
ಮೈಸೂರು(ಸೆ.25): ನೀರಿನ ಟ್ಯಾಂಕಿಗೆ ಬಿದ್ದು ಮೇಲೆ ಬರಲಾಗದೆ ಕಳೆದೆರಡು ದಿನಗಳಿಂದ ಟ್ಯಾಂಕಿನೊಳಗೆ ಜೀವನಸಾಗಿಸುತ್ತಿದ್ದವನನ್ನು ಕೊನೆಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಮೈಸೂರಿನ ಮೂಗನಹುಂಡಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮುಖೇಶ್, ಕುಡಿದ ಅಮಲಿನಲ್ಲಿ ಟ್ಯಾಂಕ್ ಯಾವ ರೀತಿ ಇರುತ್ತದೆ ಎಂದು ನೋಡ ಹೋಗಿದ್ದಾನೆ. ಆದರೆ ಈ ವೇಳೆ ನಿಯಂತ್ರಣ ತಪ್ಪಿ 25 ಅಡಿ ಆಳದ ನೀರಿನ ಟ್ಯಾಂಕಿಗೆ ಬಿದ್ದಿದ್ದಾನೆ. ಟ್ಯಾಂಕಿನಲ್ಲಿ ನೀರಿಲ್ಲದ ಕಾರಣ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆದರೆ ಮೇಲ್ಬರಲಾಗದೆ ಯಾರಾದರೂ ಕಾಪಾಡಿ ಎಂದು ಕೂಗಾಡುತ್ತಿದ್ದ. ಧ್ವನಿ ಕೇಳಿ ಸ್ಥಳಕ್ಕೆ ಬಂದ ಮೂಗನಹುಂಡಿ ಗ್ರಾಮದ ದನಕಾಯುವ ಹುಡುಗರು ಇವನನ್ನ ರಕ್ಷಿಸಲು ಮುಂದಾಗಿದ್ದಾರೆ. ಆದರೆ ಟ್ಯಾಂಕಿಗೆ ಹಾಕಿದ್ದ ಕಬ್ಬಿಣದ ಏಣಿಯನ್ನು ದುಷ್ಕರ್ಮಿಗಳು ಕದ್ದಿದ್ದರಿಂದ ಮುಖೇಶ್'ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ.
ನಿನ್ನೆ ಇಡೀ ದಿನ ಮೂಗನಹುಂಡಿ ಗ್ರಾಮದ ಯುವಕರು ಹಗ್ಗದ ಮೂಲಕ ಊಟ, ನೀರು ಕೊಟ್ಟು ಮುಖೇಶ್'ನನ್ನು ಸಂತೈಸಿ ಜೀವ ಉಳಿಸಿದ್ದಾರೆ. ಇಂದು ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮುಖೇಶ್'ನನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಸದ್ಯ ಮುಖೇಶ್'ನನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.