ಹಿಂದಿ ಹೇರಿಕೆ: ಮೆಟ್ರೋಗೆ ಕನ್ನಡ ಪ್ರಾಧಿಕಾರ ನೋಟಿಸ್‌

Published : Jun 23, 2017, 10:03 AM ISTUpdated : Apr 11, 2018, 12:46 PM IST
ಹಿಂದಿ ಹೇರಿಕೆ: ಮೆಟ್ರೋಗೆ ಕನ್ನಡ ಪ್ರಾಧಿಕಾರ ನೋಟಿಸ್‌

ಸಾರಾಂಶ

ಬೆಂಗಳೂರು: ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ‘ನಮ್ಮ ಮೆಟ್ರೋ' ನಿಲ್ದಾಣಗಳಲ್ಲಿರುವ ನಾಮಫಲಕಗಳಲ್ಲಿ ಅನಾವ್ಯಶಕ ಹಿಂದಿ ಬಳಕೆ ಬಗ್ಗೆ 7 ದಿನದೊಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬಿಎಂಆರ್‌ಸಿಎಲ್‌ಗೆ ನೋಟಿಸ್‌ ಜಾರಿಗೊಳಿಸಿದೆ. ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ‘ನಮ್ಮ ಮೆಟ್ರೋ' ನಾಮಫಲಕಗಳಲ್ಲಿ ಅನಾವ್ಯಶಕವಾಗಿ ಹಿಂದಿ ಬಳಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ನಿಯಮ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ- ನಾಮಫಲಕಗಳು ಹಾಗೂ ಕೇಂದ್ರ ಗೃಹ ಸಚಿವಾಲಯದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ. ಬಿಎಂಆರ್‌ಸಿಎಲ್‌ನ ಈ ನಡವಳಿಕೆ ಅನಗತ್ಯವಾಗಿ ಹಿಂದಿ ಹೇರಿಕೆಯ ಕ್ರಮವಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ.  

ಬೆಂಗಳೂರು: ಪ್ರಾದೇಶಿಕ ಭಾಷಾ ನೀತಿ ಗಾಳಿಗೆ ತೂರಿ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೋ' ರೈಲಿನಲ್ಲಿ ಅನಗತ್ಯವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅನಿವಾಸಿ ಬಳಗ ಸೇರಿದಂತೆ ಹಲವು ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ‘ನಮ್ಮ ಮೆಟ್ರೋ' ಕ್ರಮದ ವಿರುದ್ಧ ಅಭಿಯಾನ ರೂಪಿಸಿದ್ದರೆ, ಹಿಂದಿ ಹೇರಿಕೆ ಕ್ರಮ ಖಂಡಿಸಿ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗಿವೆ.
ಈಗಾಗಲೇ ನಮ್ಮ ಮೆಟ್ರೋದ ಕೆಲವು ರೈಲು ನಿಲ್ದಾಣಗಳಲ್ಲಿ ಇಂಗ್ಲಿಷ್‌ ಭಾಷೆಯನ್ನೂ ಅಳಿಸಿ ಹಿಂದಿ ಹೇರಿಕೆ ಮಾಡುತ್ತಿರುವ ಹಾಗೂ ಹಿಂದಿಗೆ ಎರಡನೇ ಪ್ರಧಾನ ಭಾಷಾ ಸ್ಥಾನಮಾನ ನೀಡುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ ನಮ್ಮ ಮೆಟ್ರೋಗೆ ನೋಟಿಸ್‌ ಜಾರಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೂಚನೆ ಇಲ್ಲದಿದ್ದರೂ ಅನಗತ್ಯವಾಗಿ ಹಿಂದಿ ಬಳಕೆ ಮಾಡುತ್ತಿರುವುದರ ಬಗ್ಗೆ ಕಾರಣ ಕೇಳಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ ನೋಟಿಸ್‌ ಜಾರಿ ಮಾಡಿದ್ದಾರೆ.

