​ವಿದೇಶಿ ನೆರವು ಸ್ವೀಕಾರಕ್ಕೆ ಭಾರತದ ನಿರಾಕರಣೆ ಯಾಕೆ..?

By Web DeskFirst Published Aug 23, 2018, 11:12 AM IST
Highlights

ಪ್ರವಾಹ ಪೀಡಿತವಾದ ಕೇರಳಕ್ಕೆ ವಿದೇಶದಿಂದ ನೀಡುತ್ತಿರುವ ನೆರವನ್ನು ಭಾರತ ನಿರಾಕರಿಸುತ್ತಿದೆ. ವಿವಿಧ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡಿದ್ದರು ಕೇಂದ್ರ ಸರ್ಕಾರ ಸ್ವೀಕಾರ ಮಾಡಿಲ್ಲ. 

ನವದೆಹಲಿ: ಪ್ರವಾಹ ಪೀಡಿತ ಕೇರಳಕ್ಕೆ ವಿದೇಶಗಳು ಪ್ರಕಟಿಸಿದ್ದ ನೆರವನ್ನು ಭಾರತ ಸರ್ಕಾರ ನಿರಾಕರಿಸಿದೆ. ಇದಕ್ಕೆ 2004ರಲ್ಲಿ ಅಂದಿನ ಮನಮೋಹನ ಸಿಂಗ್‌ ಸರ್ಕಾರವು ‘ವಿದೇಶಿ ದೇಣಿಗೆಯನ್ನು ಪ್ರಾಕೃತಿಕ ದುರಂತದ ಸಂದರ್ಭದಲ್ಲಿ ಸ್ವೀಕರಿಸುವುದಿಲ್ಲ. ಭಾರತವು ತನ್ನ ಸ್ವಂತ ಬಲದ ಮೇಲೆ ವಿಕೋಪ ಪರಿಹಾರ ಕೈಗೆತ್ತಿಕೊಳ್ಳಲು ಸರ್ವಶಕ್ತವಾಗಿದೆ’ ಎಂದು ರೂಪಿಸಿದ ವಿದೇಶಾಂಗ ನೀತಿಯೇ ಇದಕ್ಕೆ ಕಾರಣ.

ಭಾರತಕ್ಕೆ ಯುಎಇ 700 ಕೋಟಿ ರುಪಾಯಿ, ಮಾಲ್ಡೀವ್ಸ್ 35 ಲಕ್ಷ ರುಪಾಯಿ ಪ್ರಕಟಿಸಿದ್ದವು. ಸೌದಿ ಅರೇಬಿಯಾ, ಥಾಯ್ಲೆಂಡ್‌ ಕೂಡ ನೆರವು ಘೋಷಿಸಿದ್ದವು. ಆದರೆ ಬುಧವಾರ ರಾತ್ರಿ ಈ ಬಗ್ಗೆ ಪ್ರಕಟಣೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ‘ಪ್ರಕೃತಿ ವಿಕೋಪವನ್ನು ನಮ್ಮ ಸಂಪನ್ಮೂಲ ಬಳಸಿಕೊಂಡೇ ಎದುರಿಸಲಿದ್ದೇವೆ. ವಿದೇಶಿ ದೇಣಿಗೆಯನ್ನು ವಿನಮ್ರವಾಗಿ ನಿರಾಕರಿಸುತ್ತಿದ್ದೇವೆ’ ಎಂದು ಹೇಳಿದೆ.

Latest Videos

ಥಾಯ್ಲೆಂಡ್‌ ವಿಷಾದ:

ನೆರವು ನಿರಾಕರಿಸಿದ ಭಾರತದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದಲ್ಲಿನ ಥಾಯ್ಲೆಂಡ್‌ ರಾಯಭಾರಿ ಚೂತಿಂಟ್ರನ್‌ ಸ್ಯಾಮ್‌ ಗಾಂಗ್‌ಸಕ್ಡಿ ‘ಭಾರತ ವಿದೇಶಿ ನೆರವು ನಿರಾಕರಿಸಿದೆ ಎಂದು ಹೇಳಲು ವಿಷಾದವಿದೆ. ಆದರೆ ಕೇರಳ ಸಂತ್ರಸ್ತರ ಮೇಲೆ ನಮಗೆ ಸಹಾನುಭೂತಿ ಇದೆ’ ಎಂದಿದ್ದಾರೆ.

