
ಬೆಂಗಳೂರು(ಅ.01): ಕರ್ನಾಟಕದ ಬಿಜೆಪಿ ಇತಿಹಾಸಕ್ಕೆ ಮೆರಗು ಮತ್ತು ಶೋಭೆ ತಂದು ಕೊಟ್ಟವರು ಬಿ.ಬಿ.ಶಿವಪ್ಪ. ಇಂದಿನವರಂತೆ ಅವರು ಪಕ್ಷದಿಂದ ಏನೂ ಬಯಸಿದವರಲ್ಲ. ಪಕ್ಷ ಸಂಘಟನೆಗಾಗಿ ಮನೆ ಮಾರಿಕೊಂಡರಲ್ಲದೇ ತನು, ಮನ, ಧನವನ್ನು ಸಮರ್ಪಣೆ ಮಾಡಿದ ಸಜ್ಜನ ರಾಜಕಾರಣಿ. ಪಕ್ಷದ ವರಿಷ್ಠ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಆಗ ಕರ್ನಾಟಕಕ್ಕೆ ಬಂದರೆ ಉಳಿದುಕೊಳ್ಳುತ್ತಿದ್ದು ಬೆಂಗಳೂರಿನ ಶಾಂತಿನಗರದಲ್ಲಿದ್ದ ಶಿವಪ್ಪನವರ ಮನೆಯಲ್ಲೇ.
ಕೇವಲ ಡೆಲ್ಲಿ ಮುಖಂಡರಷ್ಟೇ ಅಲ್ಲ, ಉತ್ತರ, ದಕ್ಷಿಣ ಕರ್ನಾಟಕ ರಾಜಕಾರಣಿಗಳಲ್ಲೇ ಬರುತ್ತಿದ್ದದ್ದು ಶಿವಪ್ಪನವರ ಈ ಮನೆಗೆ. ಬಿಜೆಪಿಯ ಸಂಘಟನೆಯ ನೆಲೆಯಾಗಿದ್ದ ಶಾಂತಿನಗರದ ಮನೆಯನ್ನು ಶಿವಪ್ಪನವರು ಪಕ್ಷ ಸಂಘಟನೆಗಾಗಿ 198585ರಲ್ಲಿ ಮಾರಿ ಬಿಟ್ಟರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ರಾಜ್ಯವನ್ನು ಸುತ್ತಾಡಿದ ಶಿವಪ್ಪನವರು ರಾಜಕೀಯದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡವರು.
ದಾನ, ಧರ್ಮ ಮತ್ತು ಸಮಾಜಸೇವೆಗಳ ಮೂಲಕ ರಾಜಕೀಯ ಪ್ರವೇಶ ಪಡೆದ ಅವರು ಜನಿಸಿದ್ದು 1929 ಸೆಪ್ಟೆಂಬರ್ 27 ರಂದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮದ ಶ್ರೀಮಂತ ಕುಟುಂಬದಲ್ಲಿ. ತಂದೆ ಸ್ವಾತಂತ್ರ್ಯ ಹೋರಾಟಗಾರ ಬಸಪ್ಪ ಮತ್ತು ತಾಯಿ ಮುತ್ತಮ್ಮ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳ ಪೈಕಿ ಶಿವಪ್ಪನವರೇ ಮೊದಲಿಗರು. ಮಹಾತ್ಮ ಗಾಂಧೀಜಿಯವರು ಈ ಭಾಗಕ್ಕೆ ಬಂದಾಗ ಇವರ ಮನೆಯಲ್ಲಿ ಒಂದು ದಿನ ತಂಗಿದ್ದರಂತೆ. ಅವರ ತಂದೆ ಬಸಪ್ಪ ಮತ್ತು ಇವರ ಕುಟುಂಬದ ಜಿ.ಕೆ. ಚಂದ್ರಶೇಖರರವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದುದು ಇವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿತು.
ಆ ಮೂಲಕ ಇವರ ರಾಜಕೀಯ ಜೀವನ ಪ್ರಾರಂಭವಾಯಿತು. ಶಿವಪ್ಪನವರ ತಂದೆ ಬಸಪ್ಪನವರು 1940 ರ ಸುಮಾರಿನಲ್ಲಿ ಸಕಲೇಶಪುರ ತಾಲೂಕಿನ ಕುಂಬರಹಳ್ಳಿ ಯಲ್ಲಿ ಸುಮಾರು 350 ರಿಂದ 400 ಎಕರೆ ಯುರೋ ಪಿಯನ್ ಎಸ್ಟೇಟನ್ನು ಖರೀದಿ ಮಾಡಿದ ನಂತರ ಇಲ್ಲಿಯೇ ಇವರ ಕುಟುಂಬದವರು ನೆಲೆಸಿದರು. ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯಲ್ಲೇ ಮುಗಿಸಿದ್ದ ಶಿವಪ್ಪನವರು ತಮ್ಮ ಪ್ರೌಢಶಿಕ್ಷಣವನ್ನ ಹಾಸನ ಜಿಲ್ಲೆ ಗಡಿ ಭಾಗದಲ್ಲಿರುವ ಕೊಡಗಿನ ಕೊಡ್ಲಿ ಪೇಟೆಯಲ್ಲಿ ಪಡೆದರು.
ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಶಿವಪ್ಪರನ್ನು ಕುದುರೆ ಮೂಲಕ ಕರೆದುಕೊಂಡು ಹೋಗಿ ಬರಲಾಗುತ್ತಿತ್ತಂತೆ. ಅಷ್ಟು ಶ್ರೀಮಂತ ಕುಟುಂಬದ ಶಿವಪ್ಪ 1952ರಲ್ಲಿ ಅಂದಿನ ಮೈಸೂರು ರಾಜ್ಯದ ಕೈಗಾರಿಕಾ ಸಚಿವ ಕೊಡಗಿನ ಕೆ. ಮಲ್ಲಪ್ಪನವರ ಪುತ್ರಿ ಸರಳ, ಸಹೃದಯದ ಸುಶೀಲಮ್ಮನವರನ್ನು ವಿವಾಹವಾದರು.
ನೇತ್ರದಾನ
ಅನಾರೋಗ್ಯದಿಂದಾಗಿ ನಿಧನರಾದ ಬಿಜೆಪಿಯ ಹಿರಿಯ ಮುಖಂಡ ಶಿವಪ್ಪ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಶಿವಪ್ಪ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದರು. ಅವರ ಸಮ್ಮತಿ ಮೇರೆಗೆ ಕಣ್ಣುಗಳನ್ನು ದಾನ ಮಾಡಲಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.