
ಬೆಂಗಳೂರು [ಜು.09]: ಪತನದ ಅಂಚಿಗೆ ತಲುಪಿರುವ ಮೈತ್ರಿಕೂಟ ಸರ್ಕಾರ ತಕ್ಷಣಕ್ಕೆ ಕುಸಿದು ಬೀಳುವುದೋ ಅಥವಾ ಈ ಪ್ರಕ್ರಿಯೆ ಒಂದಷ್ಟು ಕಾಲ ಲಂಬಿಸುವುದೋ? ಇಡೀ ನಾಡಿನ ಜನತೆಯನ್ನು ತುದಿಗಾಲಿನ ಮೇಲೆ ನಿಲ್ಲಿಸಿರುವ ಕರ್ನಾಟಕ ರಾಜಕೀಯ ನಾಟಕದ ಮುಂದಿನ ಅಂಕ ವಿಧಾನ ಸಭಾಧ್ಯಕ್ಷ ರಮೇಶ್ ಕುಮಾರ್ ಮಂಗಳವಾರ ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ.
ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್-ಜೆಡಿಎಸ್‌ನ 13 ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಮಂಗಳವಾರ ಕೈಗೆತ್ತಿಕೊಳ್ಳಲಿದ್ದಾರೆ. ಈ ಪ್ರಕ್ರಿಯೆಯನ್ನು ಸ್ಪೀಕರ್ ಅವರು ಹೇಗೆ ನಡೆಸಲಿದ್ದಾರೆ ಎಂಬುದೇ ಎಲ್ಲರ ಕುತೂಹಲ. ಸ್ಪೀಕರ್ ಅವರು ರಾಜೀನಾಮೆ ಪ್ರಕ್ರಿಯೆಯನ್ನು ಶೀಘ್ರ ಪೂರೈಸಿದರೆ ಸರ್ಕಾರ ಆ ಕ್ಷಣಕ್ಕೆ ಅಲ್ಪಮತಕ್ಕೆ ಕುಸಿದು, ಪತನಗೊಳ್ಳುವ ಹಾದಿ ಹಿಡಿಯುತ್ತದೆ. ಒಂದು ವೇಳೆ ಸ್ಪೀಕರ್ ಅವರು ರಾಜೀನಾಮೆ ನೀಡಿರುವ ಶಾಸಕರ ನೇರಾನೇರ ವಿಚಾರಣೆಗಿಳಿಯುವ ಹಾಗೂ ಕ್ಷೇತ್ರದ ಜನರ ಅಭಿಪ್ರಾಯ ಪಡೆಯುವಂತಹ ಸುದೀರ್ಘ ಪ್ರಕ್ರಿಯೆಗೆ ಚಾಲನೆ ನೀಡಿದರೆ ಮೈತ್ರಿಕೂಟಕ್ಕೆ ಸರ್ಕಾರ ಉಳಿಸಿಕೊಳ್ಳಲು ಅತೃಪ್ತರ ಮನವೊಲಿಸಲು ಒಂದಷ್ಟು ಕಾಲಾವಕಾಶ ಲಭ್ಯವಾಗುತ್ತದೆ.
ಹೀಗಾಗಿ, ಸ್ಪೀಕರ್ ತೀರ್ಮಾನ ಈ ಇಡೀ ಕರ್ನಾಟಕ ರಾಜಕಾರಣದ ಮುಂದಿನ ಅಂಕ ಹೇಗಿರಲಿದೆ ಎಂಬುದನ್ನು ನಿರ್ಧರಿಸಲಿದೆ. ಕಾನೂನು ತಜ್ಞರ ಪ್ರಕಾರ ಶಾಸಕರು ರಾಜೀನಾಮೆ ನೀಡಿದರೆ ಆ ಬಗ್ಗೆ ಎಂತಹ ಪ್ರಕ್ರಿಯೆ ನಡೆಸಬೇಕು ಎಂಬ ಸಂಪೂರ್ಣ ವಿವೇಚನಾಧಿಕಾರ ಸ್ಪೀಕರ್ ಅವರಿಗೆ ಇದೆ. 13 ಮಂದಿ ಅತೃಪ್ತರು ಖುದ್ದಾಗಿ ಸ್ಪೀಕರ್ ಕಚೇರಿಗೆ ಆಗಮಿಸಿ ಅವರ ಕಾರ್ಯದರ್ಶಿ ಬಳಿ ಈ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಅವರ ಮೇಲೆ ಯಾವುದೇ ಒತ್ತಡವಿಲ್ಲ. ಸ್ವಯಂ ಪ್ರೇರಣೆಯಿಂದ ಇಂತಹ ನಿರ್ಧಾರ ಕೈಗೊಂಡಿದ್ದಾರೆ.
