
ಬೆಂಗಳೂರು : ಇನ್ನೊಂದು ವಾರದಲ್ಲಿ ಜಾರಿಗೆ ಬರಲಿರುವ ‘ಪ್ರತಿ ಚಾನೆಲ್‌ಗೆ ಪ್ರತ್ಯೇಕ ಶುಲ್ಕ’ ಎಂಬ ಭಾರತೀಯ ದೂರಸಂಪರ್ಕ ಪ್ರಾಧಿಕಾರದ (ಟ್ರಾಯ್) ನೀತಿಯಡಿ ಕೇಬಲ್ ಟಿವಿ ವೀಕ್ಷಕರ ನೋಂದಣಿಗೆ ಕೇಬಲ್ ಟಿವಿ ಆಪರೇಟಿಂಗ್ ಸಿಸ್ಟಂ ಸಿದ್ಧವಾಗಿಲ್ಲ.
ಇದರಿಂದಾಗಿ ಯಾವ ರೀತಿ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿಯೇ ದೊರೆಯದೇ ರಾಜ್ಯದ ಗ್ರಾಹಕರನ್ನು ತೀವ್ರ ಗೊಂದಲಕ್ಕೆ ನೂಕಿದೆ. ಒಂದು ವೇಳೆ ಕೇಂದ್ರದ ಈ ನೀತಿಯು ಡಿ. 29ರಿಂದ ಕಟ್ಟುನಿಟ್ಟಾಗಿ ಜಾರಿಯಾದರೆ ರಾಜ್ಯದಲ್ಲಿ ಬಹುತೇಕ ಕೇಬಲ್ ಟಿವಿ ಸ್ತಬ್ಧವಾಗುವ ಸಾಧ್ಯತೆಯಿದೆ.
ಆದರೆ, ರಾಜ್ಯದಲ್ಲಿ ಮಾತ್ರವಲ್ಲದೆ, ಇಡೀ ದೇಶದಲ್ಲಿ ಇದೇ ಸ್ಥಿತಿಯಿರುವುದರಿಂದ ಡಿ. 29ರಿಂದ ಈ ನೀತಿ ಜಾರಿಯಾಗುವುದೋ ಅಥವಾ ಇಲ್ಲವೋ ಎಂಬ ಅನುಮಾನಗಳು ಇವೆ.
ಕೇಂದ್ರ ಸರ್ಕಾರ ಏಕಾಏಕಿ ಜಾರಿಗೊಳಿಸುವುದಕ್ಕೆ ಮುಂದಾಗಿರುವ ಟ್ರಾಯ್, ಈ ನೀತಿಗೆ ಪೂರ್ವ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಇನ್ನೇನು ನೀತಿ ಜಾರಿಗೆ ಕೆಲವೇ ದಿನಗಳು ಬಾಕಿ ಉಳಿದರೂ ಈವರೆಗೆ ಕೇಬಲ್ ಟಿವಿ ಅಪರೇಟರ್‌ಗಳಿಗೆ ಹೊಸ ಆಪರೇಟಿಂಗ್ ಸಿಸ್ಟಂ ನೀಡಿಲ್ಲ.
