೊರಟಿದ್ದಾಗ ಕರಾವಳಿ ಕಾವಲು ಪಡೆಯವರ ಕೈಗೆ ಸಿಕ್ಕಿಬಿದ್ದಿದೆ.

ದೇಶದ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದು ಇದೇ ಮೊದಲ ಬಾರಿ ಎನ್ನಲಾಗಿದೆ. ಹಡಗಿನಲ್ಲಿ ಹೆರಾಯಿನ್ ಸಾಗಿಸಲಾಗುತ್ತಿರುವ ಬಗ್ಗೆ ಎನ್'ಟಿಆರ್'ಒ ಮತ್ತಿತರ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿ ಎಚ್ಚರಿಸಿದ್ದವು. ಸಮುದ್ರ ಪಾವಕ್ ಮತ್ತು ಅಂಕಿತ್ ಎಂಬ ಕಾವಲು ಹಡಗುಗಳು ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದವು. ಮೂರು ದಿನಗಳ ಕಾರ್ಯಾಚರಣೆ ಬಳಿಕ ಡ್ರಗ್ಸ್ ಇದ್ದ ಹಡಗನ್ನು ಪತ್ತೆ ಮಾಡಿ ಹಿಡಿಯಲಾಯಿತು. ಇದೀಗ ಈ ಹಡಗನ್ನು ಪೋರ್'ಬಂದರ್'ಗೆ ಕರೆತರಲಾಗಿದ್ದು ವಿಚಾರಣೆ ನಡೆಯುತ್ತಿದೆ.

ಇಂಟೆಲಿಜೆನ್ಸ್ ಬ್ಯೂರೋ, ಪೊಲೀಸ್, ಕಸ್ಟಮ್ಸ್ ಇಲಾಖೆ, ನೌಕಾಪಡೆ ಮೊದಲಾದವುಗಳು ಈ ಪ್ರಕರಣದಲ್ಲಿ ಜಂಟಿಯಾಗಿ ತನಿಖೆ ನಡೆಸಲಿವೆ.

click me!