ಸಚಿವ ಸ್ಥಾನ : ಡಿಕೆಶಿ ನೀಡಿದ ಹೊಸ ಸುಳಿವೇನು..?

By Web DeskFirst Published Dec 25, 2018, 12:00 PM IST
Highlights

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಇದೇ ವೇಳೆ ಹಲವರಿಂದ ವ್ಯಕ್ತವಾದ ಅಸಮಾಧಾನದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆಯೊಂದನ್ನು ನೀಡಿದ್ದಾರೆ.  

ಬೆಂಗಳೂರು :  ಸಚಿವ ಸ್ಥಾನದ ಆಸೆಗಳು ಎಲ್ಲರಿಗೂ ಇರುತ್ತವೆ. ಅದನ್ನು ತಪ್ಪೆಂದು ಹೇಳಲಾಗುವುದಿಲ್ಲ. ಆದರೆ, ಪಕ್ಷ ಉಳಿದಾಗ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯವಾಗುತ್ತದೆ. ಎರಡು ವರ್ಷದ ಅವಧಿಗೆ ಸಚಿವ ಸ್ಥಾನ ನೀಡಲಾಗಿದೆ. 

ಎರಡು ವರ್ಷದ ಬಳಿಕ ರೊಟೇಷನ್‌ ಮಾಡಲಾಗುತ್ತದೆ. ಅಲ್ಲಿಯವರೆಗೂ ಅಸಮಾಧಾನಗೊಂಡಿರುವ ಶಾಸಕರು ತಾಳ್ಮೆ ವಹಿಸಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದರು. ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ 5 ವರ್ಷ ಸರ್ಕಾರ ನಡೆಸುವುದಕ್ಕೆ ಮಾತು ಕೊಟ್ಟಿದ್ದೇವೆ. ಇದನ್ನು ಅರ್ಥ ಮಾಡಿಕೊಂಡು ಮತ್ತು ಪಕ್ಷ ಇದ್ದರೆ ನಾವು ಎಂಬುದನ್ನು ತಿಳಿದುಕೊಳ್ಳಬೇಕು. ಪಕ್ಷದಲ್ಲಿ ಮೊದಲಿನ ಪರಿಸ್ಥಿತಿ ಇಲ್ಲದಿರುವುದರಿಂದ ಯಾವುದೇ ತ್ಯಾಗಕ್ಕೂ ಸಿದ್ಧರಿರಬೇಕು ಎಂದು ಹೇಳಿದರು.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ನನಗೂ 7-8 ತಿಂಗಳು ಸಚಿವ ಸ್ಥಾನ ಸಿಗದೆ ಖಾಲಿ ಇದ್ದೆ. ಧರ್ಮಸಿಂಗ್‌ ಸರ್ಕಾರದಲ್ಲಿಯೂ ಸಂಪುಟದಿಂದ ಹೊರಗಿಡಲಾಗಿತ್ತು. ಆ ಸಂದರ್ಭದಲ್ಲಿ ಯಾವೊಬ್ಬ ನಾಯಕರು ಕೂಡ ನನ್ನ ಪರವಾಗಿ ಮಾತನಾಡಲು ಮುಂದೆ ಬಂದಿರಲಿಲ್ಲ. ಹೀಗಾಗಿ, ಪರಿಸ್ಥಿತಿ ಅರ್ಥ ಮಾಡಿಕೊಂಡು, ನಿಷ್ಠಾವಂತ ಕಾರ್ಯಕರ್ತನಾಗಿ ಸುಮ್ಮನಿದ್ದೆ. ಕೊನೆಗೆ ಹೈಕಮಾಂಡ್‌ ಕರೆದು ಸಚಿವ ಸ್ಥಾನ ನೀಡಿತು ಎಂದರು.

ಇನ್ನು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅಸಮಾಧಾನ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್‌, ಅವರಿಗೆ ಸ್ವಲ್ಪ ಸಮಸ್ಯೆಯಾಗಿರುವುದರಿಂದ ಆವೇಶದಲ್ಲಿ ಮಾತನಾಡಿದ್ದಾರೆ. ನನ್ನ ಸ್ನೇಹಿತರಾಗಿರುವುದರಿಂದ ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.

click me!