
ಬೆಂಗಳೂರು(ಆ. 01): ಜೆಡಿಎಸ್ ನಾಯಕತ್ವದ ವಿರುದ್ಧ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಈ ಬಾರಿ ದೇವೇಗೌಡರ ಕುಟುಂಬದ ಜಾತಕ ಪ್ರೇಮವನ್ನಿಟ್ಟುಕೊಂಡು ಟೀಕೆ ಮಾಡಿದ್ದಾರೆ. ದೇವೇಗೌಡರು ಹೇಳಿದಾಕ್ಷಣ ಎಚ್'ಡಿಕೆ ಸಿಎಂ ಆಗಲು ಸಾಧ್ಯವೇ ಎಂದು ಟಾಂಗ್ ಕೊಟ್ಟಿದ್ದಾರೆ. ಎಚ್'ಡಿಕೆ ಮತ್ತೆ ಸಿಎಂ ಆಗೋದು ಅವರ ಜಾತಕದಲ್ಲಿದೆ ಎಂದು ದೇವೇಗೌಡರು ನೀಡಿದ ಹೇಳಿಕೆಗೆ ಮಾಗಡಿಯ ಬಂಡಾಯ ಜೆಡಿಎಸ್ ಶಾಸಕರು ಪ್ರತಿಕ್ರಿಯಿಸುತ್ತಿದ್ದರು.
ಡಿಕೆ ಶಿವಕುಮಾರ್ ಜಾತಕದಲ್ಲೂ ಸಿಎಂ ಆಗ್ತಾರೆ ಎಂದು ಇದೆ. ಈಗಾಗಲೇ ಎಚ್'ಡಿಕೆ ಒಮ್ಮೆ ಸಿಎಂ ಆಗಿದ್ದಾರೆ. ಜಾತಕವೇ ಇಲ್ಲದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಈಗ ಡಿಕೆಶಿ ಸರದಿ. ಅವರು ಯಾಕೆ ಸಿಎಂ ಆಗಬಾರದು ಎಂದು ಕೇಳುವ ಮೂಲಕ ಬಾಲಕೃಷ್ಣ ತಮ್ಮ ಮುಂದಿನ ರಾಜಕೀಯ ಹಾದಿಯ ಸುಳಿವನ್ನು ಸ್ಪಷ್ಟವಾಗಿ ಬಿಟ್ಟುಕೊಟ್ಟಿದ್ದಾರೆ.
ಗೌಡರ ಕುಟುಂಬದ ಮೇಲೆ ವಾಗ್ದಾಳಿ ಮುಂದುವರಿಸಿದ ಎಚ್.ಸಿ.ಬಾಲಕೃಷ್ಣ, ಎರಡನೇ ಮದುವೆಯಾಗಿ ಹೆಣ್ಮಗು ಆದರೆ ಎಚ್'ಡಿಕೆ ಪ್ರಧಾನಿ ಆಗ್ತಾರೆ ಎಂದಿದೆ. ಹಾಗಾದ್ರೆ ಅವರು ಪಿಎಂ ಯಾವಾಗ ಆಗ್ತಾರೆ? ದೇವೇಗೌಡರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ಜಾತಕದಲ್ಲಿದೆ. ಜಾತಕದಲ್ಲಿದ್ದಾಕ್ಷಣ ಎಲ್ಲರೂ ಸಿಎಂ, ಪಿಎಂ ಆಗಲ್ಲ. ಈ ನಾಯಕರು ಭಾವನಾತ್ಮಕವಾಗಿ ಕಾರ್ಯಕರ್ತರನ್ನು ಹಿಡಿದಿಡಲು ಇಂಥ ಕೆಲಸ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.
ಜೆಡಿಎಸ್'ನಲ್ಲಿ ಬಂಡಾಯ ಎದ್ದಿರುವ ಎಚ್.ಸಿ.ಬಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷವನ್ನು ಸೇರುವ ಸಾಧ್ಯತೆ ದಟ್ಟವಾಗಿದೆ. ಈಗ ಡಿಕೆಶಿ ಪರವಾಗಿ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿರುವ ಬಾಲಕೃಷ್ಣ ಈ ನಿಟ್ಟಿನಲ್ಲಿ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.