
ಮೈಸೂರು[ಆ.18] ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಕಬಿನಿ, ನುಗು, ತಾರಕ ಜಲಾಶಯಗಳಿಂದ ಒಟ್ಟಾರೆ 90 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ನೀರು ಹೊರಬಿಡಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು, ಪಿರಿಯಾಪಟ್ಟಣ ತಾಲೂಕು ಸೇರಿದಂತೆ ಹಲವೆಡೆ ಮನೆ, ಪ್ರವಾಹಕ್ಕೆ 100ಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ.
ನಂಜನಗೂಡಿನ ಹಳ್ಳದಕೇರಿ, ಸರಸ್ವತಿ ಕಾಲೊನಿ, ಮರಾಠ ಬೀದಿ, ವಕ್ಕಲಗೇರಿ ಸೇರಿ ಹಲವೆಡೆ ಒಟ್ಟಾರೆ 31 ಮನೆಗಳು ಜಲಾವೃತಗೊಂಡಿವೆ. ಚಾಮಲಾಪುರ ಬೀದಿ ಹಾಗೂ ತಾಲೂಕಿನ ಕುಳ್ಳಕನುಂಡಿ, ಬೊಕ್ಕಹಳ್ಳಿಯ ಮನೆಗಳೂ ನೀರಿನಿಂದ ಆವೃತವಾಗಿವೆ. ನಂಜನಗೂಡು ಹೆದ್ದಾರಿಯ ಮಲ್ಲನಮೂಲೆ ಬಳಿ ನದಿ ಉಕ್ಕಿ ಹರಿದು ರಸ್ತೆಯಲ್ಲಿ 4 ಅಡಿಗಳಷ್ಟುನೀರು ನಿಂತಿದೆ. ಇದರಿಂದ ಗುರುವಾರ ರಾತ್ರಿಯಿಂದಲೇ ಮೈಸೂರು-ನಂಜನಗೂಡು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಮೂರು ದಿನ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಸುತ್ತೂರು ಸೇತುವೆಯೂ ಮುಳುಗಡೆ:
ಈಗಾಗಲೇ ಸುತ್ತೂರು ಸೇತುವೆ ಕೂಡ ಮುಳುಗಿರುವುದರಿಂದ ಮೈಸೂರು-ಸುತ್ತೂರು ಮಾರ್ಗ ಪೂರ್ಣ ಬಂದ್ ಆಗಿದೆ. ನೆರೆ ಸಂತ್ರಸ್ತರಿಗೆ ಶ್ರೀೕಕಂಠೇಶ್ವರ ದೇವಾಲಯದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಗಂಜಿ ಕೇಂದ್ರ ತೆರೆದಿದ್ದು ಹಳ್ಳದಕೇರಿ, ಮರಾಠ ಬೀದಿ, ತೋಪಿನ ಬೀದಿ ಜನರು ಆಶ್ರಯ ಪಡೆದಿದ್ದಾರೆ. ಸರಸ್ವತಿ ಕಾಲೊನಿಯ 15 ಕುಟುಂಬಗಳಿಗೆ ಅಂಗನವಾಡಿ ಕೇಂದ್ರದ ಗಂಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಶ್ರೀಕಂಠೇಶ್ವರ ದೇವಾಲಯ ಜಲಾವೃತ:
ಗುಂಡ್ಲು ನದಿಯ ಪ್ರವಾಹದಿಂದ ಐತಿಹಾಸಿಕ ಶ್ರೀಕಂಠೇಶ್ವರ ದೇವಾಲಯದ ಆವರಣಕ್ಕೂ ನೀರು ನುಗ್ಗಿದೆ. ಗುರುರಾಘವೇಂದ್ರ ಮಠದ ಯತಿಗಳ ಸಮಾಧಿ ಸ್ಥಳವಾದ ಪಂಚ ಬೃಂದಾವನಕ್ಕೂ ಪ್ರವಾಹದ ನೀರು ನುಗ್ಗಿದೆ.
ಶಾಲೆಗೆ ನುಗ್ಗಿದ ನೀರು:
ನಂಜನಗೂಡು ಮೇದರ ಗೇರಿ ಶಾಲೆಗೆ ನೀರು ನುಗ್ಗಿದ್ದರಿಂದ ರಜೆ ಘೋಷಿಸಲಾಗಿದೆ. ಲಿಂಗಾಭಟ್ಟರ ಗುಡಿ ಬಳಿಯ ಮುಸ್ಲಿಂ ಸ್ಮಶಾನ, ವೀರಶೈವರ ಸ್ಮಶಾನ, ಪರಶುರಾಮ ದೇವಾಲಯದ ಬಳಿಯ ಸ್ಮಶಾನಗಳಿಗೆ ನೀರು ನುಗ್ಗಿದ್ದರಿಂದಾಗಿ ಶವ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಿರಿಯಾಪಟ್ಟಣದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಟ್ಟದಪುರ ಹೊಬಳಿ ಭುವನಹಳ್ಳಿಯಲ್ಲಿ ಸುಮಾರು 5ಕ್ಕೂ ಹೆಚ್ಚು ಮನೆಗಳು ಕುಸಿದಿದೆ. ಇನ್ನು ಎಚ್.ಡಿ. ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲೂ ಹಲವು ಗ್ರಾಮಗಳಲ್ಲೂ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹುಣಸೂರಲ್ಲಿ ಲಕ್ಷ್ಮಣತೀರ್ಫ ಪ್ರವಾಹದಿಂದಾಗಿ ಹನಗೋಡು ಅಣೆಕಟ್ಟೆಯ ಹಿನ್ನೀರಿನಿಂದ ಸಾವಿರಾರು ಎಕರೆ ಪ್ರದೇಶದ ಬೆಳೆ ಜಲಾವೃತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.