ಅಧಿವೇಶನದ ಮೊದಲ ದಿನವೇ ಬರ ಪರಿಸ್ಥಿತಿ ಚರ್ಚೆಗೆ ಗೈರಾದ ಸಚಿವರು, ಶಾಸಕರು

Published : Nov 21, 2016, 01:25 PM ISTUpdated : Apr 11, 2018, 12:36 PM IST
ಅಧಿವೇಶನದ ಮೊದಲ ದಿನವೇ ಬರ ಪರಿಸ್ಥಿತಿ ಚರ್ಚೆಗೆ ಗೈರಾದ ಸಚಿವರು, ಶಾಸಕರು

ಸಾರಾಂಶ

ಅಲ್ಲೊಬ್ಬರು, ಇಲ್ಲೊಬ್ಬರು ಕುಳಿತಿದ್ದ ಶಾಸಕರ ಸಮೂಹಕ್ಕೆ ಭಾಷಣ ಮಾಡಿದರು. ಇತ್ತ ಪರಿಷತ್ತಿನಲ್ಲೂ ಇದೇ ಪರಿಸ್ಥಿತಿ ಇತ್ತಾದರೂ ವಿಧಾನಸಭೆಗೆ ಹೋಲಿಸಿದರೆ ಸದಸ್ಯರ ಸಂಖ್ಯೆ ಕೊಂಚ ಹೆಚ್ಚಿತ್ತು. ಆದರೆ ಅಲ್ಲೂ ಗಂಭೀರ ಚರ್ಚೆ ನಡೆದಂತಾಗಲಿಲ್ಲ.

ಸುವರ್ಣ ವಿಧಾನಸೌಧ, ಬೆಳಗಾವಿ (ನ.21): ರಾಜ್ಯ ವಿಧಾನಮಂಡಲದ ಚಳಿಗಾಲದ ಅವೇಶನದ ಮೊದಲ ದಿನವೇ ರಾಜ್ಯ ಎದುರಿಸುತ್ತಿರುವ ಭೀಕರ ಬರ ಪರಿಸ್ಥಿತಿ ಕುರಿತ ಚರ್ಚೆಗೆ ಶಾಸಕ ಮತ್ತು ಸಚಿವರ ಬರ ಹೆಚ್ಚಾಗಿ ಕಂಡು ಬಂದಿತು.

ಉಭಯ ಸದನಗಳಲ್ಲಿ ಸದಸ್ಯರ ಸಂಖ್ಯೆ ತೀರಾ ವಿರಳವಿತ್ತು. ಹಾಗೆಯೇ ಅಕಾರಿಗಳೂ ಬೆರಳೆಣಿಕೆಯಷ್ಟಿದ್ದರು. ಸಣ್ಣ ಕೈಗಾರಿಕೆಗಳ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ವಿವಾಹ ಸಮಾರಂಭದಲ್ಲಿ 10ಕ್ಕೂ ಹೆಚ್ಚು ಮಂದಿ ಸಚಿವರು, 70ಕ್ಕೂ ಅಕ ಶಾಸಕರು ಭಾಗವಹಿಸಿದ್ದರಿಂದ ವಿಧಾನಸಭೆಯಲ್ಲಿ ಖಾಲಿ ಖುರ್ಚಿಗಳೇ ಎದ್ದು ಕಾಣುತ್ತಿತ್ತು. ಆಡಳಿತ ಪಕ್ಷದ ಭಾಗದಲ್ಲಿ ಕೇವಲ 64 ಮಂದಿ ಶಾಸಕರು ಕಾಣಿಸಿದರೆ, ಪ್ರತಿಪಕ್ಷ ಭಾಗದಲ್ಲಿ 67 ಶಾಸಕರು ಇದ್ದರು. ಸಚಿವರ ಪೈಕಿ ಕೇವಲ 15 ಮಂದಿ ಕಂಡರು.

ಸಚಿವರು, ಶಾಸಕರ ಗೈರಿನ ನಡುವೆಯೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ರಾಜ್ಯ ಬರ ಸ್ಥಿತಿ ಕುರಿತು ನಿಲುವಳಿ ಸೂಚನೆ ಮಂಡಿಸಿದರು. ಅಲ್ಲೊಬ್ಬರು, ಇಲ್ಲೊಬ್ಬರು ಕುಳಿತಿದ್ದ ಶಾಸಕರ ಸಮೂಹಕ್ಕೆ ಭಾಷಣ ಮಾಡಿದರು. ಇತ್ತ ಪರಿಷತ್ತಿನಲ್ಲೂ ಇದೇ ಪರಿಸ್ಥಿತಿ ಇತ್ತಾದರೂ ವಿಧಾನಸಭೆಗೆ ಹೋಲಿಸಿದರೆ ಸದಸ್ಯರ ಸಂಖ್ಯೆ ಕೊಂಚ ಹೆಚ್ಚಿತ್ತು. ಆದರೆ ಅಲ್ಲೂ ಗಂಭೀರ ಚರ್ಚೆ ನಡೆದಂತಾಗಲಿಲ್ಲ.

ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು, ಸಚಿವರು, ಶಾಸಕರು ಗೋಕಾಕದ ಮದುವೆಗೆ ತೆರಳಿದ್ದರಿಂದ ಸದನದಲ್ಲಿ ಕಾಣಿಸಬೇಕಾಗಿದ್ದ ಸಂಭ್ರಮ ಗೋಕಾಕದಲ್ಲಿ ಕಾಣುವಂತಾಯಿತು. ವಿವಾಹಕ್ಕೆ ಲಗುಬಗೆಯಿಂದ ತೆರಳಿದ ಕೆಲ ಶಾಸಕರು ಗೋಕಾಕದ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡು ವಧು ವರರನ್ನು ಆಶೀರ್ವದಿಸದೇ ಮರಳಿ ಬಂದ ಪ್ರಸಂಗವೂ ನಡೆಯಿತು.

