ಕೊಡಗು ಸಂತ್ರಸ್ತರ ಹಣ ಇನ್ನೂ ಕೊಡದ ಸಾರಿಗೆ ಸಂಸ್ಥೆ

By Web DeskFirst Published Apr 30, 2019, 9:13 AM IST
Highlights

ಕೊಡಗು ನೆರೆ ಸಂತ್ರಸ್ತರ ನೆರವಿಗಾಗಿ ಕೆಎಸ್‌ಆರ್‌ಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳಲ್ಲಿ ನೌಕರರು ಹಾಗೂ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಿ ಸಂಗ್ರಹಿಸಿದ್ದ ಸುಮಾರು 9.03 ಕೋಟಿ ರು. ಹಣ ಆರು ತಿಂಗಳು ಕಳೆದರೂ ಮುಖ್ಯಮಂತ್ರಿಗಳ ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿಯೇ ಇಲ್ಲ!
 

ಬೆಂಗಳೂರು (ಏ.30): ಕೊಡಗು ನೆರೆ ಸಂತ್ರಸ್ತರ ನೆರವಿಗಾಗಿ ಕೆಎಸ್‌ಆರ್‌ಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳಲ್ಲಿ ನೌಕರರು ಹಾಗೂ ಅಧಿಕಾರಿಗಳ ಒಂದು ದಿನದ ವೇತನ ಕಡಿತಗೊಳಿಸಿ ಸಂಗ್ರಹಿಸಿದ್ದ ಸುಮಾರು 9.03 ಕೋಟಿ ರು. ಹಣ ಆರು ತಿಂಗಳು ಕಳೆದರೂ ಮುಖ್ಯಮಂತ್ರಿಗಳ ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿಯೇ ಇಲ್ಲ!

ರಫೇಲ್‌: ಮತ್ತೆ ಬ್ರಾಕೆಟ್‌ನಲ್ಲಿ ರಾಹುಲ್‌ ಕ್ಷಮೆ!

ಇದರಿಂದಾಗಿ ಆಡಳಿತ ಮಂಡಳಿಯು ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದೆಯೇ ಎಂಬ ಅನುಮಾನ ನಿಗಮದ ಸಿಬ್ಬಂದಿಗೆ ಆರಂಭವಾಗಿದೆ. ಅಲ್ಲದೆ, ಆರು ತಿಂಗಳ ಹಿಂದೆ ಹಣ ಸಂಗ್ರಹಿಸಿ ಇದುವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡದಿರುವುದರ ಬಗ್ಗೆ ನೌಕರರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಸಾರಿಗೆ ನಿಗಮಗಳು ಈ ಹಣವನ್ನು ದುರುಪ ಯೋಗಪಡಿಸಿ ಕೊಂಡಿರುವ ಅನುಮಾನವಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್‌ಟಿಐ ಕಾರ್ಯಕರ್ತ ಯೋಗೇಶ್ ಗೌಡ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

ಕಳೆದ ೨೦೧೮ರ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಗೆ ಕೊಡಗು ಜಿಲ್ಲೆಯಲ್ಲಿ ನೆರೆ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಯಿತು. ಈ ವೇಳೆ ರಾಜ್ಯದ ಇತರ ಎಲ್ಲ ಸಂಘ ಸಂಸ್ಥೆಗಳಂತೆಯೇ ಸಾರಿಗೆ ನಿಗಮಗಳು ಕೂಡ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದವು. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಕೂಡ ನೆರೆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಎಸ್‌ಆರ್ ಟಿಸಿ ಹಾಗೂ ಎನ್‌ಇಎಸ್‌ಆರ್‌ಟಿಸಿ ಸಾರಿಗೆ ನಿಗಮಗಳ ಸುಮಾರು 1.20 ಲಕ್ಷ ನೌಕರರ ಒಂದು ದಿನದ ವೇತನ ಕಡಿತಗೊಳಿಸಿ ಮುಖ್ಯಮಂತ್ರಿಗಳ ಕೊಡಗು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದರು.

