ಹಣಕಾಸು ನೆರವಿನಲ್ಲಿ ಕೇಂದ್ರ ರಾಜ್ಯಕ್ಕೆ ತಾರತಮ್ಯ ಮಾಡಿದೆಯೇ?

By Suvarna Web DeskFirst Published Mar 22, 2018, 11:56 AM IST
Highlights

ಕೇಂದ್ರದ ಹಣಕಾಸು ತಾರತಮ್ಯ: 10 ಸಿಎಂಗಳಿಗೆ ಸ್ಟಾಲಿನ್‌ ಪತ್ರ

ಚೆನ್ನೈ: ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಫೋಸ್ಟ್‌ವೊಂದನ್ನು ಪ್ರಕಟಿಸಿದ ಬೆನ್ನಲ್ಲೇ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಕೇಂದ್ರ ಸರ್ಕಾರದ ಹಣಕಾಸು ನೀತಿಯನ್ನು ಟೀಕಿಸಿ ಬಿಜೆಪಿಯೇತರ 10 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರಬರೆದಿದ್ದಾರೆ.

ಜನಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ರಾಜ್ಯಗಳಿಗೆ ಕೇಂದ್ರ ಸರ್ಕಾರ ದಂಡದ ಬರೆ ಎಳೆದಿದೆ. 15ನೇ ಹಣಕಾಸು ಆಯೋಗ ರಚನೆ, ನ್ಯಾಯದ ಅಣಕ ಎಂದು ಟೀಕಿಸಿರುವ ಸ್ಟಾಲಿನ್‌, ಅದು ಪ್ರಗತಿಪರ ರಾಜ್ಯಗಳಿಗೆ ಕೇಂದ್ರದ ಅನುದಾನವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.

ತಮಿಳ್ನಾಡು ಸಿಎಂ ಪಳನಿಸ್ವಾಮಿ, ಕೇರಳ ಸಿಎಂ ಪಿಣರಾಯಿ ವಿಜಯನ್‌, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್‌ ರಾವ್‌, ಕರ್ನಾಟಕ ಸಿಎಂ ುಂತ್ರಿ ಸಿದ್ದರಾಮಯ್ಯ, ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ಪ. ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಕೇಜ್ರಿವಾಲ್‌ ಮತ್ತು ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಅವರಿಗೆ ಸ್ಟಾಲಿನ್‌ ಪತ್ರ ಕಳುಹಿಸಿದ್ದಾರೆ.

ಕೇಂದ್ರ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಅನುದಾನವನ್ನು ಹಂಚಿಕೆ ಮಾಡುತ್ತಿದೆ. ಹೀಗಾಗಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳು ಕಡಿಮೆ ಅನುದಾನವನ್ನು ಪಡೆಯುತ್ತಿವೆ. ಜನಸಂಖ್ಯೆಯನ್ನು ನಿಯಂತ್ರಿಸಲು ವಿಫಲವಾದ ಉತ್ತರ ಪ್ರದೇಶ ಕೇಂದ್ರದ ಅನುದಾನದಲ್ಲಿ ಸಿಂಹಪಾಲು ಪಡೆಯುತ್ತಿದೆ. ಅಲ್ಲದೇ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಮಾಜ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮಾತ್ರ ಹಣವನ್ನು ನೀಡಲಾಗುತ್ತಿದೆ. ಆದರೆ, ರಾಜ್ಯಸರ್ಕಾರಗಳ ಯೋಜನೆಗೆ ಅನುದಾನ ದೊರೆಯುತ್ತಿಲ್ಲ ಎಂದು ಸ್ಟಾಲಿನ್‌ ಆರೋಪಿಸಿದ್ದಾರೆ.

click me!