ಭಾರತದ ಸೈನಿಕರಿಗೆ ಹಾಸನದ ಹಾಲು..!

Published : Jan 17, 2017, 02:51 PM ISTUpdated : Apr 11, 2018, 01:09 PM IST
ಭಾರತದ ಸೈನಿಕರಿಗೆ ಹಾಸನದ ಹಾಲು..!

ಸಾರಾಂಶ

ಹೈನುಗಾರಿಕೆಯು ಗ್ರಾಮೀಣ ಮಹಿಳೆಯರ ಪಾಲಿಗೆ ಆಶಾಕಿರಣ. ರೈತ ಮಹಿಳೆಯರು ಜಾನುವಾರುಗಳ ಸಾಕಣೆ ಮಾಡಿ ತಮ್ಮೂರಲ್ಲಿರುವ ಡೈರಿಗಳಿಗೆ ಹಾಲು ಮಾರಾಟ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೂ ರಾಜ್ಯಾದ್ಯಂತ ಬಹುತೇಕ ಹಾಲು ಒಕ್ಕೂಟಗಳು ನಷ್ಟದ ಹಾದಿ ಹಿಡಿದಿರುವುದು ನಿಜಕ್ಕೂ ವಿಪರ್ಯಾಸ. ಆದರೆ ಹಾಸನ ಹಾಲು ಒಕ್ಕೂಟವು ಇದಕ್ಕೊಂದು ಮಾರ್ಗೋಪಾಯ ಕಂಡುಕೊಂಡಿದೆ.

ರಾಜ್ಯದ ಬಹುತೇಕ ಹಾಲು ಒಕ್ಕೂಟಗಳು ನಷ್ಟಹಾದಿಯತ್ತ ಮುಖ ಮಾಡಿರುವುದಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ಒಕ್ಕೂಟಗಳಿಗೆ ರೈತರಿಂದ ಸರಬರಾಜಾದ ಹಾಲು ಮತ್ತು ಅದರಿಂದ ಉತ್ಪಾದಿಸುವ ಹಾಲಿನ ಪುಡಿ, ಬೆಣ್ಣೆ ಇತ್ಯಾದಿ ಉತ್ಪನ್ನಗಳು ಕಾಲಕಾಲಕ್ಕೆ ಮಾರಾಟವಾಗದಿರುವುದು, ಅಧಿಕ ಆಡಳಿತಾತ್ಮಕ ವೆಚ್ಚದಿಂದ ಒಕ್ಕೂಟಗಳು ನಷ್ಟದತ್ತ ಸಾಗುತ್ತಿವೆ. ಉಳಿದುಕೊಳ್ಳುವ ಹಾಲನ್ನು ದೂರದ ಸೇಲಂ, ಆಂಧ್ರಪ್ರದೇಶದ ಪಲಾರನೇಡಿ, ಮಹಾರಾಷ್ಟ್ರದ ಪುಣೆ ಮತ್ತಿತರ ಕಡೆ ಹಾಲಿನ ಪುಡಿ ಮಾಡಲು ಕಳುಹಿಸಲಾಗುತ್ತಿದೆ. ಸರಬರಾಜು ಮತ್ತಿತರ ವೆಚ್ಚಗಳನ್ನು ಗಮನಿಸಿದರೆ ಹಾಲಿನ ಪುಡಿ ಮಾಡುವುದರಿಂದ ಒಕ್ಕೂಟಗಳಿಗೆ ಹೆಚ್ಚಿನ ನಷ್ಟವಾಗುತ್ತಿದೆ.

ಈ ನಷ್ಟದಿಂದ ತಪ್ಪಿಸಿಕೊಳ್ಳಲು ಹಾಸನ ಹಾಲು ಒಕ್ಕೂಟ ಮಾರ್ಗೋಪಾಯವನ್ನು ಕಂಡುಕೊಂಡಿದೆ. ಅದೇನೆಂದರೆ ದೇಶದ ಗಡಿ ಕಾಯುವ ಸೈನಿಕರಿಗೆ ಹಾಲು ಸರಬರಾಜು ಮಾಡುವುದು. ಹಾಸನ ಒಕ್ಕೂಟವು ದೂರದ ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ನಡುಗುವ ಚಳಿಯಲ್ಲಿ ದೇಶ ಕಾಯುವ ಸೈನಿಕರಿಗೆ ಹಾಲು ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಂಡಿದೆ.

ಏನಿದು ಒಪ್ಪಂದ?: ಭಾರತೀಯ ರಕ್ಷಣಾ ಇಲಾಖೆಗೆ ಸಾಮಾನ್ಯ ಉಷ್ಣ ಮತ್ತು ಅತಿ ಚಳಿಯಲ್ಲಿ 6 ತಿಂಗಳವರೆಗೆ ಇಟ್ಟುಕೊಳ್ಳಬಹುದಾದ ಯುಎಚ್‌ಟಿ ಹಾಲನ್ನು ಸರಬ​ರಾಜು ಮಾಡುವ ಒಪ್ಪಂದವನ್ನು ಹಾಸನ ಹಾಲು ಒಕ್ಕೂಟ ಮಾಡಿಕೊಂಡಿದೆ. ಹಾಲಿನ ವಾರ್ಷಿಕ ಬೇಡಿಕೆ ಪ್ರಮಾಣ​ವನ್ನು National Co-operative Development Federation of India(NCDFI) ಸಂಸ್ಥೆಗೆ ರಕ್ಷಣಾ ಇಲಾಖೆ ನೀಡುತ್ತದೆ.