ಈ ಪ್ರಸಂಗದಲ್ಲಿ ಕುದುರೆ ವ್ಯಾಪಾರ ನಡೆದಿಲ್ಲ ಎಂದು ಸ್ಪೀಕರ್ ಅವರು ನಿರ್ಧರಿಸಿದರೆ ಆಗ ಅವರು ನೇರವಾಗಿ ರಾಜೀನಾಮೆಯನ್ನು ಅಂಗೀಕರಿಸಬಹುದು. ಒಂದು ವೇಳೆ ಸ್ಪೀಕರ್ ಇಂತಹ ತೀರ್ಮಾನ ಕೈಗೊಂಡರೆ ಅದು ಬಿಜೆಪಿಗೆ ಲಾಭದಾಯಕ. ಏಕೆಂದರೆ, ಸ್ಪೀಕರ್ 13 ಮಂದಿ ಶಾಸಕರ ರಾಜೀನಾಮೆ ಅಂಗೀಕರಿಸಿದ ಕೂಡಲೇ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿಯುತ್ತದೆ. ಏಕೆಂದರೆ, 13 ಶಾಸಕರ ಬಲ ಕಡಿತ ವಾಗುವುದಲ್ಲದೆ, ಈಗಾಗಲೇ ಇಬ್ಬರು ಪಕ್ಷೇತರ ಶಾಸಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿದ್ದಾರೆ.
ಹೀಗಾಗಿ ಬಿಜೆಪಿಯು ಈ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಆದ್ದರಿಂದ ತನ್ನ ಬಹುಮತ ಸಾಬೀತುಪಡಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ರಾಜ್ಯಪಾಲರ ಮೊರೆ ಹೋಗಲು ಅಸ್ತ್ರ ದೊರೆತಂತೆ ಆಗಲಿದೆ. ರಾಜ್ಯಪಾಲರು ಬಿಜೆಪಿಯ ಈ ಮೊರೆ ಪುರಸ್ಕರಿಸಿ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದರೆ ಅಲ್ಪ ಮತಕ್ಕೆ ಕುಸಿದಿರುವ ಮೈತ್ರಿ ಕೂಟ ಈ ವಾರದೊಳಗೆ ಪತನಗೊಳ್ಳುವುದು ಖಚಿತ.