ಮಾಲ್‌ಗಳಲ್ಲಿಯೇ ಕನ್ನಡ ಬಳಸದಿರುವುದನ್ನು ನಾವು ಸಹಿಸುವುದಿಲ್ಲ. ಇನ್ನು ಮೆಟ್ರೋದಲ್ಲಿ ಕನ್ನಡ ಕಡೆಗಣಿಸಿ ಹಿಂದಿ ಹೇರಿದರೆ ಸಹಿಸುತ್ತೇವೆಯೇ?
ವಾಟಾಳ್‌ ನಾಗರಾಜ್‌ಕನ್ನಡ ಒಕ್ಕೂಟದ ಅಧ್ಯಕ್ಷ

ಮೊದಲಿನಿಂದಲೂ ನಾವು ಹಿಂದಿ ಹೇರಿಕೆ ವಿರುದ್ಧ ಹೋರಾಡುತ್ತಿದ್ದರೆ ಇದೀಗ ನಮ್ಮ ಮೆಟ್ರೋ ಮತ್ತೆ ಹಿಂದಿ ಹೇರಿಕೆಗೆ ಮುಂದಾಗಿರುವುದು ತಪ್ಪು. ನಮಗೆ ಮಾತೃಭಾಷೆ ಕನ್ನಡ ಹಾಗೂ ವ್ಯಾವಹಾರಿಕವಾಗಿ ಇಂಗ್ಲಿಷ್‌ ಸಾಕು.
ಚಂದ್ರಶೇಖರ ಪಾಟೀಲ ಸಾಹಿತಿ

ಕೇವಲ 600 ವರ್ಷ ಇತಿಹಾಸವಿರುವ ಸಾಂವಿ ಧಾನಿಕವಾಗಿ ರಾಷ್ಟ್ರಭಾಷೆ ಎಂಬ ಮಾನ್ಯತೆಯೂ ಇಲ್ಲದ ಹಿಂದಿ ಭಾಷೆಯನ್ನು ರಾಜ್ಯದಲ್ಲಿ ಅನಗತ್ಯವಾಗಿ ತುರುಕಲಾಗುತ್ತಿದೆ. ಇದರಿಂದ 2,300 ವರ್ಷದ ಭವ್ಯ ಇತಿಹಾಸವಿರುವ ಕನ್ನಡ ಭಾಷೆಯನ್ನು ತುಳಿಯಲು ನಮ್ಮ ಮೆಟ್ರೋ ಅಧಿಕಾರಿಗಳು ಕುತಂತ್ರ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಅಭಿಯಾನ: ಅನಿವಾಸಿ ಬಳಗವು #NammaMetroHindiBeda (‘ನಮ್ಮ ಮೆಟ್ರೋ ಹಿಂದಿ ಬೇಡ') #NammaMetroKannadaSaaku (‘ನಮ್ಮ ಮೆಟ್ರೋ ಕನ್ನಡ ಸಾಕು') ಹ್ಯಾಷ್‌ಟ್ಯಾಗ್‌ ಬಳಸಿ ಹಿಂದಿ ಹೇರಿಕೆ ವಿರುದ್ಧ ಟ್ವೀಟರ್‌ ಅಭಿಯಾನ ರೂಪಿಸಿದೆ. 2 ಗಂಟೆ ಅವಧಿಯಲ್ಲಿ ಎರಡು ಗಂಟೆ ಕಾಲದಲ್ಲಿ 10,98,000 ಜನ ನೋಡಿದ್ದಾರೆ. ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ವರ್ಷ 1 ಲಕ್ಷ ಕೋಟಿ ತೆರಿಗೆ ಪಡೆದು 3 ಸಾವಿರ ಕೋಟಿ ಮೆಟ್ರೋಗೆ ಅನುದಾನ ನೀಡಿದರೆ ಅವರ ಮಾತು ಕೇಳಬೇಕು ಎಂದೇನಿಲ್ಲ. ಇದಲ್ಲದೆ ಮೆಟ್ರೋ ಅಧಿಕಾರಿಗಳು ಆರ್‌ಟಿಐ ಅಡಿ ನಮಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದಿ ಬಳಕೆ ಮಾಡಲು ಹೇಳಿಲ್ಲ ಎಂದು ಉತ್ತರಿಸಿದ್ದಾರೆ. ಹಾಗಾದರೆ ಬಿಎಂಟಿಸಿ ಮಾದರಿಯಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಮಾತ್ರ ಬಳಸಬಹುದಲ್ಲವೇ ಎಂದು ಬನವಾಸಿ ಬಳಗದ ಅರುಣ್‌ ಜಾವಗಲ್‌ ಪ್ರಶ್ನಿಸಿದ್ದಾರೆ. ಇದಲ್ಲದೇ ‘www.nammametrohindiherike.wordpress.com' ಹೆಸರಿನ ವೆಬ್‌ಸೈಟ್‌ ಮೂಲಕವೂ ಹೋರಾಟ ರೂಪಿಸಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ
ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು