
ಕೇರಳ(ಸೆ.25): 18 ಭಾರತೀಯ ಯೋಧರನ್ನು ಬಲಿಪಡೆದ ಪಾಕ್ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದ್ದಾರೆ. ದೇವರ ನಾಡಲ್ಲಿ ನಿಂತ ಮೋದಿ ಪಾಕ್ ಹೆಸರು ಪ್ರಸ್ತಾಪಿಸದೆಯೇ ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶ ಎಂದು ಕುಟುಕಿದ್ದಾರೆ. ಅತ್ತ ಪಾಕ್ ಪ್ರಧಾನಿ ಉರಿ ದಾಳಿ ಹಿಂದೆ ಕಾಶ್ಮೀರ ಸಮಸ್ಯೆ ಇದೆ ಎಂದು ತೇಪೆ ಹಚ್ಚಲು ಯತ್ನಿಸಿದ್ದಾರೆ.
ಉರಿ ಉಗ್ರ ದಾಳಿಯ ಬಗ್ಗೆ ಇವತ್ತು ಮೊದಲ ಬಾರಿಗೆ ಸಾರ್ವಜನಿಕವಾಗಿ ಪಾಕ್ ವಿರುದ್ಧ ಗುಡುಗಿದ್ದಾರೆ. ಕೇರಳದ ಕೋಝಿಕೊಡ್ನಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ 18 ಯೋಧರ ಬಲಿದಾನವಾಗಿದೆ. ಪಕ್ಕದ ದೇಶದ ಇಂತಹ ಪ್ರತಿ ಉಗ್ರ ಕೃತ್ಯದ ಲೆಕ್ಕವನ್ನು ಚುಕ್ತಾ ಮಾಡುತ್ತೇವೆ ಎಂದು ಮೋದಿ ಗುಡುಗಿದ್ದಾರೆ. ಏಷ್ಯಾದ ಎಲ್ಲೇ ಉಗ್ರ ದಾಳಿ ನಡೆದರೂ ಅದರ ಹಿಂದೆ ಅದೇ ದೇಶದಲ್ಲಿ ತರಬೇತಿ ಪಡೆದ ಉಗ್ರರು ಇರುತ್ತಾರೆ ಎಂದು ಪಾಕ್ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.
ಕೇರಳ ತೆರಳೋಕೂ ಮುನ್ನ ಪ್ರಧಾನಿ ಭಾರತೀಯ ರಕ್ಷಣಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉರಿ ದಾಳಿಯ ಬಳಿಕ ಮೋದಿ ಮೊದಲ ಬಾರಿಗೆ ಸೇನಾ ಮುಖ್ಯಸ್ಥರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ರು. ಇನ್ನು ಭಾರತೀಯ ಯೋಧರನ್ನು ಆಹುತಿ ಪಡೆದ ರಾಷ್ಟ್ರ ಪಾಕ್ ಪ್ರಧಾನಿ ಉರಿ ಸೇನಾ ನೆಲೆ ಮೇಲಿನ ದಾಳಿ ತಮ್ಮಿಂದ ನಡೆದೇ ಇಲ್ಲಿ ಎನ್ನುವಂತೆ ಮಾತನಾಡಿದ್ದಾರೆ. ಕಳೆದೆರಡು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಿಂದ ತಮ್ಮ ಹತ್ತಿರ ಸಂಬಂಧಿಗಳನ್ನು ಕಳೆದುಕೊಂಡವರಿಂದಲೇ ಆಗಿರಬಬಹುದು ಎಂದು ತೇಪೆ ಹಚ್ಚಲು ಯತ್ನಿಸಿದ್ದಾರೆ. ಆದರೆ, ಅದೇನೇ ಸರ್ಕಸ್ ಮಾಡಿದರೂ ವಿಶ್ವಸಮುದಾಯದ ಬೆಂಬಲ ಗಳಿಸಲು ಪಾಕ್ ವಿಫಲವಾಗಿದೆ. ಅಮೆರಿಕಾದಲ್ಲೂ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸುವಂತೆ ಮಸೂದೆ ಮಂಡನೆಯಾಗಿದೆ.
ಆದರೆ, ಭಾರತಕ್ಕೆ ಮಗ್ಗುಲ ಮುಳ್ಳಾಗಿರುವ ಇನ್ನೊಂದು ರಾಷ್ಟ್ರ ಚೀನಾ ಮಾತ್ರ ಎಂದಿನಂತೆ ಪಾಕ್ ಪರ ನಿಂತಿದೆ. ಪಾಕ್ ಮೇಲೆ ಯಾವುದೇ ರೀತಿಯ ಆಕ್ರಮಣ ನಡೆದರೂ ಸಂಪೂರ್ಣ ಬೆಂಬಲ ನೀಡಲು ನಾವು ಸಿದ್ಧ ಎಂದು ಘೋಷಿಸಿದೆ. ಒಟ್ಟಾರೆ ಇಡೀ ವಿಶ್ವಕ್ಕೆ ಪಾಕ್ ಕುಕೃತ್ಯಗಳು ಮನವರಿಕೆಯಾದ್ರೂ ಚೀನಾ ಮಾತ್ರ ಉಗ್ರರ ಪಾಲಿಸಿ ಪೋಷಿಸುವ ಪಾಕಿಸ್ತಾನವೇ ನಮಗೆ ಮುದ್ದು ಎನ್ನುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.