
ಬೆಂಗಳೂರು [ಜು.25] : ಮೈತ್ರಿ ಸರ್ಕಾರ ಕುಸಿದ ಬೆನ್ನಲ್ಲೇ ವಿಧಾನಮಂಡಲದಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕೃತವಾಗಿ ಬರ್ಖಾಸ್ತ್ ಆಗುವ ಲಕ್ಷಣ ಮೂಡಿದೆ. ಏಕೆಂದರೆ, ಕಾಂಗ್ರೆಸ್ ವಿಧಾನಸಭೆಯಲ್ಲಿ ಅಧಿಕೃತ ಪ್ರತಿಪಕ್ಷ ಸ್ಥಾನವನ್ನು ಪಡೆಯುವುದು ಬಹುತೇಕ ಖಚಿತವಾಗಿದೆ.
ಮೈತ್ರಿ ಕೂಟ ವಿಧಾನಸಭೆಯಲ್ಲೂ ಒಗ್ಗೂಡಿದರೆ ಮೈತ್ರಿಕೂಟಕ್ಕೆ ಒಬ್ಬ ನಾಯಕನಿರಬೇಕಿತ್ತು. ಎರಡು ಪಕ್ಷಗಳು ಸೇರಿ ಒಬ್ಬ ನಾಯಕನನ್ನು ಮೈತ್ರಿಕೂಟದ ನಾಯಕ ಎಂದು ಘೋಷಿಸಬೇಕಿತ್ತು. ಆದರೆ, ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಇಂತಹ ಯಾವುದೇ ಸಾಧ್ಯತೆ ಕಂಡು ಬರುತ್ತಿಲ್ಲ. ಕಾಂಗ್ರೆಸ್ ಪಕ್ಷವೇ ಅಧಿಕೃತ ಪ್ರತಿಪಕ್ಷವಾಗಲಿದೆ.
ಇನ್ನು ಕಾಂಗ್ರೆಸ್ ನಾಯಕತ್ವ ವಿಧಾನಮಂಡಲದಲ್ಲಿ ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವ ದಿಸೆಯಲ್ಲಿ ಗಂಭೀರವಾಗಿದೆ. ಬುಧವಾರ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಪಕ್ಷವು ವಿಧಾನಮಂಡಲದಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಈ ಚರ್ಚೆ ವೇಳೆ, ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಸಾಕಷ್ಟು ಪ್ರಬಲವಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುವ ಲಕ್ಷಣಗಳಿವೆ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆ ಸರ್ಕಾರದ ಅವ್ಯವಹಾರ ಹಾಗೂ ಹಗರಣಗಳ ಬಗ್ಗೆ ಸರಣಿ ದಾಖಲೆ ಬಿಡುಗಡೆ ಮಾಡಿದ್ದ ಕುಮಾರಸ್ವಾಮಿ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದರು.
ಈ ಬಾರಿಯೂ ಅವರು ಅಂತಹುದೇ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ. ಹೀಗಾದಲ್ಲಿ ಕಾಂಗ್ರೆಸ್ ಮಂಕಾಗಬಹುದು. ಹೀಗಾಗಿ ಕುಮಾರಸ್ವಾಮಿ ಅವರನ್ನು ಮೀರಿಸುವ ರೀತಿ ಕಾಂಗ್ರೆಸ್ ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರ ರಚನೆಯಾದರೆ ಅದರ ಚಟುವಟಿಕೆ ಮೇಲೆ ಹದ್ದುಗಣ್ಣಿಟ್ಟು ಪ್ರಬಲ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.