
ಮಂಗಳೂರು: ಅತಿ ಕೋಮು ಸೂಕ್ಷ್ಮ ಪ್ರದೇಶ ಎಂಬ ಕುಖ್ಯಾತಿಗೆ ಒಳಗಾಗಿರುವ, 43 ದಿನಗಳಿಂದ ನಿಷೇಧಾಜ್ಞೆ ಜಾರಿಯಾಗಿರುವ ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ ಎಂದು ಪಶ್ಚಿಮ ವಲಯ ಪೊಲೀಸ್ ಐಜಿ ಹರಿಶೇಖರನ್ ಹೇಳಿದ್ದಾರೆ. ನಿನ್ನೆಯವರೆಗೂ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದ ಕರಾವಳಿ ಪ್ರದೇಶದಲ್ಲಿ ಇಂದು ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಸುಮಾರು ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಮೇ 26ರಂದು ಕ್ಷುಲ್ಲಕ ವಿಚಾರಕ್ಕೆ ಯುವಕರಿಬ್ಬರಿಗೆ ಚೂರಿ ಇರಿದ ಘಟನೆಯ ಬಳಿಕ ಕಲ್ಲಡ್ಕ ಪರಿಸರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 27ರಂದು ಬಂಟ್ವಾಳ ತಾಲೂಕಿನಾದ್ಯಂತ ನಿಷೇಧಾಜ್ಞೆಯನ್ನು ಜಾರಿಯಾಗಿತ್ತು. ನಿಷೇಧಾಜ್ಞೆ ನಡುವೆಯೂ ಕೊಲೆ, ಕೊಲೆಯತ್ನ, ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಗಳು ಮರುಕಳಿಸಿದ್ದರಿಂದ ನಿಷೇಧಾಜ್ಞೆ ಒಂದೊಂದೇ ವಾರ ವಿಸ್ತರಣೆಯಾಗುತ್ತಾ ಬಂತು. ಈಗ ಮಂಗಳೂರು ನಗರ ಹೊರತುಪಡಿಸಿ ಜು.11ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ.
2 ತಿಂಗಳಲ್ಲಿ ಐವರಿಗೆ ಚೂರಿ ಇರಿತ:
ಎರಡು ತಿಂಗಳಿನಿಂದ ಕಲ್ಲಡ್ಕದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಚೂರಿ ಇರಿತದ ಘಟನೆಯ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಮೇ 26ರಂದು ಜುನೈದ್ ಎಂಬಾತನ ಮೇಲೆ ಹಲ್ಲೆ ಪ್ರಕರಣದ ಬಳಿಕ 27ರಂದು ಕಲ್ಲಡ್ಕ ಪೇಟೆ ಬಂದ್ ಆಗಿತ್ತು. ಜೂ. 13ರಂದು ಖಲೀಲ್ ಮತ್ತು ಪುಷ್ಪರಾಜ್ ಶೆಟ್ಟಿ ಎಂಬವರ ಮಧ್ಯೆ ಪರಸ್ಪರ ಚೂರಿ ಇರಿತದ ಪ್ರಕರಣ ನಡೆದಿತ್ತು. ಜೂ.21ರಂದು ಬೆಂಜನಪದವಿನಲ್ಲಿ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್ ಎಂಬವರ ಕೊಲೆ ನಡೆದಿತ್ತು. ಜು.4ರಂದು ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಎಂಬಾತನಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ. ಶನಿವಾರ ಗುರುಪುರ ಕೈಕಂಬದಲ್ಲಿ ರಿಯಾಜ್ ಎಂಬಾತನಿಗೆ ಇರಿತದ ಘಟನೆ ವರದಿಯಾಗಿದೆ. ಎರಡು ತಿಂಗಳ ಹಿಂದೆ ಕನ್ಯಾನದಲ್ಲಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಎಂಬವರ ಹತ್ಯೆ ನಡೆಯುವುದರೊಂದಿಗೆ ಬಂಟ್ವಾಳ ಹಾಗೂ ಕಲ್ಲಡ್ಕದಲ್ಲಿ ಕೋಮು ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು.
ಈ ನಡುವೆ, ಕಲಾಯಿ ನಿವಾಸಿ ಮುಹಮ್ಮದ್ ಅಶ್ರಫ್ ಕೊಲೆ ಪ್ರಕರಣದ ಬಳಿಕ ಬಂಟ್ವಾಳ ತಾಲೂಕಿನಲ್ಲಿ ಪರಿಸ್ಥಿತಿ ಹದೆಗಟ್ಟಿದ್ದರಿಂದ ಹೆಚ್ಚಿನ ಭದ್ರತೆಗಾಗಿ ಕೆಎಸ್‌ಆರ್‌ಪಿ ಪಡೆ, ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸರನ್ನು ಬಂಟ್ವಾಳಕ್ಕೆ ಕರೆಸಲಾಗಿದೆ. ಆದರೂ ಅಹಿತಕರ ಘಟನೆ ನಿಂತಿಲ್ಲ.
ಸರ್ಜರಿಯಾದರೂ ಫಲಕಾರಿಯಾಗಿಲ್ಲ: ಬಂಟ್ವಾಳ ತಾಲೂಕಿನಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಮೇಜರ್ ಸರ್ಜರಿ ನಡೆಸಿತ್ತು. ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊಸಬರನ್ನು ನೇಮಕ ಮಾಡಿದ್ದರೆ ಇನ್ನು ಕೆಲವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು.
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.