ಪ್ರಸ್ತುತ ಟಿವಿ ಚಾನಲ್‌ಗಳಿಂದ ಎಂಎಸ್‌ಓ (ಮಲ್ಟಿಸರ್ವಿಸ್ ಅಪರೇಟರ್)ಗಳು ಸಿಗ್ನಲ್‌ಗಳನ್ನು ಪಡೆದು ಕೇಬಲ್ ಮೂಲಕ ಕೇಬಲ್ ಟಿವಿ ಆಪರೇಟರ್‌ಗಳಿಗೆ ಕೊಡುತ್ತಾರೆ. ಕೇಬಲ್ ಟಿವಿ ಆಪರೇಟರ್‌ಗಳು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಾರೆ. ಆದರೆ, ಹೊಸ ನೀತಿ ಜಾರಿಗೆ ಅನುಕೂಲವಾಗುವ ನೂತನ ಆಪರೇಟಿಂಗ್ ಸಿಸ್ಟಂ ಅನ್ನು ಕೇಬಲ್ ಆಪರೇಟರ್‌ಗಳಿಗೆ ನೀಡಬೇಕಾಗಿತ್ತು. ಆದರೆ, ಈ ವರೆಗೆ ನೀಡಿಲ್ಲ. ಒಂದು ವೇಳೆ ನೀಡಿದರೂ ಈಗಿರುವ ಕಡಿಮೆ ಅವಧಿಯಲ್ಲಿ ಕೋಟ್ಯಾಂತರ ಮಂದಿ ಕೇಬಲ್ ಟಿವಿ ಗ್ರಾಹಕರನ್ನು ನೋಂದಣಿ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಕೇಬಲ್ ಟಿವಿ ಆಪರೇಟರ್‌ಗಳು.
ಆಪರೇಟಿಂಗ್ ಸಿಸ್ಟಂ ಅನ್ನು ಒದಗಿಸದೇ ತರಾತುರಿಯಲ್ಲಿ ಈ ನೀತಿ ಜಾರಿ ಮಾಡಲು ಮುಂದಾಗಿರುವುದು ಸಮಸ್ಯೆಗಳ ಮೂಲವಾಗಿದೆ. ಹೀಗಾಗಿ ಗಡುವನ್ನು ವಿಸ್ತರಿಸುವುದು ಅನಿವಾರ್ಯವಾಗಬಹುದು. ಅಕಸ್ಮಾತ್ ಟ್ರಾಯ್ ತನ್ನ ನೀತಿಯನ್ನು ಡಿ. 29ರಿಂದಲೇ ಜಾರಿ ಮಾಡಲು ಪಟ್ಟು ಹಿಡಿದರೆ ಮಾತ್ರ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ವ್ಯವಸ್ಥೆಯೇ ಹದಗೆಟ್ಟುಹೋಗುವ ಸಾಧ್ಯತೆಯಿದೆ.
ಡಿ.29ರಿಂದ ಪೇ ಚಾನೆಲ್ ಸ್ಥಗಿತ?:
ಹೊಸ ನೀತಿ ಕಟ್ಟುನಿಟ್ಟಾಗಿ ಜಾರಿಯಾದರೆ ಡಿ.29ಕ್ಕೆ ದೂರದರ್ಶನ ಮತ್ತು ಕೆಲವು ಉಚಿತ ಚಾನಲ್‌ಗಳು ಮಾತ್ರ ಪ್ರಸಾರವಾಗಲಿವೆ. ಉಳಿದಂತೆ ಎಲ್ಲ ಪೇ ಚಾನಲ್‌ಗಳು ಸ್ಥಗಿತಗೊಳ್ಳಲಿವೆ. ಕೋಟ್ಯಂತರ ಮಂದಿ ಕೇಬಲ್ ಟಿವಿ ಗ್ರಾಹಕರು ಇರುವುದರಿಂದ ಅವರನ್ನು ಒಂದೇ ಬಾರಿಗೆ ಎಲ್ಲರನ್ನು ಆಪರೇಟಿಂಗ್ ಸಿಸ್ಟಂಗೆ ಸೇರಿಸುವುದಕ್ಕೆ ಸಾಧ್ಯವಿಲ್ಲ, ಹಂತ ಹಂತವಾಗಿ ಸೇರಿಬೇಕಾಗುತ್ತದೆ. ಕಾರಣ ಮಲ್ಟಿಸರ್ವಿಸ್ ಅಪರೇಟರ್‌ಗಳ ಅಪರೇಟಿಂಗ್ ಸಿಸ್ಟಂ ಅಷ್ಟೊಂದು ದೊಡ್ಡದಾಗಿಲ್ಲ ಎಂದು ಕರ್ನಾಟಕ ರಾಜ್ಯಕೇಬಲ್ ಟಿವಿ ಆಪರೇಟರ್ ಆಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದಾರೆ.