ಆದರೆ, ಸ್ಪೀಕರ್ ಅವರಿಗೆ ಈ 13 ಶಾಸಕರು ರಾಜೀನಾಮೆ ಸಲ್ಲಿಸುವುದರ ಹಿಂದೆ ಒತ್ತಡ ತಂತ್ರ ಹಾಗೂ ಕುದುರೆ ವ್ಯಾಪಾರ ನಡೆದಿದೆ ಎಂದೇನಾದರೂ ಗುಮಾನಿ ಉಂಟಾದರೆ ಆಗ ಅವರು ಈ ಪ್ರಕ್ರಿಯೆಯನ್ನು ಲಂಬಿಸುವಂತೆ ಮಾಡುವ ಎಲ್ಲಾ ಅವಕಾಶವಿದೆ. ಆಗ ಪ್ರತಿಯೊಬ್ಬ ಶಾಸಕರನ್ನು ನೇರಾನೇರ ಕರೆದು ರಾಜೀನಾಮೆಗೆ ನಿಖರ ಕಾರಣವನ್ನು ಅವರು ಕೇಳಬಹುದು. ಇದಕ್ಕೆ ಒಬ್ಬೊಬ್ಬರಿಗೂ ಪ್ರತ್ಯೇಕ ದಿನಾಂಕಗಳನ್ನು ನೀಡಬಹುದು. ಇದಾದ ನಂತರ ಪ್ರತಿ ಶಾಸಕರ ಕ್ಷೇತ್ರದ ಸ್ಥಳೀಯ ಜನರು ಹಾಗೂ ಸಂಘ ಸಂಸ್ಥೆಗಳ ಅಭಿಪ್ರಾಯ ಕೇಳಬಹುದು. ಜತೆಗೆ, ಕುದುರೆ ವ್ಯಾಪಾರ ನಡೆದಿಲ್ಲ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ ಎಂದು ಖಚಿತವಾದರೆ ಕೆಲ ದಿನಗಳ ನಂತರವಾದರೂ ರಾಜೀನಾಮೆ ಅಂಗೀಕರಿಸಬಹುದು.
ಆಕಸ್ಮಾತ್ ಕುದುರೆ ವ್ಯಾಪಾರ ನಡೆದಿದೆ ಎಂಬ ನಿರ್ಧಾರಕ್ಕೆ ಬಂದರೆ ಶಾಸಕರನ್ನು ಮತ್ತೆ ಕರೆಸಿ ವಿಚಾರಣೆ ನಡೆಸುವ ಮೂಲಕ ಈ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುವಂತೆ ಮಾಡಬಹುದು. ಇಂತಿಷ್ಟೇ ದಿನಕ್ಕೆ ರಾಜೀನಾಮೆ ಅಂಗೀಕರಿಸಬೇಕು ಎಂಬ ನಿರ್ಬಂಧವಿಲ್ಲ. ಹೀಗಾಗಿ ಸ್ಪೀಕರ್ ಅವರು ರಾಜೀನಾಮೆ ಅಂಗೀಕಾರ ಸದ್ಯಕ್ಕೆ ಮಾಡದೇ ಪೆಂಡಿಂಗ್ ಇಡಬಹುದು. ಆಗ ಮೈತ್ರಿ ಸರ್ಕಾರಕ್ಕೆ ಅತೃಪ್ತರ ಮನವೊಲಿಸಲು ಸಾಕಷ್ಟು ಕಾಲಾವಕಾಶ ದೊರೆಯುತ್ತದೆ.
ಆದರೆ, ವಿಧಾನಮಂಡಲ ಅಧಿವೇಶನ ಶುಕ್ರವಾರ ಆರಂಭವಾಗಲಿರುವುದರಿಂದ ರಾಜೀನಾಮೆ ಬಗ್ಗೆ ಕೂಡಲೇ ನಿರ್ಧಾರ ಕೈಗೊಳ್ಳದೇ ಇದ್ದರೂ ಸಂಖ್ಯಾಬಲ ಕಡಿಮೆ (ರಾಜೀನಾಮೆ ನೀಡಿದ ಅತೃಪ್ತರು ಸದನಕ್ಕೆ ನೈತಿಕವಾಗಿ ಹಾಜರಾಗಲು ಸಾಧ್ಯವಿಲ್ಲ) ಇರುವುದರಿಂದ ಪ್ರಮುಖ ಮಸೂದೆಗಳು ಸದನದ ಅಂಗೀಕಾರ ಪಡೆಯದಿದ್ದರೆ (ಉದಾಹರಣೆಗೆ ಹಣಕಾಸು ಮಸೂದೆ) ಆಗ ಸರ್ಕಾರ ತಾಂತ್ರಿಕವಾಗಿ ಕಷ್ಟಕ್ಕೆ ಸಿಲುಕುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.