ಇನ್ನು ಏರ್‌ಪೋರ್ಟ್‌, ಮಾಲ್‌ಗಳಲ್ಲೂ ಮಣ್ಣಿನ ಕಪ್‌ನಲ್ಲಿ ಟೀ!

By Web DeskFirst Published Aug 26, 2019, 3:14 PM IST
Highlights

ರೈಲ್ವೇ ನಿಲ್ದಾಣ, ಏರ್‌ಪೋರ್ಟ್‌ ಹಾಗೂ ಮಾಲ್‌ಗಳಲ್ಲೂ ಮಣ್ಣಿನ ಕುಡಿಕೆಯಲ್ಲಿ ಚಹಾ ಹೀರುವ ಅವಕಾಶ| ವ್ಯವಸ್ಥೆ ಜಾರಿಗೊಳಿಸುವಂತೆ ಗೋಯಲ್‌ಗೆ ಪತ್ರ ಬರೆದ ನಿತಿನ್ ಗಡ್ಕರಿ

ನವದೆಹಲಿ[ಆ.26]: ಮಣ್ಣಿನ ಕಪ್‌ನಲ್ಲಿ ಬಿಸಿ ಬಿಸಿ ಟೀ ಸವಿಯಬೇಕೆನ್ನುವುದು ಪ್ರತಿಯೊಬ್ಬ ಭಾರತೀಯನಿಗೂ ಅಚ್ಚುಮೆಚ್ಚು. ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ವೇಳೆ ಪುಟ್ಟದಾದ ಮಣ್ಣಿನ ಕುಡಿಕೆಯಲ್ಲಿ ಬಿಸಿ ಬಿಸಿ ಟೀ ಹೀರುವಾಗ ಸಿಗುವ ಮಜಾನೇ ಬೇರೆ.

ಮಣ್ಣಿನ ಕುಡಿಕೆ ದಿನೇ ದಿನೇ ಫೇಮಸ್ ಆಗುತ್ತಿದ್ದು, ಜನರು ಇವುಗಳಲ್ಲಿ ಚಹಾ ಹೀರುವುದನ್ನು ಬಹಳ ಇಷ್ಟ ಪಡುತ್ತಿದ್ದಾರೆ. ಹೀಗಾಗಿ ಇನ್ಮುಂದೆ ರೈಲ್ವೇ ಸ್ಟೇಷನ್, ಬಸ್‌ ನಿಲ್ದಾಣಗಳು, ಏರ್‌ಪೋರ್ಟ್‌ ಹಾಗೂ ಮಾಲ್‌ಗಳಲ್ಲಿ ಮಣ್ಣಿನ ಕಪ್‌ಗಳಲ್ಲಿ ಚಹಾ ಮಾರುವ ವ್ಯವಸ್ಥೆ ಜಾರಿಗೊಳಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಒಲವು ತೋರಿಸಿದ್ದಾರೆ. 

ರೈಲ್ವೆ ನಿಲ್ದಾಣಗಳಲ್ಲಿ 15 ವರ್ಷ ಬಳಿಕ ಮತ್ತೆ ಮಣ್ಣಿನ ಕಪ್‌ನಲ್ಲಿ ಟೀ!

ಈ ಸಂಬಂಧ ರೈಲ್ವೇ ಸಚಿವ ಪಿಯೂಷ್ ಗೋಯಲ್‌ಗೆ ಪತ್ರ ಬರೆದಿರುವ ನಿತಿನ್ ಗಡ್ಕರಿ 'ಕುಲ್ಹಾಡ್‌ಗಳನ್ನು  ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ 100 ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು' ಎಂದು ಕೋರಿದ್ದಾರೆ. 

ಸದ್ಯ ವಾರಾಣಸಿ ಹಾಗೂ ರಾಯ್‌ ಬರೇಲಿ ರೈಲ್ವೆ ನಿಲ್ದಾಣಗಳಲ್ಲಿ ಟೆರಾಕೋಟಾ ಲೇಪಿತ ಮಣ್ಣಿನ ಕಪ್‌ಗಳು, ಕುಡಿಕೆಗಳು ಮತ್ತು ತಟ್ಟೆಗಳನ್ನು ಬಳಸಲಾಗುತ್ತಿದೆ. ಪ್ರಸ್ತುತ ಇದನ್ನು ದೇಶದ ಇತರೆ ಪ್ರಮುಖ ರೈಲ್ವೆ ನಿಲ್ದಾಣ, ಏರ್‌ಪೋರ್ಟ್‌ಗಳಿಗೆ, ಬಸ್‌ ನಿಲ್ದಾಣ ಹಾಗೂ ಮಾಲ್‌ಗಳಿಗೆ ವಿಸ್ತರಿಸಬೇಕು ಎನ್ನುವುದು ಗಡ್ಕರಿ ಯೋಜನೆಯಾಗಿದೆ. 

click me!