ಮುಂದಿನ ತಿಂಗಳು ಜಿಯೋ ಎಂಟ್ರಿ
ಕಳೆದ ಆರು ತಿಂಗಳಯಿಂದ ಜಿಯೋ ಕಂಪನಿ ಕೇಬಲ್ ನೆಟ್‌ವರ್ಕ್ನ ದೊಡ್ಡ ನೆಟ್‌ವರ್ಕ್ಗಳಾದ ಡೆನ್ ನೆಟ್ ವರ್ಕ್, ಹಾಥ್ ವೇ ನೆಟ್ ವರ್ಕ್ಗಳನ್ನು 5,500 ಕೋಟಿ ರುಗಳಿಗೆ ಖರೀದಿ ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಜಿಯೋ ಕಂಪನಿ ಕೇಬಲ್ ನೆಟ್‌ವರ್ಕ್ ಉದ್ಯಮಕ್ಕೆ ಬರಲಿದೆ. ಹಾಗಾಗಿ ತರತುರಿಯಲ್ಲಿ ಟ್ರಾಯ್ ಹೊಸ ನೀತಿ ಜಾರಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಕೇಬಲ್ ಟಿವಿ ಅಪರೇಟರ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಆರೋಪಿಸಿದ್ದಾರೆ.
ಹೊಸ ನೀತಿ ಜಾರಿ ಮುಂದೂಡಿಕೆ ?
ಟ್ರಾಯ್ ನೀತಿ ಜಾರಿ ಮಾಡುವುದಕ್ಕೆ ಹಲವಾರು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಗ್ರಾಹಕರಿಗೆ ಮತ್ತು ಕೇಬಲ್ ಅಪರೇಟರ್‌ಗಳಿಗೆ ಸಾಕಷ್ಟುತೊಂದರೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಡಿ.29ಕ್ಕೆ ನೀತಿ ಜಾರಿಗೆ ನೀಡಲಾಗಿರುವು ಗಡುವು ಮೂಂದೂಡಿಕೆ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಟ್ರಾಯ್ ಅಥವಾ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಬೇಕಾಗಿದೆ.
ಸೆಟ್‌ಅಪ್ ಬಾಕ್ಸ್ ಹಾಕಿಸುವುದಕ್ಕೆ ಮೂರು ವರ್ಷ ಗಡುವು ನೀಡಲಾಯಿತು. ಆದರೆ, ಹೊಸ ನೀತಿ ಜಾರಿಗೆ ಯಾಕೆ ಇಷ್ಟುತರಾತುರಿಯಲ್ಲಿ ಮಾಡಲಾಗುತ್ತಿದೆ. ಕನಿಷ್ಠ ಮೂರು ತಿಂಗಳು ಕಾಲಾವಧಿ ನೀಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಬಹುದಾಗಿದೆ.ಪ್ಯಾಟ್ರಿಕ್ ರಾಜು, ಅಧ್ಯಕ್ಷ. ರಾಜ್ಯ ಕೇಬಲ್ ಟಿವಿ ಅಪರೇಟರ್ ಅಸೋಸಿಯೇಷನ್
ಟೀವಿ ಗ್ರಾಹಕರ ವಿವರ
ಗ್ರಾಹಕರು ದೇಶ ಕರ್ನಾಟಕ ಬೆಂಗಳೂರು
ಕೇಬಲ್ ಟಿವಿ 9.6 ಕೋಟಿ 60-80 ಲಕ್ಷ 25-30 ಲಕ್ಷ
ಡಿಟಿಎಚ್ 3.5 ಕೋಟಿ 6-10 ಲಕ್ಷ 3-5 ಲಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.