ಆಗ ಯುಎಚ್‌ಟಿ ಹಾಲಿನ ಸರಬರಾಜು ಮಾಡುವ ಪ್ರಮಾಣ ಮತ್ತು ಬೆಲೆ ನಮೂದಿಸಿ ಎನ್‌ಸಿಡಿಎಫ್‌ಐ ಸಂಸ್ಥೆ ಮೂಲಕ ಸೇನಾ ಇಲಾಖೆಯ ಟೆಂಡರ್‌ನಲ್ಲಿ ಭಾಗವಹಿಸಲಾಗುತ್ತದೆ. ಸಂಬಂಧಪಟ್ಟಸೇನಾ ವಲಯದ ಕಚೇರಿಯಲ್ಲಿ ಎನ್‌ಸಿಡಿಎಫ್‌ಐ ಸಂಸ್ಥೆ ಮತ್ತು ಹಾಲು ಸರಬರಾಜು ಮಾಡುವ ಡೇರಿಗಳ ಸಭೆ ಕರೆದು ಹಾಲು ಸರಬರಾಜಿನ ಬಗ್ಗೆ ಸಹಮತ ನೀಡಿದ ನಂತರ ಹಾಲನ್ನು ಸೇನಾ ವಲಯದ ನಾನಾ ಬೇಸ್‌ ಕ್ಯಾಂಪ್‌ಗಳಿಗೆ ಹಂಚಿಕೆ ಮಾಡಲಾಗುತ್ತದೆ.

ಹಾಸನ ಒಕ್ಕೂಟದ ಅಧ್ಯಕ್ಷರಾಗಿರುವ ಎಚ್‌.ಡಿ. ರೇವಣ್ಣ ಅವರು ಟೆಂಡರ್‌ನಲ್ಲಿ ಭಾಗವಹಿಸಿ ವಾರ್ಷಿಕ 50 ಲಕ್ಷ ಲೀಟರ್‌ಗೂ ಹೆಚ್ಚು ಹಾಲನ್ನು ಸೇನೆಗೆ ಸರಬರಾಜು ಮಾಡುವ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಭಾರತೀಯ ಸೇನೆಗೆ ಹಾಸನ ಹಾಲು ಒಕ್ಕೂಟದಿಂದ ಶೇ. 35 ಜಿಡ್ಡು ಮತ್ತು ಶೇ. 8.5 ಎಸ್‌ಎನ್‌ಎಫ್‌ ಇರುವ ಯುಎಚ್‌ಟಿ ಹಾಲನ್ನು ವಿಶೇಷವಾಗಿ ವಿನ್ಯಾಸಗೊಳಿಸಿರುವ ಪ್ಯಾಕ್‌ನಲ್ಲಿ ತುಂಬಿ ಬಹಳ ದೂರದವರೆಗೆ ಸಾಗಾಣಿಕೆ ಮಾಡಬಹುದಾದ ಕಾರ್ಟೂನ್‌ ಬಾಕ್ಸ್‌ಗಳ ಮೂಲಕ ಸೈನಿಕರಿಗೆ ಕಳುಹಿಸಲಾಗುತ್ತದೆ. ಅಲ್ಲದೇ ರವಾನಿಸುವ ಹಾಲಿನ ಗುಣಮಟ್ಟವನ್ನು ರಾಷ್ಟ್ರೀಯ ಪ್ರಯೋಗಾಲಯ(ಎನ್‌ಎಬಿಎಲ್‌) ಸಂಸ್ಥೆಯಲ್ಲಿ ಪರೀಕ್ಷಿಸಿಕೊಂಡು ಸೇನಾ ಇಲಾಖೆ ನಿಗದಿ ಮಾಡಿದ ಗುಣಮಟ್ಟಇರುವ ಬಗ್ಗೆ ಸರ್ಟಿಫಿಕೇಟ್‌ ಪಡೆದುಕೊಂಡು ಸರಬರಾಜು ಮಾಡಲಾಗುತ್ತದೆ. ಹಾಸನ ಹಾಲು ಒಕ್ಕೂಟದಿಂದ ಅಸ್ಸಾಂ ಗಡಿ ಭಾಗದಲ್ಲಿ ಇರುವ ಲೇಖಾಪಾನಿ ಬೇಸ್‌ ಕ್ಯಾಂಪ್‌ಗೆ ಮೊದಲ ಹಂತದಲ್ಲಿ ಸುಮಾರು 4 ಲಕ್ಷ ಲೀ. ಹಾಲು ಸರಬರಾಜು ಮಾಡಲಾಗಿದೆ.

