ಡಬ್ಲ್ಯೂಎಚ್‌ಒ ಹೆಸರಲ್ಲಿ ವಂಚನೆ: ಇಬ್ಬರ ಬಂಧನ

By Kannadaprabha NewsFirst Published Aug 25, 2019, 12:27 PM IST
Highlights

ಡಬ್ಲ್ಯೂಎಚ್‌ಒ ಹೆಸರಲ್ಲಿ ವಂಚನೆ: ಇಬ್ಬರ ಬಂಧನ | ಉದ್ಯೋಗ ಕೊಡಿಸುವ ನೆಪದಲ್ಲಿ ಲಕ್ಷಾಂತರ ಮೊತ್ತ ಗುಳುಂ | ಕಾಶ್ಮೀರ ಮೂಲದವನ ವಶ | ದೇಶಾದ್ಯಂತ ಇಂತಹ ಕೃತ್ಯ ಶಂಕೆ

 ಮಂಗಳೂರು (ಆ. 25): ಕೇಂದ್ರ ತನಿಖಾ ತಂಡದ ಹೆಸರು ಹೇಳಿ ದರೋಡೆ ನಡೆಸುತ್ತಿದ್ದ ಖದೀಮರು ಬಲೆಗೆ ಬಿದ್ದ ಬೆನ್ನಲ್ಲೇ, ಅಂತಹದ್ದೇ ಮತ್ತೊಂದು ದೊಡ್ಡ ವಂಚನಾ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದು ಕರಾವಳಿಯನ್ನು ಬೆಚ್ಚಿ ಬೀಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಜಾಲದ ರೂವಾರಿ ಜಮ್ಮು ಕಾಶ್ಮೀರ ನಿವಾಸಿ ಶೌಕತ್‌ ಅಹ್ಮದ್‌ ಲೋನೆ ಯಾನೆ ಬಸೀತ್‌ ಷಾ, ಈತನ ಸಹಚರ ಬಲ್ವಿಂದರ್‌ ಸಿಂಗ್‌ ಬಂಧಿತರು. ಶೌಕತ್‌ ಅಹ್ಮದ್‌ ಲೋನೆ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಈಗಾಗಲೇ ದರೋಡೆ, ವಂಚನೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಈ ಬಗ್ಗೆ ಮಾಹಿತಿ ನೀಡಿದರು. ಆ.17ರಂದು ನಗರದ ಪಿವಿಎಸ್‌ ವ್ಯಾಪ್ತಿಯಲ್ಲಿ ಡಬ್ಲ್ಯೂಎಚ್‌ಒ(ವಿಶ್ವ ಆರೋಗ್ಯ ಸಂಸ್ಥೆ) ಹೆಸರಿನ ನಾಮಫಲಕ ಹೊಂದಿದ ಕೇಂದ್ರ ಸರ್ಕಾರದ ಸ್ಟಿಕ್ಕರ್‌ ಅಳವಡಿಸಿರುವ ಪಂಜಾಬ್‌ ರಾಜ್ಯದ ನೋಂದಣಿಯ ಚಾಕಲೇಟ್‌ ಬಣ್ಣದ ಕಾರು ಸಂಚರಿಸುತ್ತಿರುವ ಬಗ್ಗೆ ಕಂಟ್ರೋಲ್‌ ರೂಂಗೆ ಮಾಹಿತಿ ಲಭಿಸಿತ್ತು. ಈ ಕಾರನ್ನು ಬಳ್ಳಾಲ್‌ಬಾಗ್‌ ಬಳಿ ತಡೆದು ನಿಲ್ಲಿಸಿದ ಪೊಲೀಸರು ಇವರಿಬ್ಬರನ್ನು ಬಂಧಿಸಿರುವುದಾಗಿ ತಿಳಿಸಿದರು.

ಡಬ್ಲ್ಯೂಎಚ್‌ಒ ನಕಲಿ ಐಡಿ ಕಾರ್ಡ್‌:

ಡಬ್ಲ್ಯೂಎಚ್‌ಒ ಹೆಸರಿನ ಐಟಿ ಕಾರ್ಡ್‌ ಇಟ್ಟುಕೊಂಡಿದ್ದ ಶೌಕತ್‌ ಬಳಿ ತಾನು ಡಬ್ಲ್ಯೂಎಚ್‌ಒ ನಿರ್ದೇಶಕ ಎಂದು ಹೇಳಿ ಉದ್ಯೋಗ ನೀಡುವುದಾಗಿ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದನು. ಜೊತೆಗೆ ತಾನೊಬ್ಬ ವೈದ್ಯನೆಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಹೇಳಿ ಮಹಿಳೆಯರಿಗೆ ಮೋಸ ಮಾಡುತ್ತಿದ್ದ. ಇದೀಗ ಬಂಧಿತ ಇವರಿಬ್ಬರ ವಿರುದ್ಧ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪೊಲೀಸ್‌ ಕಾಯ್ದೆ 56/2019 ಕಲಂ 170, 171, 419, 420 ಜೊತೆಗೆ 34 ಐಪಿಸಿ ಮತ್ತು ಕಲಂ 7 ಕೇಂದ್ರ ಸರ್ಕಾರದ ಮೊಹರು ದುರ್ಬಳಕೆ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ.

click me!