ಸಾಲ ಮನ್ನಾ ಬೆನ್ನಲ್ಲೇ ರೈತರ ಸಂಭ್ರಮ; ಬಿಜೆಪಿಗರು ರಾಷ್ಟ್ರೀಕೃತ ಬ್ಯಾಂಕಲ್ಲಿ ಮನ್ನಾ ಮಾಡಿಸಿ

By Suvarna Web DeskFirst Published Jun 22, 2017, 1:04 PM IST
Highlights

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಒತ್ತಡ ಹೇರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಆಗ್ರಹಿಸಿದ್ದಾರೆ.

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಒತ್ತಡ ಹೇರಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಆಗ್ರಹಿಸಿದ್ದಾರೆ. ಸಹಕಾರಿ ಸಂಘ ಸಂಸ್ಥೆಗಳಿಂದ ರೈತರು ಪಡೆದಿರುವ ರೂ.50 ಸಾವಿರ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಲು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ. ಅದೇ ರೀತಿ ಬಿಜೆಪಿ ನಾಯಕರಾದ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಕೆ.ಎಸ್‌. ಈಶ್ವರಪ್ಪ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸಬೇಕು ಎಂದಿದ್ದಾರೆ.

ಸಾಲ ಮನ್ನಾ ಬೆನ್ನಲ್ಲೇ ರೈತರ ಸಂಭ್ರಮ:

ಬೆಂಗಳೂರು: ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡಿದ ಕ್ರಮಕ್ಕೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರು, ಕಾಂಗ್ರೆಸ್‌ ಕಾರ‍್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಸಾಲ ಮನ್ನಾ ಬಿಜೆಪಿ ಹೋರಾಟದ ಫಲ, 1 ಲಕ್ಷದ ವರೆಗೂ ಮನ್ನಾಕ್ಕೆ ಮಾಡಬೇಕಿತ್ತು ಎಂದು ಪಕ್ಷದ ಮುಖಂಡರು ಆಗ್ರಹಿಸಿದ್ದಾರೆ. ಇತ್ತ ಜೆಡಿಎಸ್‌ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದು, ಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿದೆ. ರೈತ ಮುಖಂಡರು, ಪೂರ್ಣ ಸಾಲ ಮನ್ನಾ ಮಾಡಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿತ್ತು ಎಂದು ಸಲಹೆ ನೀಡಿದ್ದಾರೆ. ಕಲಬುರಗಿಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಪಟ್ಟಣ, ಬಳ್ಳಾರಿ ಜಿಲ್ಲೆ ಹೊಸಪೇಟೆಯ ಆನಂತಶಯನಗುಡಿಯಲ್ಲಿ ರೈತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

click me!