ಕೊಡಗಲ್ಲಿ ಎಲ್ಲಾ ದಾಖಲೆ ಒಂದೇ ಕಡೆ ವಿತರಣೆ

By Web DeskFirst Published Aug 23, 2018, 11:22 AM IST
Highlights

ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಪ್ರಮುಖ ಪ್ರಮಾಣ ಪತ್ರಗಳು, ದಾಖಲೆಗಳು ಹಾಗೂ ಗುರುತಿನ ಚೀಟಿಗಳು ಪ್ರವಾಹದ ಪಾಲಾಗಿರುವ ಹಿನ್ನೆಲೆಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರದ ಸಹಕಾರದಿಂದ ಒಂದೇ ಕಡೆ ಎಲ್ಲಾ ದಾಖಲೆಗಳನ್ನು ಒದಗಿಸಲು ತೀರ್ಮಾನ ಮಾಡಲಾಗಿದೆ.

ಬೆಂಗಳೂರು :  ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಪ್ರಮುಖ ಪ್ರಮಾಣ ಪತ್ರಗಳು, ದಾಖಲೆಗಳು ಹಾಗೂ ಗುರುತಿನ ಚೀಟಿಗಳು ಪ್ರವಾಹದ ಪಾಲಾಗಿರುವ ಹಿನ್ನೆಲೆಯಲ್ಲಿ ಅಟಲ್‌ಜೀ ಜನಸ್ನೇಹಿ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರದ ಸಹಕಾರದಿಂದ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಎಲ್ಲರಿಗೂ ನಕಲಿ ಗುರುತಿನ ಚೀಟಿ, ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಡಲೇ ಒದಗಿಸುವಂತೆ ಕಂದಾಯ ಇಲಾಖೆ ಆದೇಶಿಸಿದೆ.

ಪ್ರವಾಹದಿಂದಾಗಿ ಮನೆಗಳು ನೆಲಸಮಗೊಂಡಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಗುರುತಿನ ಚೀಟಿಗಳು, ಆಸ್ತಿ ದಾಖಲೆಗಳು, ಬ್ಯಾಂಕ್‌ ಪಾಸ್‌ಪುಸ್ತಕ, ಪಡಿತರ ಚೀಟಿ ಸೇರಿದಂತೆ ಹಲವು ಮಹತ್ವದ ಪ್ರಮಾಣಪತ್ರ ಹಾಗೂ ದಾಖಲೆಗಳು ನಾಶವಾಗಿವೆ.

ಹೀಗಾಗಿ ಸಾರ್ವಜನಿಕರಿಗೆ ಇವುಗಳನ್ನು ತ್ವರಿತವಾಗಿ ದೊರಕಿಸಿಕೊಡುವ ಸಲುವಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಬ್ಯಾಂಕ್‌, ಸಾರಿಗೆ ಇಲಾಖೆ, ಶಾಲಾ ಹಾಗೂ ಕಾಲೇಜು ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೂಡಲೇ ನಕಲಿ ದಾಖಲೆ ನೀಡಲಿದ್ದಾರೆ. ನಕಲಿ ದಾಖಲೆ ಪಡೆಯಲು ದಾಖಲೆ ಕಳೆದುಕೊಂಡಿರುವ ಬಗ್ಗೆ ಪೊಲೀಸ್‌ ದೂರು ಅಥವಾ ಎಫ್‌ಐಆರ್‌ ಪ್ರತಿ ಸಲ್ಲಿಸಬೇಕಾದ ಅಗತ್ಯವಿಲ್ಲ. ಜತೆಗೆ ಆಧಾರ್‌ ಕಾರ್ಡ್‌ ಪ್ರತಿ ಹಾಗೂ ಸಂಖ್ಯೆಯನ್ನೂ ಸಹ ಕೂಡಲೇ ವಿತರಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.