ಇದೆಲ್ಲದರ ಮಧ್ಯೆ, ವಿಧಾನಸೌಧದ ಹೊರಗಡೆ ರೈತರ ಪ್ರತಿಭಟನೆ ನಡೆದೇ ಇತ್ತು. ಆದರೆ ಸಚಿವರು ಹಾಗೂ ಶಾಸಕರು ಇವೆಲ್ಲವನ್ನು ಬದಿಗೊತ್ತಿ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳಿದರು.

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿ ಮಾತನಾಡಿದರು. ಪರಿಷತ್ತಿನಲ್ಲಿ ನಿಲುವಳಿ ಸೂಚನೆ ಮಂಡಿಸಿ ಈಶ್ವರಪ್ಪ, ಸರ್ಕಾರವನ್ನು ತರಾಟೆಗೆ ತಗೆದುಕೊಂಡರು. ಆದರೆ ಅವರು ಭಾಷಣ ಪೂರ್ಣಗೊಳಿಸಲಿಲ್ಲ. ಬದಲಾಗಿ ಸದಸ್ಯರಾದ ವಿ.ಸೋಮಣ್ಣ ಮತ್ತು ಸೋಮಣ್ಣ ಬೇವಿನ ಮರದ್, ಕಾಂಗ್ರೆಸ್ ವಿ.ಎಸ್. ಉಗ್ರಪ್ಪ ಮಾತನಾಡಿದರು.

ಕೇಂದ್ರಕ್ಕೆ ಸರ್ವಪಕ್ಷ ನಿಯೋಗ

ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷಗಳು ನಡೆಸಿದ ಬರ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬರ ಪರಿಸ್ಥಿತಿ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲು ಸರ್ವಪಕ್ಷ ನಿಯೋಗ ಒಯ್ಯುವುದಾಗಿ ಹೇಳಿದರು. ಬರ ಪರಿಸ್ಥಿತಿ ಕುರಿತು ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಂಡಿಸಿದ್ದ ನಿಲುವಳಿ ಸೂಚನೆ ಚರ್ಚೆ ವೇಳೆ ಉತ್ತರಿಸಿದ ಮುಖ್ಯಮಂತ್ರಿ, ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದೆ. ಕೇಂದ್ರಕ್ಕೆ ವರದಿ ಸಲ್ಲಿಸಲು 15 ದಿನಗಳ ಕಾಲಾವಕಾಶ ಬೇಕೆಂದು ಹೇಳಿದೆ. ತಜ್ಞರ ತಂಡ ವರದಿ ನೀಡಿದ ತಕ್ಷಣ ಕೇಂದ್ರಕ್ಕೆ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಬರ ಪರಿಸ್ಥಿತಿ ಕುರಿತು ಪ್ರಧಾನಿ ಅವರಿಗೆ ಮನವಿ ಸಲ್ಲಿಸೋಣ ಎಂದರು.

ಪ್ರತಿಪಕ್ಷಗಳ ಸಭಾತ್ಯಾಗ

ಭೀಕರ ಬರ ಕುರಿತ ಚರ್ಚೆಗೆ ಸಚಿವರು ಹಾಗೂ ಅಕಾರಿಗಳ ಗೈರು, ಶಾಸಕರ ಬರವೇ ಹೆಚ್ಚಾಗಿದ್ದನ್ನು ಖಂಡಿಸಿ ಸೋಮವಾರ ಪ್ರತಿಪಕ್ಷದ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಸಭಾತ್ಯಾಗ ಮಾಡಿದರು. ಸೋಮಣ್ಣ ಬೇವಿನಮರದ ಚರ್ಚೆ ಆರಂಭಿಸುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಬಸವರಾಜ ಹೊರಟ್ಟಿ, ‘‘ಏನ್ರೀ ಬರಗಾಲದಂಥ ಗಂಭೀರ ವಿಷಯದ ಬಗ್ಗೆ ಚರ್ಚೆ ನಡೆಸುತ್ತಿದ್ದರೆ, ಸಚಿವರೇ ಇಲ್ಲ. ಇದ್ದವರೂ ನಿದ್ದೆ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಕಾರಿಗಳೂ ಇಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಇದೇನಾ ಕಾಳಜಿ?’’ ಎಂದು ಪ್ರಶ್ನಿಸಿದರು. ಐವನ್ ಡಿಸೋಜಾ ಹಾಗೂ ಆಡಳಿತ ಪಕ್ಷದ ಕೆಲವರು ಎದ್ದುನಿಂತು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಆಗ ಕೆರಳಿದ ಈಶ್ವರಪ್ಪ, ‘‘ಸರ್ಕಾರಕ್ಕೆ ರೈತರ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ. ಸಚಿವರು, ಅಕಾರಿಗಳು ಇಲ್ಲದಿದ್ದರೆ ನಾವು ಚರ್ಚೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿ ನಾವು ಸಭಾತ್ಯಾಗ ಮಾಡುತ್ತಿದ್ದೇವೆ’,’’ ಎಂದು ಹೊರ ನಡೆದರು. ಪ್ರತಿಪಕ್ಷಗಳ ಸದಸ್ಯರು ಅವರನ್ನು ಅನುಸರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯರಿಂದ ₹15,000 ಕೋಟಿ ವಿಶೇಷ ಅನುದಾನ: ಅಜಯ್‌ ಧರಂಸಿಂಗ್
ಕೇಂದ್ರದ ಗಾಂಧೀಜಿ ದ್ವೇಷ ಬಯಲಾಗುತ್ತಿದೆ