ಪಶ್ಚಿಮಘಟ್ಟಸೂಕ್ಷ್ಮ : ಕೇಂದ್ರ ನಿರ್ಧಾರದಿಂದ ರಾಜ್ಯದ ಜನಜೀವನಕ್ಕೆ ಪರಿಣಾಮ?

By Web Desk  |  First Published Sep 23, 2018, 8:49 AM IST

ಭೂಕುಸಿತ, ಪ್ರವಾಹದಿಂದ ಪಶ್ಚಿಮಘಟ್ಟಶ್ರೇಣಿಯಲ್ಲಿನ ಕರ್ನಾಟಕ ಹಾಗೂ ಕೇರಳ ನಲುಗಿದ ಬೆನ್ನಲ್ಲೇ, ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಸಾರುವ ಕರಡು ಅಧಿಸೂಚನೆಯನ್ನು ಎರಡನೇ ಬಾರಿಗೆ ಪ್ರಕಟಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 


ನವದೆಹಲಿ: ಇತ್ತೀಚಿನ ದಶಕಗಳಲ್ಲೇ ಕಂಡು ಕೇಳರಿಯದ ಭೂಕುಸಿತ, ಪ್ರವಾಹದಿಂದ ಪಶ್ಚಿಮಘಟ್ಟಶ್ರೇಣಿಯಲ್ಲಿನ ಕರ್ನಾಟಕ ಹಾಗೂ ಕೇರಳ ನಲುಗಿದ ಬೆನ್ನಲ್ಲೇ, ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯ ಎಂದು ಸಾರುವ ಕರಡು ಅಧಿಸೂಚನೆಯನ್ನು ಎರಡನೇ ಬಾರಿಗೆ ಪ್ರಕಟಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಆದರೆ ಅಧಿಸೂಚನೆ ಹೊರಬೀಳುವ ಮೊದಲೇ, ಅದನ್ನು ಒಪ್ಪುವುದಿಲ್ಲ ಎಂದು ಕರ್ನಾಟಕ ಖಂಡತುಂಡವಾಗಿ ಹೇಳಿದೆ.

ಕರಡು ಅಧಿಸೂಚನೆ ಪ್ರಕಟಗೊಂಡ ಬಳಿಕ ಪಶ್ಚಿಮಘಟ್ಟವ್ಯಾಪ್ತಿಯಲ್ಲಿನ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಕೇರಳ, ಗುಜರಾತ್‌ಗೆ ಪ್ರತಿಕ್ರಿಯೆ ನೀಡಲು 60 ದಿನಗಳ ಕಾಲಾವಕಾಶವಿರುತ್ತದೆ.

Latest Videos

undefined

2014ರಲ್ಲಿ ಕೇಂದ್ರ ಸರ್ಕಾರ ಮೊದಲ ಬಾರಿಗೆ ಕರಡು ಅಧಿಸೂಚನೆ ಬಿಡುಗಡೆ ಮಾಡಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಒಮ್ಮತ ಮೂಡದ ಕಾರಣ ಅದು ಬಿದ್ದುಹೋಗಿತ್ತು. ಇದೀಗ ಎರಡನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕರ್ನಾಟಕದ ಜತೆ ಮಾತನಾಡುತ್ತೇವೆ ಎಂದು ಪರಿಸರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎ.ಕೆ. ಮೆಹ್ತಾ ತಿಳಿಸಿದ್ದಾರೆ ಎಂದು ‘ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಪಶ್ಚಿಮಘಟ್ಟಶ್ರೇಣಿಯ ಆರು ರಾಜ್ಯಗಳ ಪೈಕಿ ಐದು ರಾಜ್ಯಗಳು ಕೊಂಚ ಬದಲಾವಣೆಗೆ ಒಪ್ಪಿಕೊಂಡಿವೆ. ಆದರೆ ಹೊಸ ಅಧಿಸೂಚನೆ ಪ್ರಕಟಣೆಗೂ ಕರ್ನಾಟಕ ಒಪ್ಪುತ್ತಲೇ ಇಲ್ಲ ಎಂದು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ನಸಚಿವರ ವಿರೋಧ:  ‘ಪರಿಸರ ಸೂಕ್ಷ್ಮ ವಲಯ ಘೋಷಣೆಯಡಿ ಯಾವುದೇ ನಿರ್ಬಂಧಗಳನ್ನು ಕರ್ನಾಟಕ ಒಪ್ಪಿಕೊಳ್ಳುವುದಿಲ್ಲ. ಈ ಅಧಿಸೂಚನೆಯಿಂದ ರಾಜ್ಯದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಅರಣ್ಯ ರಕ್ಷಣೆಗೆ 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಸೇರಿದಂತೆ ವಿವಿಧ ಶಾಸನಗಳು ಇವೆ. ಮತ್ತೊಂದು ಕಾನೂನು ನಮಗೇಕೆ ಬೇಕಾಗಿದೆ? ಈ ಅಧಿಸೂಚನೆಯಿಂದ ಕೆಂಪು ವರ್ಗದ ಉದ್ಯಮಗಳಿಗೆ ಪಶ್ಚಿಮಘಟ್ಟದಲ್ಲಿ ನಿರ್ಬಂಧ ಹೇರಿಕೆಯಾಗಲಿದ್ದು, ಜನಜೀವನದ ಮೇಲೆ ಪರಿಣಾಮ ಬೀರಲಿದೆ’ ಎಂದು ಕರ್ನಾಟಕದ ಅರಣ್ಯ ಸಚಿವ ಆರ್‌. ಶಂಕರ್‌ ವಾದಿಸಿದ್ದಾರೆ ಎಂದು ‘ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಭಾರಿ ಮಾಲಿನ್ಯ ಉಂಟು ಮಾಡುವ ಕೀಟನಾಶಕ, ಪೆಟ್ರೋಕೆಮಿಕಲ್ಸ್‌, ಕಾಗದ, ಸಿಮೆಂಟ್‌ ಕಾರ್ಖಾನೆಗಳನ್ನು ಕೆಂಪು ವರ್ಗದ ಉದ್ಯಮಗಳೆಂದು ಬಣ್ಣಿಸಲಾಗುತ್ತದೆ.

ಪರಿಣಾಮವೇನು?:  ಪರಿಸರ ಸೂಕ್ಷ್ಮ ವಲಯ ಪಟ್ಟಿಗೆ ಪಶ್ಚಿಮಘಟ್ಟಸೇರ್ಪಡೆಯಾದರೆ, ಹೊಸದಾಗಿ ಉಷ್ಣ ವಿದ್ಯುತ್‌ ಸ್ಥಾವರ, ಮಾಲಿನ್ಯಕಾರಕ ಕೈಗಾರಿಕೆಗಳು, ಬೃಹತ್‌ ಟೌನ್‌ಶಿಪ್‌ಗಳು, ನಗರಾಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಕಡಿವಾಣ ಬೀಳಲಿದೆ.

click me!