ಘಟಾನುಘಟಿಗಳ ಮಾತಿಗಿಲ್ಲ ಕಿಮ್ಮತ್ತು; ಕೊನೆಗೂ ಗೆದ್ದ ಅತೃಪ್ತರ ಹಠ

By Web DeskFirst Published Jul 24, 2019, 10:17 AM IST
Highlights

ಒಂದು ಕಾಲಕ್ಕೆ ಕಾಂಗ್ರೆಸ್‌ನ ದಿಲ್ಲಿ ವರಿಷ್ಠರ ಟೈಪಿಸ್ಟ್‌ ಫೋನ್‌ ಮಾಡಿದರೂ ಶಾಸಕರಷ್ಟೇ ಅಲ್ಲ ಮುಖ್ಯಮಂತ್ರಿ ಕೂಡ ಹೆದರಿ ಓಡಿ ಬಂದು ದಿಲ್ಲಿಯಲ್ಲಿ ಬಹುಪರಾಕ್‌ ಹೇಳಿ ಹೋಗುತ್ತಿದ್ದರು. ಆದರೆ ಈಗ ದಿಲ್ಲಿಯ ನಾಯಕರು ಬಂದು ಬೆಂಗಳೂರಲ್ಲಿ ಕುಳಿತು, ಹತ್ತು ಬಾರಿ ಫೋನ್‌ ಹಚ್ಚಿದರೂ ಶಾಸಕರು ಕರೆ ಸ್ವೀಕರಿಸುವುದು ಹಾಗಿರಲಿ, ಕ್ಯಾರೇ ಎನ್ನುತ್ತಿಲ್ಲ.

ಒಂದು ಕಡೆ ಅತೃಪ್ತ ಶಾಸಕರು ಜಗ್ಗುತ್ತಿಲ್ಲ. ಇನ್ನೊಂದು ಕಡೆ ಅಮೆರಿಕಕ್ಕೆ ಹೋಗಿ ಕುಳಿತಿದ್ದ ಸಿಎಂ ಕುಮಾರಸ್ವಾಮಿ. ಹೀಗಿದ್ದಾಗ ಒಂದು ಸಂಜೆ ಸಿದ್ದರಾಮಯ್ಯ ಅವರ ಮನೆಗೆ ತೆರಳಿದ ರೇವಣ್ಣ, ಬಹಳ ಹೊತ್ತು ಮಾತನಾಡಿ, ‘ನಿಮ್ಮ ಶಿಷ್ಯಂದಿರು 6 ಜನ ಇದ್ದಾರೆ. ಒಂದು ಕೆಲಸ ಮಾಡಿ, ನೀವೇ ಮುಖ್ಯಮಂತ್ರಿ ಆಗಿ. ನಮ್ಮ ಕಡೆಯಿಂದ ತಂದೆ ಒಪ್ಪಿದರೆ ನಾನು ಉಪ ಮುಖ್ಯಮಂತ್ರಿ ಆಗುತ್ತೇನೆ. ಮುಂಬೈಯಿಂದ ಅವರನ್ನು ಕರೆಸಿ’ ಎಂದರಂತೆ. ಆದರೆ ಇದಕ್ಕೆ ಒಪ್ಪದ ಸಿದ್ದು, ‘ಇಲ್ಲ ಇದಕ್ಕೆಲ್ಲ ದಿಲ್ಲಿ ವರಿಷ್ಠರು ಒಪ್ಪೋದಿಲ್ಲ’ ಎಂದು ರೇವಣ್ಣ ಅವರನ್ನು ಸಾಗಹಾಕಿದ್ದರು.

ಅತೃಪ್ತ ಶಾಸಕರ ಮುಂದಿನ ದಾರಿ ಏನು?

