
ಬೆಂಗಳೂರು(ಸೆ.29): ಆಧುನಿಕ ಜೀವನ ಶೈಲಿಯಿಂದ ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್ ಖಾಯಿಲೆಗಳು ಹೆಚ್ಚಾಗುತ್ತಿವೆ ಎಂದು ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ. ನಗರದ ಪ್ರೀಡಂ ಪಾರ್ಕ್ ನಲ್ಲಿ ತಥಾಗತ್ ಹೃದಯ ಆಸ್ಪತ್ರೆ ಆಯೋಜಿಸಿದ್ದ ನನ್ನ ಹೃದಯ ನಿಮ್ಮ ಹೃದಯ ವಾಕಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಾವು ತಿನ್ನುವ ಆಹಾರದಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿರುವುದರಿಂದ ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ. ಪೌಷ್ಠಿಕ ಹಾಗೂ ಸತ್ವಯುತ ಆಹಾರ ಸೇವನೆಯಿಂದ ರೋಗಗಳನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಸ್ವಾಗತಾರ್ಹ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚಾಗುತ್ತಿದೆ. ಜನರು ವ್ಯಾಯಾಮ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಹೃದಯಾಘಾತ ಆಗುವುದನ್ನು ತಡೆಯಬಹುದು. ರಾಜ್ಯ ಸರ್ಕಾರ ಸಾಂಕ್ರಾಮಿಕವಲ್ಲದ ಹೃದಯ ಸಂಬಂಧಿ ಹಾಗೂ ಡಯಾಬಿಟಿಸ್ ನಂತಹ ರೋಗಗಳ ಪತ್ತೆ ಮಾಡುವ ಕುರಿತು ಬಜೆಟ್ ನಲ್ಲಿ ಯೋಜನೆ ಘೊಷಣೆ ಮಾಡಿದೆ.
ಶೀಘ್ರವೇ ಸಂಪುಟದ ಮುಂದೆ ತಂದು ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು. ತಥಾಗತ್ ಹೃದಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಮಹಾಂತೇಶ್ ಚರಂತಿಮಠ್ ಮಾತನಾಡಿ, ಯುವಕರಲ್ಲಿ ಹೃದಯ ಸಬಂಂಧಿ ಖಾಯಿಲೆಗಳು ಹೆಚ್ಚಾಗುತ್ತಿದೆ. ನೂರು ಜನರಲ್ಲಿ ಶೇಕಡಾ 40 ರಷ್ಟು ಜನರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಯತ್ತಿದ್ದಾರೆ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ತಥಾಗತ್ ಸಂಸ್ಥೆವತಿಯಿಂದ ಪ್ರತಿ ವರ್ಷ ವಾಕಥಾನ್ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಇಂದಿನ ವಾಕಥಾನ್ ನಲ್ಲಿ ನಗರದ ಅನೇಕ ಕಾಲೇಜುಗಳಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ ಎಂದು ಹೇಳಿದರು. ವಾಕಥಾನ್ ನಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ಡಿಸ್ಟ್ರಿಕ್ ಗೌರ್ನರ್ 317 ಇ ಲೈಯನ್ ಎಚ್.ಟಿ. ಸೀತಾರಾಮ್, ಲೈಯನ್ ಚಾಮುಂಡೇಶ್ವರಿ ಪಾಲ್ಗೊಂಡಿದ್ದರು. ನಂತರ ಫ್ರೀಡಂ ಪಾರ್ಕ್ ನಿಂದ ಮಲ್ಲೇಶ್ವರ್ ಮಂತ್ರಿಮಾಲ್ ವರೆಗೂ ವಿದ್ಯಾರ್ಥಿಗಳು ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.