
ನವದೆಹಲಿ(ಮಾ.15): ಭಾರತದ ಮುಂದಿನ ರಾಷ್ಟ್ರಪತಿಯಾಗಿ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾನಿ ಅವರು ಆಯ್ಕೆಯಾಗಲಿದ್ದಾರೆ ಎಂದು ಜೀ ನ್ಯೂಸ್ ವೆಬ್'ಸೈಟ್ ವರದಿ ಮಾಡಿದೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೆ ಅಡ್ವಾನಿ ಹೆಸರನ್ನು ಸೂಚಿಸಿದ್ದು ರಾಷ್ಟ್ರಾಧ್ಯಕ್ಷರನ್ನಾಗಿಸುವುದರ ಮೂಲಕ ತಮ್ಮ ರಾಜಕೀಯ ಗುರುವಿಗೆ ಗುರುದಕ್ಷಿಣೆ ನೀಡಲಿದ್ದಾರಂತೆ. ಗುಜರಾತ್'ನ ಸೋಮನಾಥದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಮೋದಿಯವರು ಹಿರಿಯ ನಾಯಕರನ್ನು ಸೂಚಿಸಿದ್ದು, ಈ ಸಭೆಯಲ್ಲಿ ಅಮಿತ್ ಷಾ, ಕೇಶುಬಾಯ್ ಪಟೇಲ್ ಹಾಗೂ ಅಡ್ವಾನಿಯವರು ಉಪಸ್ಥಿತರಿದ್ದರು ಎನ್ನಲಾಗಿದೆ.
ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುವ ಅಡ್ವಾನಿಯವರು ಆರ್'ಎಸ್'ಎಸ್ ಸ್ವಯಂಸೇವಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು 1977 ಹಾಗೂ 1998 ರಲ್ಲಿ ಕೇಂದ್ರ ಸಚಿವ ಹಾಗೂ 2002ರ ಅವಧಿಯಲ್ಲಿ ಉಪಪ್ರಧಾನಿಯಾಗಿದ್ದರು. ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅವಧಿ ಜೂನ್ 25,2017 ರಂದು ಕೊನೆಗೊಳ್ಳಲಿದೆ.
ಕನ್ನಡಿಗರೊಬ್ಬರು ಉಪರಾಷ್ಟ್ರಪತಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಅವರು ಮತ್ತಿನ್ಯಾರು ಅಲ್ಲ ಕಾಂಗ್ರೆಸ್'ನ ಮಾಜಿ ನಾಯಕ ಎಸ್.ಎಂ.ಕೃಷ್ಣ. ಇಂದು ಅವರು ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದರೆ ಅವರ ಸೋದರಿ ನಿಧನದ ಕಾರಣ ಬಿಜೆಪಿ ಸೇರುವ ದಿನಾಂಕ ಮುಂದಕ್ಕೆ ಹೋಗಿದೆ.
ಕೃಷ್ಣ ಬಿಜೆಪಿ ಸೇರ್ಪಡೆಯಾದರೆ ಉಪರಾಷ್ಟ್ರಪತಿ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ಹಿರಿಯ ಮುಖಂಡರು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ನಾಯಕರೊಬ್ಬರಿಗೆ ಈ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.