ನರೇಗಾ ಅಡಿ ಕೆಲಸ:  ನೆರೆಯಿಂದಾಗಿ ಕೆಲಸ ಕಳೆದುಕೊಂಡಿರುವ ದಿನಗೂಲಿ ಕಾರ್ಮಿಕರನ್ನು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ನೇಮಿಸಿಕೊಂಡು ಕಟ್ಟಡ ತ್ಯಾಜ್ಯ ವಿಲೇವಾರಿಗೆ ಬಳಸಿಕೊಳ್ಳಲಾಗುವುದು.

ಇನ್ನು ಶಿಕ್ಷಣ ಇಲಾಖೆಯು ಪಠ್ಯ ಪುಸ್ತಕ ಕಳೆದುಕೊಂಡವರಿಗೆ ಕೂಡಲೇ ಪಠ್ಯಪುಸ್ತಕ ಒದಗಿಸುವಂತೆ ಸರ್ಕಾರ ಆದೇಶಿಸಿದೆ. ಜತೆಗೆ 20 ದಿನಗಳ ಕಾಲ ತರಗತಿಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮೂರು ತಿಂಗಳವರೆಗೆ ಹೆಚ್ಚುವರಿ ತರಗತಿಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.

ಸಹಜ ಸ್ಥಿತಿಗೆ ವಿದ್ಯುತ್‌, ಮೊಬೈಲ್‌ ಸೇವೆ

ವಿದ್ಯುತ್‌ ಸಂಪರ್ಕ ಕಡಿದುಕೊಂಡಿದ್ದ 15 ಜಿಲ್ಲೆಗಳಿಗೆ ವಿದ್ಯುತ್‌ ಸೌಲಭ್ಯ ಒದಗಿಸಲಾಗಿದೆ. ಹಾಳಾಗಿದ್ದ ಮೊಬೈಲ್‌ ನೆಟ್‌ವರ್ಕ್ ಸೌಲಭ್ಯವನ್ನು ಎಲ್ಲ ಮೊಬೈಲ್‌ ಸೇವಾ ಕಂಪೆನಿಗಳು ದುರಸ್ತಿ ಮಾಡಿವೆ. ಈ ಭಾಗದಲ್ಲಿರುವ ಒಟ್ಟು 550 ಮೊಬೈಲ್‌ ನೆಟ್‌ವರ್ಕ್ಗಳ ಪೈಕಿ 544 ನೆಟ್‌ವರ್ಕ್ ಟವರ್‌ಗಳನ್ನು ಸುಸ್ಥಿತಿಗೆ ತರಲಾಗಿದೆ.

ಕರ್ನಾಟಕ ರಾಜ್ಯ ಕೈ ಮಗ್ಗ ಅಭಿವೃದ್ಧಿ ನಿಗಮದಿಂದ 15 ಟನ್‌ ಬಟ್ಟೆಗಳನ್ನು ಹೆಲಿಕಾಪ್ಟರ್‌ ಮೂಲಕ ರವಾನಿಸಲಾಗಿದೆ. ಬೆಡ್‌ಶೀಟ್‌, ಟವಲ್‌, ನ್ಯಾಪ್‌ಕಿನ್‌, ಸೀರೆ, ಶರ್ಟ್‌ ಹಾಗೂ ಲುಂಗಿಗಳನ್ನು ಯಲಹಂಕ ಏರ್‌ಫೋರ್ಸ್‌ ಸ್ಟೇಷನ್‌ನಿಂದ ಮೈಸೂರಿಗೆ ಹೆಲಿಕಾಪ್ಟರ್‌ ಮೂಲಕ ರವಾನಿಸಿದ್ದು, ಬಳಿಕ ಕೊಡಗಿಗೆ ಕಳುಹಿಸಲಾಗಿದೆ.

ಕೊಡಗಿನ 51 ನಿರಾಶ್ರಿತರ ಶಿಬಿರಗಳಲ್ಲಿನ 6,996 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 3 ಶಿಬಿರದಲ್ಲಿನ 313 ಸೇರಿದಂತೆ ಒಟ್ಟು 7,309 ಮಂದಿ ನಿರಾಶ್ರಿತರಿಗೆ ಎಲ್ಲಾ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ ಎಂದು ಕಂದಾಯ ಇಲಾಖೆಯು ವರದಿ ನೀಡಿದೆ.

click me!