ಪ್ರಕಾಶ್ ರೈ ವಿರುದ್ಧ ಹೆಚ್ಚಾದ ಆಕ್ರೋಶ; ರೈ ಪರ ಬೀದಿಗಿಳಿದ ಎಡಪಂಥೀಯರು

By Suvarna Web DeskFirst Published Oct 3, 2017, 8:27 PM IST
Highlights

ನಟ ಪ್ರಕಾಶ್​ ರೈ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿಚಾರವಾಗಿ ಆಡಿದ ಮಾತುಗಳು ಈಗ ವಿವಾದದ ಕಿಡಿ ಹೊತ್ತಿಸಿವೆ. ಇನ್ನೊಂದೆಡೆ ಪ್ರಕಾಶ್​ ರೈ ಪರವಾಗಿ ಬೆಂಗಳೂರಿನಲ್ಲಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದಿವೆ.

ಬೆಂಗಳೂರು (ಅ.03): ನಟ ಪ್ರಕಾಶ್​ ರೈ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ವಿಚಾರವಾಗಿ ಆಡಿದ ಮಾತುಗಳು ಈಗ ವಿವಾದದ ಕಿಡಿ ಹೊತ್ತಿಸಿವೆ. ಇನ್ನೊಂದೆಡೆ ಪ್ರಕಾಶ್​ ರೈ ಪರವಾಗಿ ಬೆಂಗಳೂರಿನಲ್ಲಿ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಗಳು ನಡೆದಿವೆ.

ಪ್ರಧಾನಿ ನರೇಂದ್ರ  ಮೋದಿ ಮತ್ತು ಯೋಗಿ ಆದಿತ್ಯನಾಥ್​ ವಿರುದ್ಧ ಡಿವೈಎಫ್​ಐ ಕಾರ್ಯಕ್ರಮದಲ್ಲಿ ಪಾಳ್ಗೊಂಡು ನಟ ಪ್ರಕಾಶ್​ ರೈ ಆಡಿದ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರಾಜಕೀಯ ವಲಯದಲ್ಲಿ ವಿವಾದ ಕಿಡಿ ಭುಗಿಲೇಳುವಂತೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್​ ರೈ ವಿರುದ್ಧ ಆಕ್ರೋಶ ಮುಂದುವರಿದಿದ್ದರೆ, ರಾಜ್ಯ ಬಿಜೆಪಿ ನಾಯಕರು ಕೂಡಾ ನಟ ರೈ ವಿರುದ್ಧ ಮುಗಿಬಿದ್ದಿದ್ದಾರೆ. ನಿಜ ಜೀವನದಲ್ಲೂ ಖಳನಟರಾಗಬೇಡಿ, ಮೋದಿ ವಿರುದ್ಧ ಬೀದಿಯಲ್ಲಿ ಮಾತನಾಡಿದರೆ ಅದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಬಿಜೆಪಿ ಸಂಸದ ಪ್ರತಾಪಸಿಂಹ ಎಚ್ಚರಿಸಿದ್ದಾರೆ.

Latest Videos

ಇನ್ನು ಪ್ರಕಾಶ್​ ರೈ ಅವರಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರೆ, ನಟ ರೈ ಅವರ ಕ್ಷೇತ್ರವನ್ನಷ್ಟೇ ನೋಡಿಕೊಳ್ಳಲಿ ಎಂದು ಬಿಜೆಪಿ ಶಾಸಕ ಸುರೇಶ್​ ಕುಮಾರ್​ ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಪ್ರಕಾಶ್​ ರೈ ಅವರಿಗೆ ಬೆಂಬಲವಾಗಿ ಎಡಪಂಥೀಯ ಸಂಘಟನೆಗಳು ಬೀದಿಗಳಿದಿವೆ. ಬೆಂಗಳೂರಿನ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಡಿವೈಎಫ್​ಐ ಮತ್ತು ಎಸ್​ಎಫ್​ಐ ಪ್ರತಿಭಟನೆ ನಡೆಸಿದರೆ ಪುರಭವನದ ಎದುರು ಸಮಾನ ಮನಸ್ಕರ ವೇದಿಕೆ ಹೆಸರಿನಲ್ಲಿ ಪ್ರತಿಭಟನೆ ನಡೆದಿದೆ.

ಒಟ್ಟಾರೆ, ನಟ ಪ್ರಕಾಶ್​ ರೈ ಹೇಳಿದ ಮಾತು ಈಗ ವಿವಾದದ ಕಿಡಿ ಹೊತ್ತಿಸಿರುವುದಂತೂ ನಿಜ. ಇದರ ಜೊತೆಯಲ್ಲೇ ಸಾಮಾಜಿಕ ಜಾಲತಾಣದಲ್ಲಂತೂ ಎಡಪಂಥೀಯ ಮತ್ತು ಬಲಪಂಥೀಯರ ನಡುವಿನ ವಾರ್​ಗೆ ದೊಡ್ಡ ವೇದಿಕೆ ಒದಗಿಸಿದಂತಾಗಿದೆ.

 

 

 

click me!