ಇಂದು ಬೆಳಗ್ಗೆ 10:15ಕ್ಕೆ ಜಾರ್ಜ್ ಪ್ರಮಾಣವಚನ ಸ್ವೀಕಾರ

By Internet DeskFirst Published Sep 26, 2016, 3:05 AM IST
Highlights

ಬೆಂಗಳೂರು(ಸೆ.26): ಡಿವೈಎಸ್​ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಜೆ. ಜಾರ್ಜ್​ ಮತ್ತೆ ಸಚಿವರಾಗುತ್ತಿದ್ದಾರೆ. ಇಂದು ಬೆಳಗ್ಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿರುವ ಕೆ.ಜೆ. ಜಾರ್ಜ್​, ರಾಜೀನಾಮೆ ನೀಡಿದ ಮೂರು ತಿಂಗಳೊಳಗೆ ಮತ್ತೆ ಸಚಿವರಾಗುತ್ತಿದ್ದಾರೆ. ಈಕುರಿತಾದ ಒಂದು ವರದಿ

ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೂರು ತಿಂಗಳು ಕಳೆಯುವ ಮುನ್ನವೇ ಕೆ.ಜೆ. ಜಾರ್ಜ್​ ಮತ್ತೆ ಸಚಿವರಾಗುತ್ತಿದ್ದಾರೆ. ಜುಲೈ 7ರಂದು ಡಿವೈಎಸ್​ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆ.ಜೆ. ಜಾರ್ಜ್​ ಹೆಸರು ಹೇಳಿದ್ದರು. ಈ ಹಿನ್ನಲೆಯಲ್ಲಿ ವಿಪಕ್ಷಗಳ ತೀವ್ರ ಹೋರಾಟದ ನಂತರ ಜುಲೈ 18ರಂದು ಕೆ.ಜೆ. ಜಾರ್ಜ್​ ಸಚಿವ ಸ್ಥಾನ ತೆರವುಗೊಳಿಸಿ, ಸಿದ್ದರಾಮಯ್ಯ ಕೈಗೆ ರಾಜೀನಾಮೆ ಪತ್ರವಿಟ್ಟಿದ್ದರು. ಇದಾಗಿ 3 ತಿಂಗಳೂ ಕಳೆದಿಲ್ಲ. ಜಾರ್ಜ್​ ಮತ್ತೆ ಮಿನಿಸ್ಟರ್​ ಆಗುತ್ತಿದ್ದಾರೆ.

Latest Videos

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಜಾರ್ಜ್​

ಬೆಳಗ್ಗೆ 10:15ಕ್ಕೆ ಸರಿಯಾಗಿ ರಾಜಭವನದಲ್ಲಿ ರಾಜ್ಯಪಾಲ ವಜೂಭಾಯ್​ ವಾಲಾ, ಜಾರ್ಜ್​ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. 3 ತಿಂಗಳ ಹಿಂದೆ ಸಿಎಂ ಬಳಿ ಜಾರ್ಜ್​ ಬಿಟ್ಟು ಹೋದ ಬೆಂಗಳೂರು ಅಭಿವೃದ್ಧಿ ಖಾತೆ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನವೇ ಜಾರ್ಜ್​ ಅವರಿಗೆ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಜಾರ್ಜ್​ ಇಷ್ಟು ತರಾತುರಿಯಲ್ಲಿ ಮತ್ತೆ ಸಚಿವರಾಗುತ್ತಿರುವ ಬಗ್ಗೆ ಬಿಜೆಪಿ ತಗಾದೆಯಿದೆ.

ಈಗಾಗಲೇ ಸಿಐಡಿ ತನಿಖೆ ನಡೆಸಿ ಮೂರೇ ತಿಂಗಳೊಳಗೆ ಜಾರ್ಜ್​ ಅವರಿಗೆ ಕ್ಲೀನ್​ ಚಿಟ್​ ನೀಡಿ ಬಿ-ರಿಪೋರ್ಟ್​ ಕೋರ್ಟ್​ಗೆ ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯನವರ ಸಂಪುಟದಲ್ಲಿ ಮುವತ್ತಮೂರು ಸಚಿವರನ್ನಿಟ್ಟುಕೊಂಡು ಒಂದು ಸ್ಥಾನ ಖಾಲಿ ಉಳಿಸಿಕೊಂಡಿದ್ದರು. ಆ ಒಂದು  ಸ್ಥಾನ ಜಾರ್ಜ್​ ಅವರಿಗೋಸ್ಕರ ಮೀಸಲಾಗಿತ್ತು ಎನ್ನುವ ರಾಜಕೀಯ ವಲಯದ ಮಾತು ದಿಟವಾಗುತ್ತಿದೆ. ಒಟ್ಟಾರೆ ಜಾರ್ಜ್ ಸಚಿವ ಸಂಪುಟ ಸೇರುವುದರೊಂದಿಗೆ ಸಿದ್ದರಾಮಯ್ಯ ಸಚಿವ ಸಂಪುಟ ಮೊದಲ ಬಾರಿ ಪೂರ್ಣವಾಗಲಿದೆ.

 

click me!