ಸಾಲು ಮರದ ತಿಮ್ಮಕ್ಕ ಸಾವು ವದಂತಿ ಹಬ್ಬಿಸಿದವ ಬಂಧನ

First Published May 30, 2018, 10:01 AM IST
Highlights

ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ಅವರ ಸಾವಿನ ಬಗ್ಗೆ ವದಂತಿ ಹಬ್ಬಿಸಿದ್ದ ಆರೋಪದ ಮೇರೆಗೆ ಕ್ಯಾಬ್ ಚಾಲಕನೊಬ್ಬನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು: ನಾಡೋಜ ಡಾ.ಸಾಲು ಮರದ ತಿಮ್ಮಕ್ಕ ಅವರ ಸಾವಿನ ಬಗ್ಗೆ ವದಂತಿ ಹಬ್ಬಿಸಿದ್ದ ಆರೋಪದ ಮೇರೆಗೆ ಕ್ಯಾಬ್ ಚಾಲಕನೊಬ್ಬನನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ನಗರ ತಾಲೂಕಿನ ಪ್ರದೀಪ್‌ಗೌಡ ಬಂಧಿತ.

ಆರೋಪಿಯನ್ನು ಬಂಧಿಸಿದ ಪೊಲೀಸರು ಬಳಿಕ ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆಗೊಳಿಸಿದ್ದಾರೆ. ನಾಲ್ಕು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಾಲು ಮರದ ತಿಮ್ಮಕ್ಕ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.  ಈ ಸುಳ್ಳು ವದಂತಿಯನ್ನು ಗಂಭೀರವಾಗಿ ಪರಿಗಣಿಸಿದ ತಿಮ್ಮಕ್ಕ ಅವರ ದತ್ತು ಪುತ್ರ ಉಮೇಶ್, ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. 

ಅದರಂತೆ ತನಿಖೆ ನಡೆಸಿ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.  ಫೇಸ್‌ಬುಕ್‌ನಲ್ಲಿ ‘ಪ್ರದೀಪ್ ಗೌಡ ರತ್ನ’ ಹೆಸರಿನಲ್ಲಿ ಖಾತೆ ಹೊಂದಿರುವ ಆರೋಪಿ, ಇದೇ ತಿಂಗಳ 25 ರಂದು ‘ಮನಸುಗಳ ಮಾತು ಮಧುರ’ ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಸಾಲು ಮರದ ತಿಮ್ಮಕ್ಕ ಅವರ ಸಾವಿನ ಕುರಿತ ಸುಳ್ಳು ವದಂತಿಯನ್ನು ಅಪ್‌ಲೋಡ್ ಮಾಡಿದ್ದ. 

ಬಳಿಕ ಅದನ್ನು ತನ್ನ ಖಾತೆಯಿಂದ ಸ್ನೇಹಲೋಕ ಎಂಬ ಮತ್ತೊಂದು ಫೇಸ್‌ಬುಕ್ ಗ್ರೂಪ್‌ಗೆ ಪೋಸ್ಟ್ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ಈ ಪ್ರಕರಣ ಸಂಬಂಧ ಮನಸುಗಳ ಮಾತು ಮಧುರ ಗ್ರೂಪ್ ಸದಸ್ಯರನ್ನು ಸಹ ವಿಚಾರಣೆ  ನಡೆಸ ಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!