ಆದರೂ, ಸಿದ್ದು ಸಿಎಂ ಎಂಬ ವಿಚಾರ ಮಾಧ್ಯಮಗಳಲ್ಲಿ ಬಹಳ ಓಡಾಡಿತು. ಆದರೆ ಕುಮಾರಸ್ವಾಮಿ ಬೆಂಗಳೂರಿಗೆ ಲ್ಯಾಂಡ್‌ ಆಗುವ ಮುಂಚೆಯೇ ಇದು ಸಾಧ್ಯವಿಲ್ಲ ಎಂದು ಡಿಕೆಶಿ ಮತ್ತು ಪರಮೇಶ್ವರ್‌, ದೇವೇಗೌಡರಿಂದ ದಿಲ್ಲಿವರೆಗೆ ತಿಳಿಸಿ ಹೇಳಿ ಮುಂದೆ ಕುಮಾರಸ್ವಾಮಿ ಬಂದ ಮೇಲೆಯೂ ಮುಖ್ಯಮಂತ್ರಿ ಕಡೆಯಿಂದ ತಂದೆ ದೇವೇಗೌಡರಿಗೆ ಹೇಳಿಸಿದರಂತೆ.

ಅದಾದ ಮೇಲೆ ಆಫೀಸು ಕಡತದಲ್ಲಿ ಬ್ಯುಸಿ ಇದ್ದ ರೇವಣ್ಣ ಶಾಸಕರನ್ನು ಕರೆತರುವ ಪ್ರಯತ್ನದಲ್ಲಿ ಎಲ್ಲೂ ಕಾಣಲಿಲ್ಲ. ಆದರೆ ಎಲ್ಲವೂ ಮುಗಿದು ಹೋದಾಗ ಡಿ ಕೆ ಶಿವಕುಮಾರ್‌, ಸಿದ್ದುಗೆ ಆಫರ್‌ ಎನ್ನುವುದನ್ನು ಪ್ರಸ್ತಾಪಿಸಿದ್ದು ಗಾಯದ ಮೇಲೆ ಬರೆ ಹಾಕಲೋ ಏನೋ ಗೊತ್ತಿಲ್ಲ!

ಅತೃಪ್ತರ ಬಳಿ ಅಂಗಲಾಚಿದ್ದ ಸಿದ್ದು

ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಾಗ ಮೊದಮೊದಲು ‘ನನಗೆ ಸಂಬಂಧವಿಲ್ಲ’ ಎನ್ನುತ್ತಿದ್ದ ಸಿದ್ದರಾಮಯ್ಯ, ನಂತರ ವೇಣುಗೋಪಾಲ್, ಗುಲಾಂ ನಬಿ ಒತ್ತಡದ ಕಾರಣದಿಂದ ಕಾಂಗ್ರೆಸ್‌ ಶಾಸಕರನ್ನು ‘ಅಯ್ಯೋ ವಾಪಸ್‌ ಬನ್ನಿ. ನನ್ನನ್ನು ಎಲ್ಲರೂ ನಿಮ್ಮ ಶಿಷ್ಯರು ಹೋದರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ದಯವಿಟ್ಟು ಬನ್ನಿ’ ಎಂದು ಫೋನ್‌ನಲ್ಲಿ ಅಂಗಲಾಚಿ ಬೇಡಿಕೊಂಡಿದ್ದರಂತೆ.

ಮುನಿರತ್ನ ಮನೆಗೆ ಬಂದಾಗ ಮೊದಲು ಬೈದು, ನಂತರ ‘ನಿನ್ನ ಏನೇನು ಕೆಲಸ ಇವೆ ಪಟ್ಟಿಕೊಡು. ನಾನು ಮಾಡಿಸುತ್ತೇನೆ’ ಎಂದರೂ ಮುನಿರತ್ನ ಒಪ್ಪಲಿಲ್ಲ. ಇನ್ನು ಬೈರತಿಗಂತೂ, ‘ಅಲ್ಲಪ್ಪ ಬಸವರಾಜ್‌, ಎಲ್ಲರ ವಿರೋಧ ಕಟ್ಟಿಕೊಂಡು ಕೃಷ್ಣಪ್ಪನಿಗೆ ಟಿಕೆಟ್‌ ಕೊಡದೆ ತಾಲೂಕು ಬೋರ್ಡ್‌ನಿಂದ ನಿನ್ನನ್ನು ಶಾಸಕನಾಗಿ ಮಾಡಿದೆ. ಇದೇನು ಮಾಡ್ತಿದ್ದೀಯ’ ಎಂದರೆ ಆ ಕಡೆಯಿಂದ ಫೋನ್‌ ಸ್ವಿಚ್‌ ಆಫ್‌. ಇನ್ನು ಸೋಮಶೇಖರ್‌ ಫೋನ್‌ ಪಿಕ್‌ ಮಾಡಲೇ ಇಲ್ಲವಂತೆ.

