
ಕೇರಳ ಪತ್ರಕರ್ತರ ವೃತ್ತಿಪರತೆ ಆಗಸ್ಟ್ 15ರಂದು ಮೋದಿ ಭಾಷಣ ಮತ್ತು ಅಟಲ್ ನಿಧನದ ವಾರ್ತೆಗಳೇ ಸಂಪೂರ್ಣ ದೇಶದ ಚಾನೆಲ್‌ಗಳಲ್ಲಿ ತುಂಬಿಕೊಂಡಿದ್ದರೂ ಕೂಡ ಕೇರಳದ ಚಾನೆಲ್‌ಗಳು ಮತ್ತು ಪತ್ರಕರ್ತರು ಮಾತ್ರ ಸ್ಥಳೀಯ ಪ್ರವಾಹದ ಸುದ್ದಿ ಬಿಟ್ಟು ಏನನ್ನೂ ಪ್ರಸಾರ ಮಾಡಲಿಲ್ಲ. ತಮ್ಮ ಜನರ ಕಷ್ಟವನ್ನು ತೋರಿಸುವುದು, ಸ್ಪಂದಿಸುವುದು ಎಲ್ಲಾ ಮಾಧ್ಯಮಗಳ ಮೊದಲ ಆದ್ಯತೆ ಆಗಿರಬೇಕು ಬಿಡಿ.
ಮಸಾಲೆ ದೋಸೆ ಮಹಾತ್ಮೆ
ಅಟಲ್‌ಗೆ ಸಿಹಿ ಮತ್ತು ಕರಿದ ಸಮೋಸಾ ಎಂದರೆ ಪಂಚಪ್ರಾಣ. ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಭಾಷಣಕ್ಕೆ ಬಂದಿದ್ದ ಅಟಲ್ ಎದುರು ಅನಂತಕುಮಾರ್ ಕುಳಿತಾಗಲೇ ಹಣ್ಣು ಮತ್ತು ಟೋಸ್ಟ್ ಮಾತ್ರ ಕೊಡಿ ಎಂದು ದಿಲ್ಲಿಯಿಂದ ಪುತ್ರಿ ನಮಿತಾ ಫೋನ್ ಬಂತಂತೆ. ಆಗ ಇದನ್ನು ಕೇಳಿಸಿಕೊಂಡ ಅಟಲ್‌ಜಿ ಅನಂತ್ ನನಗೆ ಮಸಾಲೆ ದೋಸೆ ಬೇಕು ಎಂದರಂತೆ.
ಆದರೆ ರಾಜಭವನದಲ್ಲಿ ಹಿಟ್ಟು ಇರದೇ ಇದ್ದುದರಿಂದ ಪಕ್ಕದ ಚಾಲುಕ್ಯ ಹೋಟೆಲ್‌ನಿಂದ ಹಿಟ್ಟು ತರಿಸಿ ಮಸಾಲೆ ದೋಸೆ ಮಾಡಿಕೊಡಲಾಯಿತು. ದೋಸೆಗಾಗಿ ಸಭೆಗೆ ಅರ್ಧ ಗಂಟೆ ತಡವಾಗಿ ಹೋದ ಅಟಲ್, ಮಸಾಲೆ ದೋಸೆ ಬಗ್ಗೆಯೇ 15 ನಿಮಿಷ ಮಾತನಾಡಿದರಂತೆ. ಇನ್ನೊಮ್ಮೆ ಇಂದೋರ್‌ನ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಹೋದಾಗ ಊಟಕ್ಕೆ ಕುಳಿತ ಅಟಲ್ ಸುಷ್ಮಾ ಸ್ವರಾಜ್‌ರನ್ನು ಕರೆದು, ‘ನಾನು ಪೇಪರ್‌ನಲ್ಲಿ ಓದಿದ ಹಾಗೆ ಇವತ್ತು ಊಟಕ್ಕೆ ಮಾಲ್ಖೋವಾ ಸ್ವೀಟ್ ಎಂದು ಹೇಳಿದ್ರಿ, ಎಲ್ಲಿ ಕಾಣಲೇ ಇಲ್ಲ’ ಎಂದರಂತೆ. ಆಗ ಸುಷ್ಮಾ ಇಂದೋರ್‌ನ ಪೇಟೆಯಿಂದ ಮಾಲ್ಖೋವಾ ತರಿಸಿಕೊಟ್ಟರಂತೆ. ಒಮ್ಮೆ ಗ್ವಾಲಿಯರ್‌ಗೆ ಹೋಗಿದ್ದ ಅಟಲ್‌ಗೆ ಬೆಳಿಗ್ಗೆ ಅವಲಕ್ಕಿ ಮಾತ್ರ ಉಪಾಹಾರಕ್ಕೆ ಕೊಟ್ಟಿದ್ದರಂತೆ.
ಆಗ ಜಿಲ್ಲಾಧ್ಯಕ್ಷರಾಗಿದ್ದ ಈಗಿನ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕರೆಸಿಕೊಂಡ ಅಟಲ್, ‘ಆಪ್ ತೋಮರ್ ಹೋ, ಯಾನೆ ರಜಪೂತ್. ಲೇಕಿನ್ ಘಾಸ್‌ಪೂಸ್ ಖಿಲಾತೆ ಹೋ’ ಎಂದರಂತೆ. ಅಂದರೆ, ನೀವು ತೋಮರ್ ಅಂದರೆ ರಜಪೂತರು. ಆದರೆ ನಮಗೆ ಹುಲ್ಲುಕಡ್ಡಿ ತಿನ್ನಿಸುತ್ತೀರಿ ಎಂದರ್ಥ!
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.