ಅದ್ದೂರಿ ಮಹಾಮಜ್ಜನ ಕಾರ್ಯಕ್ರಮಕ್ಕೆ ಚಾಲನೆ

Published : Feb 08, 2018, 07:28 AM ISTUpdated : Apr 11, 2018, 12:58 PM IST
ಅದ್ದೂರಿ ಮಹಾಮಜ್ಜನ ಕಾರ್ಯಕ್ರಮಕ್ಕೆ ಚಾಲನೆ

ಸಾರಾಂಶ

ವಿಶ್ವಪ್ರಸಿದ್ಧ ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್‌ ಬಾಹುಬಲಿಸ್ವಾಮಿಯ 88ನೇ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬುಧವಾರ ಅದ್ಧೂರಿ ಚಾಲನೆ ನೀಡಿದರು.

ಶ್ರವಣಬೆಳಗೊಳ : ವಿಶ್ವಪ್ರಸಿದ್ಧ ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್‌ ಬಾಹುಬಲಿಸ್ವಾಮಿಯ 88ನೇ ಮಹಾಮಸ್ತಕಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಬುಧವಾರ ಅದ್ಧೂರಿ ಚಾಲನೆ ನೀಡಿದರು. ಇಲ್ಲಿನ ಚಾವುಂಡರಾಯ ವೇದಿಕೆಯಲ್ಲಿರಿಸಿದ್ದ ಬೆಳ್ಳಿರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಬಾಹುಬಲಿ ಮೂರ್ತಿಯನ್ನು ಅನಾವರಣಗೊಳಿಸಿದ ರಾಷ್ಟ್ರಪತಿಗಳು ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಹಾಮಸ್ತಕಾಭಿಷೇಕದ ಮಹೋತ್ಸವವನ್ನು ಉದ್ಘಾಟಿಸಿದರು.

ಶ್ರವಣಬೆಳಗೊಳ ಮಠದ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನೇತೃತ್ವದಲ್ಲಿ ಅತ್ಯಂತ ವೈಭವಯುತವಾಗಿ ಮತ್ತು ವರ್ಣರಂಚಿತವಾಗಿ ನಡೆದ ಕಾರ್ಯಕ್ರಮಕ್ಕೆ ದೇಶದ ಮೂಲೆಮೂಲೆಯಿಂದ ಆಗಮಿಸಿದ್ದ ನೂರಾರು ಆಚಾರ್ಯಮುನಿಗಳು, ಶ್ರಾವಕಿಯರು ಸಾಕ್ಷಿಯಾದರು. ಈ ಹಿಂದಿನ ಮಹಾಮಸ್ತಕಾಭಿಷೇಕಗಳ ಉದ್ಘಾಟನಾ ಸಮಾರಂಭಗಳಿಗೆ ರಾಷ್ಟ್ರಪತಿಗಳಷ್ಟೇ ಬಂದಿದ್ದರೆ ಈ ಬಾರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಪತ್ನಿಕರಾಗಿ ವೇದಿಕೆಯೇರಿದ್ದು ವಿಶೇಷವಾಗಿತ್ತು. ಅವರ ಪತ್ನಿ ಸವಿತಾ ಸಹ ಜೊತೆಗಿದ್ದರು.

ಕನ್ನಡದಲ್ಲೇ ಭಾಷಣ ಪ್ರಾರಂಭ: ಬಳಿಕ ಭಾಷಣ ಮಾಡಿದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ‘ಸಹೋದರ, ಸಹೋದರಿಯರೇ ಎಲ್ಲರಿಗೂ ನನ್ನ ನಮಸ್ಕಾರಗಳು’’ ಎಂದು ಕನ್ನಡದಲ್ಲಿ ಮಾತು ಪ್ರಾರಂಭಿಸಿದಾಗ ಸಭಾಸದರು ಚಪ್ಪಾಳೆ ತಟ್ಟಿಸ್ವಾಗತಿಸಿದರು.

ಶಾಂತಿ, ಕರುಣೆ, ಮಾನವೀಯತೆ, ಸಹೋದರತ್ವ, ಅಹಿಂಸೆಯ ಪ್ರತೀಕವಾಗಿರುವ ಬಾಹುಬಲಿ ಭವ್ಯ ಪ್ರತಿಮೆ ನೋಡಿ ನಾನು ಕೃತಾರ್ಥನಾಗಿದ್ದೇನೆ. ವಿಂಧ್ಯಗಿರಿ ಬೆಟ್ಟದ ಮೇಲಿರುವ ಏಕಶಿಲಾ ಮೂರ್ತಿ ಬಾಹುಬಲಿ ಕೇವಲ ನಿರ್ಜೀವ ಕಲ್ಲಲ್ಲ, ಶಾಂತಿ, ಹಿಂಸೆ, ತ್ಯಾಗದ ಸಾಕಾರ ಮೂರ್ತಿ. ನಾನಾ ಭಾಷೆ, ಭೌಗೋಳಿಕತೆಯನ್ನು ಹೊಂದಿರುವ ವಿಭಿನ್ನತೆಯುಳ್ಳ ದೇಶವಾದ ಭಾರತವೂ ಸೇರಿದಂತೆ ವಿಶ್ವಾದ್ಯಂತ ಏಕತೆ ಮತ್ತು ಶಾಂತಿ ನೆಲಸಲು ಬಾಹುಬಲಿಯ ಸಂದೇಶಗಳನ್ನು ಸಾರಬೇಕಾಗಿದೆ ಎಂದರು.

ಪ್ರಾಚೀನ ಭಾರತವನ್ನಾಳಿದ ಸಾಮ್ರಾಟ ಚಂದ್ರಗುಪ್ತ ಮೌರ್ಯ ಕೂಡ ತಮ್ಮ ಸಾಮ್ರಾಜ್ಯವನ್ನು ತ್ಯಾಗಮಾಡಿ ಚಂದ್ರಗಿರಿಯಲ್ಲಿ ತ್ಯಾಗಿಗಳಾಗಿ ದೀಕ್ಷೆ ಸ್ವೀಕರಿಸಿ ಅಲ್ಲಿಯೇ ಸಲ್ಲೇಖನ ವೃತ ಸ್ವೀಕರಿಸಿದ್ದನ್ನು ಸ್ಮರಿಸಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಜೈನ ಧರ್ಮದಲ್ಲಿ ಪ್ರಕೃತಿಯ ಸಂರಕ್ಷಣೆಯ ವಿಶೇಷವಿದೆ ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರು ಜೈನ ಮುನಿಗಳು, ಮಾತೆಯರ ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದರು.

ರಾಜ್ಯಪಾಲರಾದ ವಾಜುಬಾಯಿ ವಾಲ, ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಮಾಜಿ ಸಚಿವ ಅಭಯಚಂದ್ರಜೈನ್‌, ಜಿಲ್ಲೆಯ ಶಾಸಕರು ಮತ್ತಿತರ ಗಣ್ಯರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