ರೈತ ಮಹಿಳೆಯರಿಗೆ ಖುಷಿ:
ಪ್ರತಿ ಹಂತದಲ್ಲೂ ಹಾಲಿನ ಗುಣಮಟ್ಟಕಾಪಾಡಿಕೊಂಡು ಸಂಸ್ಕರಣೆ ಮಾಡಿ ದೇಶದ ಭದ್ರತೆಗೆ ರಕ್ಷಣೆ ನೀಡುತ್ತಿರುವ ಯೋಧರಿಗ ಹಾಲು ಸರಬರಾಜು ಮಾಡಿ ನಷ್ಟದ ಹಾದಿ ತಪ್ಪಿಸಿಕೊಂಡು ಲಾಭದತ್ತ ಸಾಗುತ್ತಿದೆ. ಬಂದ ಲಾಭಾಂಶವನ್ನು ಉತ್ಪಾದಕರಿಗೆ ನೀಡಲಾಗುತ್ತಿದೆ. ಸೈನಿಕರಿಗೆ ಹಾಲು ಸರಬರಾಜು ಮಾಡುತ್ತಿರುವುದ ರಿಂದ ಹಾಲು ಉಳಿದುಕೊಂಡು ಪುಡಿ ಮಾಡಲು ಕಳುಹಿಸುವುದನ್ನು ನಿಲ್ಲಿಸಲಾಗಿದೆ. ಅಲ್ಲದೇ ರೈತರಿಂದ ಹೆಚ್ಚಿನ ಹಾಲನ್ನು ಖರೀದಿ ಮಾಡಲಾಗುತ್ತಿದೆ. ಹಿಂದೆ ಹಾಲು ಸರಬರಾಜು ಹೆಚ್ಚಾದರೆ ಹಾಲನ್ನು ಹೆಚ್ಚಿಗೆ ಖರೀದಿಸುವುದನ್ನು ಕಡಿಮೆ ಮಾಡಲಾಗುತ್ತಿತ್ತು. ಒಟ್ಟಾರೆ ರೈತ ಮಹಿಳೆಯರ ಪಾಲಿಗೆ ನೆಮ್ಮದಿ ತರುವ ಸಂಗತಿ.

ಹಾಸನ ಒಕ್ಕೂಟದಿಂದ ಸರಬರಾಜು ಮಾಡಿದ ಹಾಲಿನ ಗುಣಮಟ್ಟಅತ್ಯುತ್ತಮವಾಗಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸರಬರಾಜು ಮಾಡುವಂತೆ ರಕ್ಷಣಾ ಇಲಾಖೆ ಕೋರಿದೆ. ಯುಎಚ್‌ಟಿ ಹಾಲಿನ ಘಟಕ ಆರಂಭಿಸಲಾಗಿದೆ. ರಕ್ಷಣಾ ಇಲಾಖೆ ಕೇಳಿದಷ್ಟುಹಾಲನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನಷ್ಟಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು
- ಗೋಪಾಲ್‌, ವ್ಯವಸ್ಥಾಪಕರು, ಹಾಸನ ಒಕ್ಕೂಟ

ಹಾಲಿನ ಪುಡಿ ಮಾಡಲು ಸಿಕ್ಕಾಪಟ್ಟೆಖರ್ಚು ತಗಲುತ್ತಿತ್ತು. ಇದರಿಂದ ಒಕ್ಕೂಟಕ್ಕೆ ಸಾಕಷ್ಟುಪ್ರಮಾಣದಲ್ಲಿ ಹೊರೆಯಾಗುತ್ತಿತ್ತು. ಸೇನೆ ಜತೆ ಮಾಡಿಕೊಂಡಿರುವ ಹಾಲು ಪೂರೈಕೆ ಒಪ್ಪಂದವು ಒಕ್ಕೂಟವನ್ನು ನಷ್ಟದ ಹಾದಿ ತಪ್ಪಿಸಲು ಸಹಕಾರಿಯಾಗಿದೆ. ಲಾಭದತ್ತ ಕೊಂಡೊಯ್ಯಲು ದಿಟ್ಟಹೆಜ್ಜೆಯಾಗಿದೆ
- ಎಚ್‌ ಡಿ ರೇವಣ್ಣ, ಅಧ್ಯಕ್ಷರು, ಹಾಸನ ಹಾಲು ಒಕ್ಕೂಟ

(epaper.kannadaprabha.in)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವೇಶ್ವರಯ್ಯ ಟರ್ಮಿನಲ್‌ ರೈಲು ನಿಲ್ದಾಣ ವಿಸ್ತರಣೆ ಕಾರ್ಯ ಆರಂಭ: ಪ್ರಯಾಣಿಕರು ಕಾಯುವ ದುಸ್ಥಿತಿ
Kodagu: ಧಗಧಗಿಸಿ ಹೊತ್ತಿ ಉರಿದ 25 ಪ್ರಯಾಣಿಕರಿದ್ದ ಖಾಸಗಿ ಬಸ್