'ಸೋಲಿಗೆ ಕಾರಣ ಹುಡುಕದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ'..!

First Published Jun 14, 2018, 9:15 PM IST
Highlights

ಸೋಲಿಗೆ ಕಾರಣ ಹುಡುಕಲು ಕಾಂಗ್ರೆಸ್ ಶಾಸಕ ಆಗ್ರಹ

ಪಕ್ಷದ ಉಳಿವಿಗೆ ಕೈ ನಾಯಕರು ಮುಂದಾಗಬೇಕು

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಒತ್ತಾಯ

ಮೈತ್ರಿ ಸರ್ಕಾರದ ಕುರಿತು ಅಪಸ್ವರ ಎತ್ತಿದ ಶಾಸಕ

ಜಿಲ್ಲಾ ಉಸ್ತುವಾರಿ ಸಚಿವರ ಮೇಲೂ ಸುಧಾಕರ್ ಗರಂ

ಎಂ.ಬಿ. ಪಾಟೀಲ್ ಮನೆಯಲ್ಲಿ ಸಭೆಯ ಕುರಿತು ಸ್ಪಷ್ಟನೆ

ಚಿಕ್ಕಬಳ್ಳಾಪುರ(ಜೂ.14): ಇಡೀ ದೇಶದಲ್ಲಿ ಕಾಂಗ್ರೆಸ್ ತೀವ್ರ ಸಂಕಷ್ಟದಲ್ಲಿದ್ದು, ದೇಶ ಸಂಪೂರ್ಣ ಕೇಸರಿಮಯವಾಗುತ್ತಿದೆ. ಯುವ ಮತದಾರರು ಬಿಜೆಪಿ ಕಡೆಗೆ ವಾಲುತ್ತಿದ್ದು, ಇದಕ್ಕೆ ಸ್ಪಷ್ಟ ಕಾರಣ ಹುಡುಕುವ ಕೆಲಸ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಆರೋಪಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಡಾ. ಸುಧಾಕರ್, ಕಾಂಗ್ರೆಸ್ ತನ್ನ ಸೋಲಿಗೆ ಕಾರಣ ಹುಡುಕದಿದ್ದರೆ ಭವಿಷ್ಯದಲ್ಲಿ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಈ ಮೈತ್ರಿ ಬಗ್ಗೆ ತಮಗೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿದರು.

ಇದೇ ವೇಳೆ ಸ್ವಪಕ್ಷದ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ಡಾ. ಸುಧಾಕರ್, ತಾತ, ಅಪ್ಪ ಮಂತ್ರಿಯಾಗಿದ್ದರು ಎಂದು ಪರಿಗಣಿಸಿ ಸಚಿವ ಸ್ಥಾನ ನೀಡುವ ಪದ್ದತಿಯನ್ನು ಪಕ್ಷ ಕೈ ಬೀಡಬೇಕು ಎಂದು ಆಗ್ರಹಿಸಿದ್ದಾರೆ.ಅರ್ಹರು ಮತ್ತು ಪಕ್ಷ ಸಂಘಟನೆಗೆ ಚತುರರನ್ನು ನೇಮಿಸುವ ಕೆಲಸ ಆಗದಿದ್ದರೆ ಕಾಂಗ್ರೆಸ್ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಬಿಜೆಪಿ ಕಡೆ ವಾಲುತ್ತಿರುವ ಯುವಸಮೂಹವನ್ನು ಪಕ್ಷಕ್ಕೆ ಸೆಳೆಯದಿದ್ದರೆ ಉಳಿಗಾಲವಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್ ಅರಿಯಬೇಕಿದೆ ಎಂದೂ ಅವರು ಎಚ್ಚರಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ 78 ಸ್ಥಾನ ಗೆದ್ದ ಕಾಂಗ್ರೆಸ್ ಕೇವಲ 37 ಸ್ಥಾನ ಗೆದ್ದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಶಾಸಕರಿಗೆ ಇಷ್ಟವಿರಲಿಲ್ಲ. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಆದೇಶದಂತೆ ಕುಮಾರಸ್ವಾಮಿ ಅವರನ್ನು ಸಿಎಂ ಆಗಿ ಮಾಡಲಾಯಿತು ಎಂದು ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು. ಇದೇ ವೇಳೆ ಯಾವುದೇ ಕಾರಣಕ್ಕೂ ತಾವು ಜಿಲ್ಲಾ ಉಸ್ತುವಾರಿ ಸಚಿವ ಶಿವಶಂಕರ ರೆಡ್ಡಿ ಜೊತೆ ತಾವು ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಶಿವಶಂಕರ್ ರೆಡ್ಡಿ ಅವರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಿಗೇ ಅಸಮಾಧಾನವಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಇದೇ ವೇಳೆ ಎಂ.ಬಿ. ಪಾಟೀಲ್ ಮನೆಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸುವ ಕುರಿತು ಸ್ಪಷ್ಟನೆ ನೀಡಿದ ಸುಧಾಕರ್, ಪಕ್ಷ ಉಳಿಸಲು ತಾವೆಲ್ಲಾ ಅಲ್ಲಿ ಸೇರಲಿರುವುದಾಗಿ ಸ್ಪಷ್ಟಪಡಿಸಿದರು. ೨೦೧೯ ರ ಲೋಕಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಕೋಮು ಶಕ್ತಿಗಳನ್ನು ಸೋಲಿಸಲು ಚರ್ಚೆ ನಡೆಸಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.

click me!