ಅದರಂತೆ ನಾಲ್ಕು ಸಾರಿಗೆ ನಿಗಮದ ನೌಕರರು ಹಾಗೂ ಅಧಿಕಾರಿಗಳಿಂದ 2018 ರ ಅಕ್ಟೋಬರ್ ತಿಂಗಳ ಒಂದು ದಿನದ ವೇತನ ಕಡಿತಗೊಳಿಸಿ 9.03 ಕೋಟಿ ರು. ಸಂಗ್ರಹಿಸಲಾಯಿತು. ಆದರೆ, ಆ ಹಣವನ್ನು ಇದುವರೆಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡದೆ ವಿಳಂಬನೀತಿ ಅನುಸರಿಸ ಲಾಗಿದೆ. ಈ ವಿಳಂಬಕ್ಕೆ ಕಾರಣ ಏನೆಂಬುದು ಇನ್ನೂ ನಿಗೂಢವಾಗಿದೆ.

ಉಮಾ ಎದುರು ಸಾಧ್ವಿ ಪ್ರಜ್ಞಾ ಕಣ್ಣೀರಧಾರೆ

ಈ ಬಗ್ಗೆ ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರನ್ನು ಪ್ರಶ್ನಿಸಿದಾಗ ನೀತಿ ಸಂಹಿತೆಯ ನೆಪ ಮುಂದೊಡ್ಡುತ್ತಾರೆ. ಆದರೆ, ನೀತಿ ಸಂಹಿತೆ ಆರಂಭವಾಗುವ ಮೊದಲೇ ಹಣ ಸಂಗ್ರಹವಾಗಿತ್ತು. ಸರ್ಕಾರದ ಇತರ ಸಂಸ್ಥೆಗಳು ಇದೇ ರೀತಿ ಸಂಗ್ರಹಿಸಿದ ಹಣವನ್ನು ಸಿಎಂ ಪರಿಹಾರ ನಿಧಿಗೆ ತಲುಪಿಸಿರುವಾಗ ಸಾರಿಗೆ ಸಂಸ್ಥೆಯ ನಿಗಮಗಳಿಗೆ ಮಾತ್ರ ಏಕೆ ಈ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಸಿಬ್ಬಂದಿ ಪ್ರಶ್ನಿಸುತ್ತಾರೆ.

ಮತ್ತೊಂದು ಮಳೆಗಾಲ ಬಂತು: 

ನಾಲ್ಕು ಸಾರಿಗೆ ನಿಗಮಗಳಿಂದ ಸಂಗ್ರಹವಾಗಿರುವ ಹಣವನ್ನು ಕೊಡಗು ನೆರೆ ಸಂತ್ರಸ್ತರ ಸಿಎಂ ಪರಿಹಾರ ನಿಧಿಗೆ ನೀಡದೆ ವಿಳಂಬ ಮಾಡುತ್ತಿರುವುದು ಏಕೆಂಬುದು ಗೊತ್ತಾಗುತ್ತಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ನೆರೆ ಸಂಭವಿಸಿತ್ತು. ಇದೀಗ ಮತ್ತೊಂದು ಮಳೆಗಾಲ ಬಂದರೂ ಹಣ ನೀಡದಿರುವುದು ನಿಗಮದ ಆಡಳಿತ ಮಂಡಳಿಗಳ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.

ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿರುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಮಾಡಿದ್ದರೆ ಅದು ನಾಚಿಕೆಗೇಡು. ಇನ್ನಾದರೂ ವಿಳಂಬ ಮಾಡದೆ ಹಣ ವನ್ನು ಸಿಎಂ ಪರಿಹಾರ ನಿಧಿಗೆ ತಲುಪಿಸಬೇಕು ಎನ್ನು ತ್ತಾರೆ ಬಿಎಂಟಿಸಿಯ ಕಿರಿಯ ಅಧಿಕಾರಿಯೊಬ್ಬರು.

- ಮೋಹನ್ ಹಂಡ್ರಂಗಿ 

click me!