700 ಕೋಟಿ ತಿರಸ್ಕರಿಸಿದ್ದಕ್ಕೆ ಕೇರಳ ಸಿಎಂ ಆಕ್ರೋಶ

ಭಾರತ ಸರ್ಕಾರದ ವಿದೇಶಿ ದೇಣಿಗೆ ನಿರಾಕರಣೆ ನೀತಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಖಂಡಿಸಿದ್ದಾರೆ. ‘ಇತ್ತ ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ. ವಿದೇಶೀ ದೇಣಿಗೆಗೂ ಬೇಡ ಎನ್ನುತ್ತಿದೆ. ಹಾಗಿದ್ದರೆ ಕೇರಳಕ್ಕೆ ಪರಿಹಾರ ಧನ ನೀಡೋರಾರ‍ಯರು’ ಎಂದು ಪ್ರಶ್ನಿಸಿದ್ದಾರೆ. ತಕ್ಷಣಕ್ಕೆ ಪರಿಹಾರ ಕಾರ್ಯಕ್ಕೆಂದು 2000 ಕೋಟಿ ರು. ಬೇಕು ಎಂದು ಕೇರಳ ಮನವಿ ಸಲ್ಲಿಸಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಈಗಿನ ಮಟ್ಟಿಗೆ 600 ಕೋಟಿ ರು. ಮಾತ್ರ ಬಿಡುಗಡೆ ಮಾಡಿರುವುದು ಕೇರಳದ ಅಸಮಾಧಾನಕ್ಕೆ ಕಾರಣ.

ಸಮರ್ಥನೆ:  ಇನ್ನು ಈ ಹಿಂದೆ ಸೌದಿ, ಒಮಾನ್‌, ಯುಎಇನಲ್ಲಿ ಭಾರತದ ರಾಯಭಾರಿಯಾಗಿದ್ದ ತಲ್ಮೀಜ್‌ ಅಹಮದ್‌ ಕೂಡಾ ಭಾರತದ ಅಭಿಪ್ರಾಯ ಅನುಮೋದಿಸಿದ್ದಾರೆ. ಈ ಹಿಂದೆ ಯಾವುದೇ ಸಮಯದಲ್ಲಿ ಯಾವುದೇ ದೇಶ ಭಾರತಕ್ಕೆ ಆರ್ಥಿಕ ನೆರವು ಪ್ರಕಟಿಸಿದ ಉದಾಹರಣೆ ಇಲ್ಲ ಎಂದಿದ್ದಾರೆ.

ಸಾಮಾನ್ಯವಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಯಾವ ವಸ್ತುಗಳ ಅಗತ್ಯ ಇದೆಯೋ ಅದನ್ನು ಮಾತ್ರ ರವಾನಿಸಲಾಗುತ್ತದೆ. ಸೌದಿ ಅರೇಬಿಯಾ ಸರ್ಕಾರ, ಭಾರತ ಸರ್ಕಾರವನ್ನು ಸಂಪರ್ಕಿಸದೆಯೇ ಈ ಪರಿಹಾರ ಪ್ರಕಟಿಸಿರಬಹುದು. ತನ್ನ ದೇಶದ ಅಭ್ಯುದಯಲ್ಲಿ ಕೇರಳಿಗರ ಪಾತ್ರವನ್ನು ಪರಿಗಣಿಸಿ ಅದು ಇಷ್ಟುದೊಡ್ಡ ಮೊತ್ತದ ನೆರವಿನ ಘೋಷಣೆ ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ವಿದೇಶಗಳು ಹಣದ ಬದಲು, ಯಾವ ವಸ್ತುವಿನ ಅಗತ್ಯವಿದೆ ಎಂದು ಅರಿತು ಅದನ್ನು ರವಾನಿಸಿದರೆ, ಹೆಚ್ಚು ಉಪಯುಕ್ತವಾಗುತ್ತದೆ ಎಂದು ಹೇಳಿದ್ದಾರೆ.

click me!