ಸದನ ಆರಂಭಿಸಿದ್ದೇ ಯಮಗಂಡ ಕಾಲದಲ್ಲಿ!

2013 ರಲ್ಲಿ ತಾನು ಹುಟ್ಟಿಬೆಳೆದು ಕಾರ್ಮಿಕ ನಾಯಕನಾಗಿ ರೂಪುಗೊಂಡ ಕೆ ಆರ್‌ ಪುರದಿಂದ ಕೃಷ್ಣಪ್ಪರನ್ನು ಬದಿಗೆ ಸರಿಸಿದ ಸಿದ್ದು, ತಮ್ಮ ಕುಲಬಾಂಧವ ಬೈರತಿಗೆ ಟಿಕೆಟ್‌ ಕೊಟ್ಟಿದ್ದರು. ಅವತ್ತು ರಾತ್ರಿ ಅಳುತ್ತಿದ್ದ ಕೃಷ್ಣಪ್ಪ ಪತ್ರಕರ್ತರ ಎದುರು, ‘ಈ ಸಿದ್ದರಾಮಯ್ಯಗೆ ಹಣ ಇರುವ ಬೈರತಿ ಬಿಟ್ಟು ಹೋದಾಗ ಗೊತ್ತಾಗುತ್ತದೆ’ ಎಂದು ದುಃಖ ತೋಡಿಕೊಂಡಿದ್ದರು. ಕೃಷ್ಣಪ್ಪ ಹೇಳಿದ್ದು 6 ವರ್ಷಗಳಲ್ಲಿ ಸತ್ಯವಾಗಿದೆ.

ಏನೂ ಮಾಡದೆ ಕೈಚೆಲ್ಲಿದ ಹೈಕಮಾಂಡ್‌

ಒಂದು ಕಾಲಕ್ಕೆ ಕಾಂಗ್ರೆಸ್‌ನ ದಿಲ್ಲಿ ವರಿಷ್ಠರ ಟೈಪಿಸ್ಟ್‌ ಫೋನ್‌ ಮಾಡಿದರೂ ಶಾಸಕರಷ್ಟೇ ಅಲ್ಲ ಮುಖ್ಯಮಂತ್ರಿ ಕೂಡ ಹೆದರಿ ಓಡಿ ಬಂದು ದಿಲ್ಲಿಯಲ್ಲಿ ಬಹುಪರಾಕ್‌ ಹೇಳಿ ಹೋಗುತ್ತಿದ್ದರು. ಆದರೆ ಈಗ ದಿಲ್ಲಿಯ ನಾಯಕರು ಬಂದು ಬೆಂಗಳೂರಲ್ಲಿ ಕುಳಿತು, ಹತ್ತು ಬಾರಿ ಫೋನ್‌ ಹಚ್ಚಿದರೂ ಶಾಸಕರು ಕರೆ ಸ್ವೀಕರಿಸುವುದು ಹಾಗಿರಲಿ, ಕ್ಯಾರೇ ಎನ್ನುತ್ತಿಲ್ಲ. ಕಾಂಗ್ರೆಸ್‌ನ ದಿಲ್ಲಿ ನಾಯಕರ ಸ್ಥಿತಿ ಇದು.

