ಮಂಡ್ಯದಲ್ಲಿ ದೇವೇಗೌಡರಿಗೆ ವಿರುದ್ಧವಾಗಿ ಕಾಂಗ್ರೆಸ್ ನಿಂದ ಶಿಷ್ಯನೇ ಸ್ಪರ್ಧೆ

First Published Jun 27, 2018, 8:27 AM IST
Highlights

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಹೊಂದಾಣಿಕೆಯಲ್ಲಿ ತುಸು ವ್ಯತ್ಯಾಸ ಕಾಣುತ್ತಿರುವ ಬೆನ್ನಲ್ಲೇ ಲೋಕಸಭಾ ಚುನಾವಣೆ ಮೈತ್ರಿಯ ವಿಚಾರದಲ್ಲೂ ಎಲ್ಲಾ ಇತ್ಯರ್ಥವಾದಂತೆ ನಡೆದುಕೊಳ್ಳುತ್ತಿರುವ ಜೆಡಿಎಸ್‌ನ ಧೋರಣೆಗೆ ಬ್ರೇಕ್‌ ಹಾಕುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ಆರಂಭಗೊಂಡಿದೆ.

ಬೆಂಗಳೂರು :  ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಹೊಂದಾಣಿಕೆಯಲ್ಲಿ ತುಸು ವ್ಯತ್ಯಾಸ ಕಾಣುತ್ತಿರುವ ಬೆನ್ನಲ್ಲೇ ಲೋಕಸಭಾ ಚುನಾವಣೆ ಮೈತ್ರಿಯ ವಿಚಾರದಲ್ಲೂ ಎಲ್ಲಾ ಇತ್ಯರ್ಥವಾದಂತೆ ನಡೆದುಕೊಳ್ಳುತ್ತಿರುವ ಜೆಡಿಎಸ್‌ನ ಧೋರಣೆಗೆ ಬ್ರೇಕ್‌ ಹಾಕುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ಆರಂಭಗೊಂಡಿದೆ.

ಹಾಸನ ಲೋಕಸಭಾ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಜೆಡಿಎಸ್‌ ವಲಯದಿಂದ ಚಾಲನೆಗೆ ಬರುತ್ತಿದ್ದಂತೆಯೇ ಎಚ್ಚೆತ್ತಿರುವ ಕಾಂಗ್ರೆಸ್‌ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಸಭೆ ಸೇರಿದ ಮೈಸೂರು ಹಾಗೂ ಮಂಡ್ಯ ಭಾಗದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಗಳು ಲೋಕಸಭಾ ಚುನಾವಣೆ ವೇಳೆ ಈ ಭಾಗದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಉಳಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿ ಹಾಗೂ ದೇವೇಗೌಡರ ಮಾಜಿ ಶಿಷ್ಯ ಚೆಲುವರಾಯಸ್ವಾಮಿ ಅವರು, ಮಂಡ್ಯ ಲೋಕಸಭೆ ಉಪ ಚುನಾವಣೆ ಕಾಂಗ್ರೆಸ್‌ನಿಂದ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ. ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಕೇವಲ ಬೆಂಗಳೂರಿಗೆ ಸೀಮಿತವೇ ಹೊರತು ಮಂಡ್ಯಕ್ಕಲ್ಲ. ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಸದ್ಯಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಾನು ಟಿಕೆಟ್‌ ಕೇಳಿಲ್ಲ. ಅದನ್ನು ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆ’ ಎಂದು ಹೇಳಿದರು.

ಕಾವೇರಿ ಬಗ್ಗೆಯೂ ಗೌಡರಿಗೆ ತರಾಟೆ:

ಇದೇ ವೇಳೆ ಕಾವೇರಿ ಬಗ್ಗೆ ದೇವೇಗೌಡರ ನಿಲುವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರಬಹುದು ಆದರೆ, ಮಂಡ್ಯದಲ್ಲಿ ಜನ ಜೆಡಿಎಸ್‌ ಪರ ಮತ ನೀಡಿದ್ದಾರೆ. ವಿಪಕ್ಷದಲ್ಲಿ ಇದ್ದಾಗ ಕಾವೇರಿ ಕುರಿತು ಮಾತನಾಡುತ್ತಿದ್ದ ದೇವೇಗೌಡ ಅವರು, ಸಮ್ಮಿಶ್ರ ಸರ್ಕಾರ ಬಂದ ಕೂಡಲೇ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

‘ಇಂದಿನ ಸಭೆಯಲ್ಲಿ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಚರ್ಚೆ ನಡೆಸಿದ್ದೇವೆ. ಕಾವೇರಿ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಈಗ ವರಸೆ ಬದಲಿಸಿದ್ದಾರೆ. ಕೇಂದ್ರದ ಜತೆಗೆ ಸಂಘರ್ಷ ಬೇಡ, ನಾಜೂಕಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಎಂದು ಕುಮಾರಸ್ವಾಮಿಗೆ ಸೂಚನೆ ಕೊಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗಮ-ಮಂಡಳಿಗೆ ಬೇಡಿಕೆ:

ಮಂಡ್ಯ ಹಾಗೂ ಹಾಸನದ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ನಿಗಮ, ಮಂಡಳಿಗಳ ಹುದ್ದೆಗಳಿಗೆ ಪರಿಗಣಿಸಲು ಒತ್ತಡ ಹೇರಬೇಕು ಎಂಬ ವಿಚಾರವಾಗಿ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಬಾಲಕೃಷ್ಣ, ನರೇಂದ್ರಸ್ವಾಮಿ ಹಾಗೂ ಚೆಲುವರಾಯ ಸ್ವಾಮಿ ಸೇರಿದಂತೆ ಮೈಸೂರು ಹಾಗೂ ಮಂಡ್ಯ ಭಾಗದ ಕಾಂಗ್ರೆಸ್‌ ನಾಯಕರು ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಕಾಂಗ್ರೆಸ್‌ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

click me!