ಇಂಟರ್‌ಸಿಟಿ ರೈಲಿನಲ್ಲಿ ಕೊಳಚೆ ನೀರಿನ ಚಾಯ್‌!

By Web DeskFirst Published Jul 18, 2019, 9:52 AM IST
Highlights

ಮಂಗಳೂರು-ಮಡಂಗಾವ್ ಇಂಟರ್‌ಸಿಟಿ ರೈಲಿನಲ್ಲಿ ಕೊಳಚೆ ನೀರಿನ ಚಾಯ್‌!  ಚಹಾ ಮಾರುವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ರೈಲ್ವೇ ಅಧಿಕಾರಿಗಳು 

ಮಂಗಳೂರು (ಜು. 18): ಚಹಾ ತುಂಬಿದ ಪಾತ್ರೆ ನೆಲಕ್ಕೆ ಬಿದ್ದು, ಪಾತ್ರೆಯೊಳಗೆ ಕೊಳಚೆ ನೀರು ತುಂಬಿದರೂ ಅದನ್ನು ಪ್ರಯಾಣಿಕರಿಗೆ ವಿತರಿಸಲು ಮುಂದಾದ ಆತಂಕಕಾರಿ ಘಟನೆ ಮಂಗಳೂರು- ಮಡಗಾಂವ್‌ ಇಂಟರ್‌ಸಿಟಿ ರೈಲಿನಲ್ಲಿ ಬುಧವಾರ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗಡೆ ಮುತುವರ್ಜಿ ವಹಿಸಿದ್ದರಿಂದ ರೈಲ್ವೆ ಅಧಿಕಾರಿಗಳು ಚಹಾ ಮಾರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಎಂ.ಜಿ.ಹೆಗಡೆ ಬುಧವಾರ ಸುರತ್ಕಲ್‌ನಲ್ಲಿ ಈ ರೈಲು ಹತ್ತಿದ್ದರು. ಈ ವೇಳೆ ಇನ್ನೊಂದು ರೈಲಿನಿಂದ ಚಹಾ ತುಂಬಿದ ಪಾತ್ರೆಗಳನ್ನು ವ್ಯಕ್ತಿಯೊಬ್ಬ ಇಳಿಸುತ್ತಿದ್ದಾಗ ಒಂದು ಪಾತ್ರೆ ಕೆಳಗೆ ಬಿದ್ದು, ಕೊಳಚೆ ನೀರು ಅದರೊಳಗೆ ತುಂಬಿತ್ತು.

ಇದನ್ನು ರೈಲಿನಲ್ಲಿದ್ದ ಕಲ್ಲಡ್ಕದ ವ್ಯಕ್ತಿಯೊಬ್ಬರು ಗಮನಿಸಿ ಫೋಟೋ ಮತ್ತು ವಿಡಿಯೋ ಮಾಡಿದ್ದರು. ಬಳಿಕ ಚಹಾ ಮಾರುವ ವ್ಯಕ್ತಿ ಕೊಳಚೆ ತುಂಬಿದ ಪಾತ್ರೆಯ ಚಹಾವನ್ನು ಚೆಲ್ಲದೆ ಮಾರಾಟಕ್ಕೆ ಸಿದ್ಧನಾಗಿದ್ದ. ನೋಡಿದರೆ ಆ ಪಾತ್ರೆಯಲ್ಲಿ ಕೊಳಕು ನೀರಿನೊಂದಿಗೆ ಸೇರಿಬಂದ ಗುಟ್ಕಾ ಪ್ಯಾಕೆಟ್‌ ಕೂಡ ಇತ್ತು!

ತಕ್ಷಣ ಎಂ.ಜಿ.ಹೆಗಡೆ ಸಂಬಂಧಿಸಿದ ರೈಲ್ವೆ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ರೈಲು ಉಡುಪಿ ನಿಲ್ದಾಣಕ್ಕೆ ಹೋದಾಗ ರೈಲ್ವೆ ಅಧಿಕಾರಿಗಳು ಚಹಾ ಮಾರುವ ವ್ಯಕ್ತಿ ಸೇರಿದಂತೆ ಸಹಿತ ಕೊಳಚೆ ಚಹಾವನ್ನೂ ವಶಕ್ಕೆ ತೆಗೆದುಕೊಂಡರು.

click me!