
ಬೆಂಗಳೂರು (ನ.28): ಪದ್ಮಾವತಿ ವಿವಾದದ ನಂತರ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ಚಿತ್ರದುರ್ಗದ ಕೆಚ್ಚೆದೆಯ ಮದಕರಿ ನಾಯಕನ ಸಾವಿನ ವಿವಾದ ಕೋರ್ಟ್ ಮೆಟ್ಟಿಲೇರಿದೆ.
ಚಿತ್ರದುರ್ಗದ ರಾಜ ವೀರ ಮದಕರಿ ನಾಯಕ ಸತ್ತಿದ್ದು ಹೇಗೆ.? ಮದಕರಿ ನಾಯಕನ ಸಾವು, ವೀರ ಮರಣವಾ..? ಪ್ರಾಣಾರ್ಪಣೆಯಾ..? ಕೊಲೆಯಾ..? ಮದಕರಿ ನಾಯಕನನ್ನು ಮೈಸೂರಿನ ಅರಸ ಹೈದರಾಲಿ ಯುದ್ಧದಲ್ಲಿ ಕೊಂದನಾ..? ಮದಕರಿ ನಾಯಕನನ್ನು ಹೈದರಾಲಿ ಮೋಸದಿಂದ ಬಂಧಿಸಿ ವಿಷವಿಟ್ಟು ಕೊಂದನಾ..? ಎಂಬಿತ್ಯಾದಿ ಪ್ರಶ್ನೆಗಳನ್ನು ಇಟ್ಟುಕೊಂಡು ತ.ರಾ. ಸುಬ್ಬರಾವ್ ಮತ್ತು ಬಿ.ಎಲ್. ವೇಣು ಅವರ ಕಾದಂಬರಿ ಪ್ರಶ್ನಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ತರಾಸು ಅವರ ದುರ್ಗಾಸ್ತಮಾನ, ಬಿ.ಎಲ್. ವೇಣು ಅವರ ಗಂಡುಗಲಿ ಮದಕರಿ ನಾಯಕ ಕೃತಿ ಇವೆರಡೂ ಕಾದಂಬರಿಗಳನ್ನು ಪ್ರಶ್ನಿಸಿ ವಕೀಲ ಪ್ರಸನ್ನ ಕಲ್ಲಿನಕೋಟೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಎರಡೂ ಕಾದಂಬರಿಗಳಲ್ಲಿ ಇತಿಹಾಸವನ್ನು ತಿರುಚಲಾಗಿದೆ. ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸಬೇಕು ಎಂದು ವಕೀಲ ಪ್ರಸನ್ನ ಕೋರ್ಟ್ ಮೊರೆ ಹೋಗಿದ್ದಾರೆ.
‘ದುರ್ಗಾಸ್ತಮಾನ’ ಕಾದಂಬರಿಯಲ್ಲೇನಿದೆ..?
1982ರಲ್ಲಿ ಬಿಡುಗಡೆಯಾಗಿದ್ದ ತ.ರಾ. ಸುಬ್ಬರಾವ್ ಅವರ ಕಾದಂಬರಿ ದುರ್ಗಾಸ್ತಮಾನದಲ್ಲಿ ಯುದ್ಧದಲ್ಲಿ ಹೈದರಾಲಿ ಮದಕರಿ ನಾಯಕನನ್ನು ಕೊಲ್ಲುತ್ತಾನೆ. ಯುದ್ಧದಲ್ಲಿ ವೀರ ಮದಕರಿ ನಾಯಕ ವೀರ ಮರಣವನ್ನುಪ್ಪುತ್ತಾನೆ ಎಂದು ಉಲ್ಲೇಖವಾಗಿದೆ.
‘ಗಂಡುಗಲಿ ಮದಕರಿ ನಾಯಕ’ ಕಾದಂಬರಿಯಲ್ಲಿ ಏನಿದೆ..?
1981ರಲ್ಲಿ ಬಿಡುಗಡೆಯಾಗಿದ್ದ ಬಿ.ಎಲ್. ವೇಣು ವಿರಚಿತ ಕಾದಂಬರಿ ಗಂಡುಗಲಿ ಮದಕರಿ ನಾಯಕ ಕಾದಂಬರಿಯಲ್ಲಿ ಹೈದರಾಲಿಯ ವಿರುದ್ಧ ಸೋಲು ಖಚಿತವಾದಾಗ ಮದಕರಿ ನಾಯಕ ಸ್ವತಃ ಖಡ್ಗದಿಂದ ತಲೆ ಕಡಿದುಕೊಂಡು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾನೆ ಎಂದು ಉಲ್ಲೇಖವಾಗಿದೆ.
ವಕೀಲ ಪ್ರಸನ್ನ ಹೇಳುವ ಇತಿಹಾಸ ಏನು..?
ಹೈದರಾಲಿಗೆ ಚಿತ್ರದುರ್ಗ ಕೋಟೆ ಗೆಲ್ಲಲು ಸಾಧ್ಯವಾಗುವುದಿಲ್ಲ. ಸಂಧಾನಕ್ಕಾಗಿ ಮದಕರಿ ನಾಯಕನನ್ನು ಕರೆಸಿಕೊಳ್ಳುತ್ತಾನೆ. ಸಂಧಾನಕ್ಕೆ ಹೋದ ಮದಕರಿ ನಾಯಕನನ್ನು ಬಂಧಿಸುತ್ತಾನೆ. ಗೃಹಬಂಧನದಲ್ಲಿದ್ದ ಮದಕರಿಗೆ ಅನ್ನದಲ್ಲಿ ವಿಷವಿಟ್ಟು ಕೊಲ್ಲಿಸುತ್ತಾನೆ ಎಂದು ಮದಕರಿ ನಾಯಕ ವಂಶಸ್ಥ ದೊಡ್ಡ ಮದಕರಿ ನಾಯಕರು ಬರೆದಿಟ್ಟಿದ್ದಾರೆ ಎಂಬುದು ಪ್ರಸನ್ನ ವಾದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.