17 ದಿನದಿಂದ ಬಂಡಾಯ ನಡೆಯುತ್ತಿದ್ದಾಗ ಉಸ್ತುವಾರಿ ವೇಣುಗೋಪಾಲ್  ಅವರು ಸಿದ್ದರಾಮಯ್ಯ ಅವರ ಮನೆಗೆ ಹಾಗೂ ಕೆಕೆ ಗೆಸ್ಟ್‌ ಹೌಸ್‌ಗೆ ಓಡಾಡಿದ್ದು ಬಿಟ್ಟರೆ ಶಾಸಕರನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಮೈಕ್‌ ಸಿಕ್ಕರೆ ಬರೀ ಮೋದಿ ಮತ್ತು ಶಾ ಅವರನ್ನು ಬಯ್ಯೋದು ರಣತಂತ್ರ ಅಲ್ಲ. ಇನ್ನು ಯಾವುದೇ ಕೆಲಸದಲ್ಲೂ ಆಪದ್ಬಾಂಧವ ಎನಿಸಿಕೊಂಡಿರುವ ಗುಲಾಂ ನಬಿ ಆಜಾದ್‌ ಅಂತೂ ದಿಲ್ಲಿಗೆ ಬಂದು ಏನೂ ಮಾಡಲಿಲ್ಲ. ಮೀಟಿಂಗ್‌, ಊಟ, ನಿದ್ದೆ ಬಿಟ್ಟರೆ ಗುಲಾಂ ನಬಿ ಬೆಂಗಳೂರಿಗೆ ಹೋಗಿದ್ದರಿಂದ ಏನೂ ಕಮಾಲ್ ನಡೆಯಲಿಲ್ಲ. ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ರಜೆಗೆ ಹೋಗಿ ಕುಳಿತರೇ ಹೊರತು, ಸರ್ಕಾರ ಬಚಾವ್‌ ಮಾಡಲು ಏನೂ ಮಾಡಲಿಲ್ಲ. ಇವರೆಲ್ಲರಿಗಿಂತ ಡಿಕೆಶಿ ವಾಸಿ. ಕ್ಯಾಮೆರಾ ಕಾರಣದಿಂದಾದರೂ ಚುರುಕಾಗಿ ಓಡಾಡಿದಂತೆ ತೋರಿಸಿಕೊಂಡರು.

ಆಪದ್ಬಾಂಧವ ಬೊಮ್ಮಾಯಿ, ಮಾಧುಸ್ವಾಮಿ

ಬಿಜೆಪಿಯಲ್ಲಿ ಅತೃಪ್ತ ಶಾಸಕರು ಹಾಗೂ ಮುಂಬೈ ವ್ಯವಹಾರಗಳನ್ನೆಲ್ಲ ಲಿಂಬಾವಳಿ ಮತ್ತು ಯೋಗೇಶ್ವರ್‌ ನೋಡಿಕೊಂಡರೆ, ಸದನದಲ್ಲಿ ವಿಪಕ್ಷದ ಬಾಣಗಳಿಗೆ ಉತ್ತರ ಕೊಟ್ಟಿದ್ದು ಮಾಧುಸ್ವಾಮಿ. ಇನ್ನು ತೆರೆಮರೆಯಲ್ಲಿ ಸುಪ್ರೀಂಕೋರ್ಟ್‌ ವಕೀಲ ಮುಕುಲ್ ರೋಹಟಗಿ ಅವರಿಗೆ ಬ್ರಿಫಿಂಗ್‌, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬದಲಾಗುವ ವಿಪಕ್ಷಗಳ ಪೊಲಿಟಿಕಲ್ ಮತ್ತು ಕಾನೂನು ತಂತ್ರಗಳ ಮೇಲೆ ಚರ್ಚೆ ಇದನ್ನೆಲ್ಲ ನಿಭಾಯಿಸಿದ್ದು ಬಿಎಸ್‌ವೈ ಆತ್ಮೀಯ ಬೊಮ್ಮಾಯಿ.

94 ರಲ್ಲಿ ತಮ್ಮ ತಂದೆಯ ಪ್ರಕರಣ ಸುಪ್ರೀಂಕೋರ್ಟ್‌ಗೆ ಬಂದಾಗ ಅವರ ಜೊತೆಗೆ ಓಡಾಡಿದ್ದ ಬಸವರಾಜ್‌ ಬೊಮ್ಮಾಯಿ, ಅನರ್ಹತೆ ಹತ್ತನೇ ಪರಿಚ್ಛೇದದಲ್ಲಿ ಪರಿಣತ. ಹೀಗಾಗಿ ಯಡಿಯೂರಪ್ಪ ಹೇಳಿದಂತೆ ಪ್ರತಿ ಶನಿವಾರ ದಿಲ್ಲಿಗೆ ಬಂದು ರೋಹಟಗಿಗೆ ಬ್ರೀಫ್‌ ಮಾಡಿ ಹೋಗುತ್ತಿದ್ದರು. ಈ ಬಾರಿ ಮಾತ್ರ ಯಡಿಯೂರಪ್ಪ ಶಿಷ್ಯರ ಟೀಮ… ವರ್ಕ್ ಫುಲ್‌ ಕೆಲಸ ಮಾಡಿದಂತಿದೆ.

