ನೋಟು ಅಮಾನ್ಯ ಮಹಾದುರಂತದ ನಿರ್ಧಾರ

By Suvarna Web DeskFirst Published Dec 9, 2016, 3:39 PM IST
Highlights

ದೇಶದ ಶೇ. 90ರಷ್ಟು ಕಾರ್ಮಿಕ ವರ್ಗ ನಗದು ರೂಪದಲ್ಲಿ ವೇತನ ಪಡೆಯುತ್ತಾರೆ. ಸುಮಾರು 60 ಕೋಟಿಗೂ ಅಧಿಕ ಮಂದಿಗೆ ಯಾವುದೇ ಬ್ಯಾಂಕ್‌'ಗಳಿಲ್ಲ. ಇಂಥ ನಗದನ್ನು ಕಪ್ಪು ಹಣವೆಂದು ಬಣ್ಣಿಸಿರುವುದನ್ನು ಸಿಂಗ್ ಖಂಡಿಸಿದ್ದಾರೆ.

ನವದೆಹಲಿ(ಡಿ.09): ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ನಿರ್ಧಾರ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೋಟು ಅಮಾನ್ಯ ನಿರ್ಧಾರ ಒಂದು ‘ಮಹಾ ದುರಂತ’, ಇದು ನಗದು ಸಂಪಾದಿಸುವ ಜನತೆಯ ಮೇಲೆ ಗಂಭೀರ ಗಾಯವಾಗಿ ಪರಿಣಮಿಸಲಿದೆ ಎಂದು ಸಿಂಗ್ ಹೇಳಿದ್ದಾರೆ. ಅವರು ‘ದ ಹಿಂದೂ’ಗೆ ಬರೆದಿರುವ ಲೇಖನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಅಪ್ರಾಮಾಣಿಕ ಮತ್ತು ಕಪ್ಪು ಹಣ ಹೊಂದಿರುವವರು ಯಾವುದೇ ಕಠಿಣ ಶಿಕ್ಷೆಯಾಗದೆ, ತೊಂದರೆಯೂ ಆಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದೊಂದು ದುಡುಕಿನ ನಿರ್ಧಾರ, ಇದರಿಂದಾಗಿ ಬಿಜೆಪಿ ನೇತೃತ್ವದ ಎನ್‌'ಡಿಎ ಸರ್ಕಾರದ ಮೇಲೆ ನೂರಾರು ಜನರು ಇಟ್ಟಿದ್ದ ನಂಬಿಕೆ ಭಗ್ನವಾಗಿದೆ. ನೋಟು ಅಮಾನ್ಯ ನಿರ್ಧಾರಕ್ಕೆ ಎರಡು ಕಾರಣ ನೀಡಲಾಗಿದೆ. ಒಂದು ಗಡಿಯಾಚೆಗಿನ ಶತ್ರುಗಳು ನಕಲಿ ನೋಟು ಬಳಸುವುದನ್ನು ತಡೆಯುವುದು ಮತ್ತು ಎರಡನೇಯದಾಗಿ ಭ್ರಷ್ಟಾಚಾರ ಕಪ್ಪುಹಣದ ಬಿಗಿತ ಸಡಿಲಗೊಳಿಸುವುದಾಗಿದೆ. ಆದರೆ ಅದಕ್ಕಾಗಿ ಎಲ್ಲ ನಗದನ್ನು ಕಪ್ಪುಹಣ ಮತ್ತು ಕಪ್ಪು ಹಣವೆಲ್ಲ ನಗದು ರೂಪದಲ್ಲಿದೆ ಎಂಬ ಭಾವನೆ ತಪ್ಪು, ಅಲ್ಲದೆ ಅದು ನೈಜತೆಯಿಂದ ದೂರವಾದುದು ಎಂದು ಸಿಂಗ್ ಹೇಳಿದ್ದಾರೆ.

ದೇಶದ ಶೇ. 90ರಷ್ಟು ಕಾರ್ಮಿಕ ವರ್ಗ ನಗದು ರೂಪದಲ್ಲಿ ವೇತನ ಪಡೆಯುತ್ತಾರೆ. ಸುಮಾರು 60 ಕೋಟಿಗೂ ಅಧಿಕ ಮಂದಿಗೆ ಯಾವುದೇ ಬ್ಯಾಂಕ್‌'ಗಳಿಲ್ಲ. ಇಂಥ ನಗದನ್ನು ಕಪ್ಪು ಹಣವೆಂದು ಬಣ್ಣಿಸಿರುವುದನ್ನು ಸಿಂಗ್ ಖಂಡಿಸಿದ್ದಾರೆ. ಪ್ರಧಾನಿಯವರ ಈ ನಿರ್ಧಾರ ಮೂಲಭೂತ ಕರ್ತವ್ಯದ ಅಣಕವೆಂದು ಅವರು ಹೇಳಿದ್ದಾರೆ.      

click me!