
ಮೈಸೂರು(ಜು.21): ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗದವರ ಅಳಿದುಳಿದ ಭಾಗ್ಯವನ್ನೂ ಕಿತ್ತುಕೊಂಡಿದ್ದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ನಂಜುಂಡಿ ಆರೋಪಿಸಿದರು.
ಕಾಂಗ್ರೆಸ್ ಬಿಟ್ಟು, ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮೊದಲ ಬಾರಿಗೆ ನಗರ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದುಳಿದವರ ಉದ್ಧಾರ ಸಾಧ್ಯ ಎಂದು ತಿಳಿಯಲಾಗಿತ್ತು. ಆದರೆ ಅಳಿದುಳಿದ ಭಾಗ್ಯವನ್ನು ಕಿತ್ತುಕೊಳ್ಳಲು ಬಂದಿದ್ದಾರೆ ಎಂಬ ತಿಳಿವಳಿಕೆ ಬರಲು ತಡವಾಯಿತು. ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ ನೀಡಿದರೆ ದೊಡ್ಡ ನಾಯಕರಾಗುತ್ತಾರೆ ಎಂಬ ನಂಬಿಕೆ ಇದೆ. ಸಿದ್ದರಾಮಯ್ಯ, ಸಮಾಜ ಕಟ್ಟದೆ ಅಧಿಕಾರ ಪಡೆದರು, ನಾನು ಅಧಿಕಾರ ಪಡೆಯದೆ ಸಮಾಜ ಕಟ್ಟಿದೆ ಎಂದು ಅವರು ತಿಳಿಸಿದರು.
ನನ್ನ ಹೆಗಲ ಮೇಲೆ ಕೈ ಹಾಕಿದವರನ್ನು ನಂಬುವುದೇ ಹಿಂದುಳಿದ ವರ್ಗದವರ ದೌರ್ಬಲ್ಯ. ಅಂತೆಯೇ ಸಿದ್ದರಾಮಯ್ಯ ನನ್ನ ಹೆಗಲ ಮೇಲೆ ಕೈಹಾಕಿದ್ದರಿಂದ ಕಾಂಗ್ರೆಸ್‌ಗಾಗಿ ದುಡಿದೆ. ರಾಜ್ಯಾದ್ಯಂತ ಸಂಚರಿಸಿ 45 ಲಕ್ಷ ವಿಶ್ವಕರ್ಮ ಸಮಾಜದ ವರನ್ನು ಒಗ್ಗೂಡಿಸಿದೆ. ಆದರೆ ಸಿದ್ದರಾಮಯ್ಯ ಆಗಲಿ, ಪರಮೇಶ್ವರ್ ಆಗಲಿ ವಿಶ್ವಕರ್ಮ ಸಮಾಜಕ್ಕೆ ಒಂದು ರೂಪಾ ಯಿಯನ್ನೂ ನೀಡಲಿಲ್ಲ. ಸಮಾಜ ಸಂಘಟನೆಯ ಜೊತೆಗೆ, ರಾಜಕೀಯ ಸಂಘಟನೆಗಾಗಿ 16 ವರ್ಷದಿಂದ ಕಾಂಗ್ರೆಸ್‌ನಲ್ಲಿ ದುಡಿದೆ ಹೊರತು, ಸಮಾಜವನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ ಎಂದು ಅವರು ಹೇಳಿದರು.
ಸ್ಲಂನಲ್ಲಿ ಹುಟ್ಟಿ ಬೆಳೆದವನು: ಈಗ ಹಿಂದುಳಿದವರನ್ನು ಸಂಘಟಿಸಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಛಲದೊಂದಿಗೆ ಬಿಜೆಪಿ ಸೇರಿದ್ದೇನೆ. ಎಲ್ಲಾ ಅರ್ಹತೆ ಇದ್ದರೂ ಕಾಂಗ್ರೆಸ್‌ನಲ್ಲಿ ನನಗೆ ಯಾವುದೇ ಸ್ಥಾನ ಸಿಗಲಿಲ್ಲ. ಮೂರು ವರ್ಷದ ಹಿಂದೆಯೇ ವಿಧಾನ ಪರಿಷತ್ ಸದಸ್ಯನಾಗುವ ಅವಕಾಶವಿತ್ತು. ಆದರೆ ಸಿದ್ದರಾಮಯ್ಯ ಮತ್ತು ಆಸ್ಕರ್ ಫರ್ನಾಂಡಿಸ್ ಕೈಕೊಟ್ಟಿದ್ದಾಗಿ ಅವರು ಆರೋಪಿಸಿದ ಅವರು, ಸ್ವಾಭಿಮಾನವನ್ನು ಸಿದ್ದರಾಮಯ್ಯ ಗುತ್ತಿಗೆ ಪಡೆದಿಲ್ಲ. ಅವರು ಹಳ್ಳಿಯಲ್ಲಿ ಹುಟ್ಟಿದರೆ, ನಾನು ಸ್ಲಂನಲ್ಲಿ ಹುಟ್ಟಿ ಈ ಎತ್ತರಕ್ಕೆ ಬೆಳೆದಿದ್ದೇನೆ ಎಂದು ಸವಾಲು ಹಾಕುವಂತೆ ಟೀಕಿಸಿದರು.
ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ಶಿವಣ್ಣ, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ಗೋಪಾಲರಾವ್, ಮಾರ್ಬಳ್ಳಿ ಮೂರ್ತಿ, ಜಿಲ್ಲಾ ಹಾಪ್‌ಕಾಮ್ಸ್‌ನ ಮಾಜಿ ಅಧ್ಯಕ್ಷ ಬೋರೇಗೌಡ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.