ಮಹಾರಾಷ್ಟ್ರದಲ್ಲಿ 5 ರು. ಮುಖಬೆಲೆಯ ಹೊಸ ನೋಟು ಬಿಡುಗಡೆ!

By Suvarna Web DeskFirst Published Nov 24, 2017, 11:35 PM IST
Highlights

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇರುವ ನೋಟು ಕೇಂದ್ರ ಸರ್ಕಾರ ಹೊಸದಾಗಿ ಚಲಾವಣೆಗೆ ತಂದ ಐವತ್ತು ರುಪಾಯಿಯ ನೋಟು.

ಕಳೆದ ವರ್ಷ ಇದೇ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ, ಹೊಸದಾಗಿ 500 ಮತ್ತು 2000 ಮುಖಬೆಲೆಯ ಹೊಸನೋಟು ಚಲಾವಣೆಗೆ ತಂದರು. ಆದಾದ ನಂತರ 50 ಮತ್ತು 200 ಮುಖಬೆಲೆಯ ಹೊಸ ನೋಟುಗಳನ್ನು ಮೋದಿ ಪರಿಚಯಿಸಿದರು. ಇದೀಗ 5 ರು. ಮುಖಬೆಲೆಯ ಹೊಸ ನೋಟನ್ನು ಮೋದಿ ಸರ್ಕಾರ ಪರಿಚಯಿಸುತ್ತಿದೆಯಂತೆ. ಇನ್ನು ಕೆಲವೇ ದಿನಗಳಲ್ಲಿ ಈ ನೋಟನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿಯುಳ್ಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರ 5 ರು. ಮುಖಬೆಲೆಯ ಹೊಸ ನೋಟನ್ನು ಪರಿಚಯಿಸಲಿದೆಯೇ? ಹಾಗಾದರೆ ಈಗಿರುವ ನೋಟುಗಳನ್ನು ಏನು ಮಾಡುವುದು ಎಂದು ಇದರ ಅಸಲಿತನವನ್ನು ಹುಡುಕ ಹೊರಟಾಗ ಬಯಲಾದ ಸತ್ಯವೇ ಬೇರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಇರುವ ನೋಟು ಕೇಂದ್ರ ಸರ್ಕಾರ ಹೊಸದಾಗಿ ಚಲಾವಣೆಗೆ ತಂದ ಐವತ್ತು ರುಪಾಯಿಯ ನೋಟು. ಆ 50 ರುಪಾಯಿ ನೋಟನ್ನು ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿ, 50 ಎಂದು ಸಂಖ್ಯೆಯಲ್ಲಿ ಬರೆದಿರುವ ಜಾಗದಲ್ಲಿ ಸೊನ್ನೆಯನ್ನು ಅಳಿಸಲಾಗಿದೆ. ಹೀಗಾಗಿ ಅದು 5 ರೂಪಾಯಿಯ ನೋಟಿನಂತೆ ಕಾಣಿಸುತ್ತಿದೆ. ಅಲ್ಲದೆ, ಈ ನೋಟನ್ನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಯಾವ ದಿನಾಂಕದಂದು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ತಿಳಿಸಿಲ್ಲ. ಈ ಬಗ್ಗೆ ಆರ್‌ಬಿಐ ಕೂಡ ಯಾವುದೇ ಸೂಚನೆ ನೀಡಿಲ್ಲ. ಅಲ್ಲಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ನಕಲಿ ಎಂಬುದು ಬೀತಾದಂತಾಯಿತು.

(ಕನ್ನಡಪ್ರಭ)

click me!