ಖರ್ಗೆ ಹಠಾತ್‌ ದೆಹಲಿಗೆ: ಕಾರಣವೇನು..?

By Web DeskFirst Published Jun 12, 2019, 8:28 AM IST
Highlights

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ದಿಢೀರ್ ದಿಲ್ಲಿಗೆ ಪ್ರಯಾಣಿಸಿದ್ದಾರೆ. ಈ ಪ್ರಯಾಣದ ಹಿಂದಿನ ಕಾರಣವೇನು ಎನ್ನುವುದು ಕುತೂಹಲ ಮೂಡಿಸಿದೆ.

ಬೆಂಗಳೂರು :  ಕಾಂಗ್ರೆಸ್‌ ಹೈಕಮಾಂಡ್‌ ಬುಲಾವ್‌ ಮೇರೆಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಹಠಾತ್‌ ದೆಹಲಿಗೆ ತೆರಳಿದ್ದಾರೆ. ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ ಬೆನ್ನಲ್ಲೇ ಹೈಕಮಾಂಡ್‌ ಖರ್ಗೆ ಅವರನ್ನು ದೆಹಲಿಗೆ ಕರೆಸಿಕೊಂಡಿರುವುದು ಕುತೂಹಲ ಮೂಡಿಸಿದೆ.

 ಮೂಲಗಳ ಪ್ರಕಾರ, ದೇವೇಗೌಡ ಅವರು ಸಮ್ಮಿಶ್ರ ಸರ್ಕಾರದ ಸುಗಮ ಕಾರ್ಯ ನಿರ್ವಹಣೆ ಹಾಗೂ ಸಂಪುಟ ಪುನಾರಚನೆ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ನಿಲುವು ಹೊಂದಿದ್ದು, ಅನಗತ್ಯ ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ. 

ಇದರಿಂದ ಸಮ್ಮಿಶ್ರ ಸರ್ಕಾರದ ಕಾರ್ಯ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ದೂರಿದ್ದರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಸ್ತುಸ್ಥಿತಿಯನ್ನು ಅರಿಯುವ ಉದ್ದೇಶದಿಂದ ಖರ್ಗೆ ಅವರಿಗೆ ಬುಲಾವ್‌ ನೀಡಿರಬಹುದು ಎನ್ನಲಾಗುತ್ತಿದೆ. ಇದೇ ವೇಳೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ ರಾಜೀನಾಮೆಯನ್ನು ರಾಹುಲ್‌ ಗಾಂಧಿ ಹಿಂಪಡೆಯಲು ನಿರಾಕರಿಸಿರುವುದರಿಂದ ತಾತ್ಕಾಲಿಕ ಅಧ್ಯಕ್ಷರ ನೇಮಕ ಮಾಡುವ ಉದ್ದೇಶವೂ ಹೈಕಮಾಂಡ್‌ಗೆ ಇದೆ ಎನ್ನಲಾಗುತ್ತಿದೆ.

click me!