ಬಿಜೆಪಿ ಹೈಕಮಾಂಡ್‌ ಈಗೇನು ಮಾಡುತ್ತೆ?

14 ತಿಂಗಳ ಸತತ ಪ್ರಯತ್ನದಿಂದ ಸರ್ಕಾರ ಬೀಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ಯಡಿಯೂರಪ್ಪ ಅವರಿಗೂ ಕಾಡುವ ಸಂಪುಟ ಸಂಕಟ ಮುಂದಿದೆ. ಬಿಜೆಪಿ ಪ್ರಕಾರ 11 ಸಚಿವ ಸ್ಥಾನಗಳನ್ನು ಅತೃಪ್ತರಿಗೆ ಕೊಟ್ಟರೆ, ಬಿಜೆಪಿಗೆ ಉಳಿಯುವುದು 22. ಒಂದು ಸ್ಥಾನ ಬಿಎಸ್‌ವೈ. ಇನ್ನು 2ರಿಂದ 3 ಸ್ಥಾನ ಖಾಲಿ ಇಟ್ಟರೂ ಬಿಜೆಪಿಗೆ ಅಂತಿಮವಾಗಿ ಉಳಿಯೋದು 18ರಿಂದ 19.

ಉಪ ಮುಖ್ಯಮಂತ್ರಿ ಬೇಡ ಎಂದು ಯಡಿಯೂರಪ್ಪ ಮನಸ್ಸಿನಲ್ಲಿ ಇದೆ. ಆದರೆ ಅಮಿತ್‌ ಶಾ ಇದಕ್ಕೆ ಒಪ್ಪಿಗೆ ಕೊಡಬೇಕು. ಸರ್ಕಾರ ರಚನೆ ಹಕ್ಕು ಮಂಡಿಸಿ ದಿಲ್ಲಿಗೆ ಬರಲಿರುವ ಯಡಿಯೂರಪ್ಪ ಮತ್ತು ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌, ದಿಲ್ಲಿಯಲ್ಲಿ ಅಮಿತ್‌ ಶಾ, ಜೆ ಪಿ ನಡ್ಡಾ ಮತ್ತು ಸಂತೋಷ್‌ ಜೊತೆ ಕುಳಿತು ಸಂಪುಟಕ್ಕೆ ಅಂತಿಮ ಒಪ್ಪಿಗೆ ಪಡೆಯಬೇಕಾಗುತ್ತದೆ. ದಿಲ್ಲಿಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಪಾರ್ಲಿಮೆಂಟರಿ ಬೋರ್ಡು ಸಭೆ ನಡೆಸಿ ನಿರ್ಣಯ ತೆಗೆದುಕೊಳ್ಳುವುದು ಈಗ ಔಪಚಾರಿಕ ಅಷ್ಟೇ. ಅಂದ ಹಾಗೆ ತುರ್ತು ಸನ್ನಿವೇಶದಲ್ಲಿ ಬೋರ್ಡ್‌ ಸದಸ್ಯರ ಜೊತೆಗೆ ಶಾ ಸಾಹೇಬರು ಫೋನ್‌ನಲ್ಲೇ ಮಾತನಾಡಿ ಒಪ್ಪಿಗೆ ಪಡೆದು ನಿರ್ಣಯ ತೆಗೆದುಕೊಳ್ಳುತ್ತಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್’ ಕ್ಲಿಕ್ ಮಾಡಿ 

click me!
Last Updated Jul 24, 2019, 10:39 AM IST
click me!