ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ : ರಾಜ್ಯದಲ್ಲಿ ಮತ್ತೆ ಚುನಾವಣೆ ..?

By Web DeskFirst Published May 28, 2019, 7:56 AM IST
Highlights

ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಗಳಿಸಿದ್ದು ಇದೇ ಬೆನ್ನಲ್ಲೇ ಮತ್ತೊಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. 

ಬೆಂಗಳೂರು :  ಅನ್ಯ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸುವ ಬದಲು ಮಧ್ಯಂತರ ಚುನಾವಣೆ ಎದುರಿಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಬಿಜೆಪಿಯ ಸಂಘ ಪರಿವಾರ ಮೂಲದ ಶಾಸಕರು ಹಾಗೂ ಮುಖಂಡರು ವ್ಯಕ್ತಪಡಿಸಿದ್ದಾರೆ.

ಕಳೆದ 2008ರಲ್ಲಿ ‘ಆಪರೇಷನ್‌ ಕಮಲ’ ಮೂಲಕ ಶಾಸಕರನ್ನು ಕರೆತಂದ ಕಹಿ ಅನುಭವ ಇರುವುದರಿಂದ ಈಗ ಮತ್ತೆ ಅಂಥದ್ದೇ ಕೆಲಸಕ್ಕೆ ಕೈಹಾಕುವುದು ಬೇಡ. ಹೀಗೆ ಅನ್ಯ ಪಕ್ಷಗಳಿಂದ ವಲಸೆ ಬರುವ ಶಾಸಕರು ಉಪಚುನಾವಣೆಯಲ್ಲಿ ಗೆದ್ದರೂ ಅದರಿಂದ ಉತ್ತಮ ಆಡಳಿತ ನೀಡುತ್ತೇವೆ ಎಂದುಕೊಳ್ಳುವುದು ಸುಲಭವಲ್ಲ. ಹಾಗೆ ಬಂದವರು ಇಲ್ಲಿಯೂ ಭಿನ್ನಮತ ಚಟುವಟಿಕೆಗಳನ್ನು ಆರಂಭಿಸುವುದಿಲ್ಲ ಎಂಬುದಕ್ಕೆ ಯಾವುದೇ ಗ್ಯಾರಂಟಿಯಿಲ್ಲ ಎಂಬ ಪ್ರತಿಪಾದನೆ ಪಕ್ಷದ ತೆರೆಮರೆಯಲ್ಲಿ ಕೇಳಿಬರುತ್ತಿದೆ.

ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಮುಗಿದಿದೆ. ಪಕ್ಷ ರಾಜ್ಯದಲ್ಲೂ ಭರ್ಜರಿ ಜಯಭೇರಿ ಬಾರಿಸಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಪಕ್ಷ ಗೆಲುವು ಸಾಧಿಸಿದೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಜಯ ಗಳಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ತಲಾ ಒಂದೊಂದು ಸ್ಥಾನ ಮಾತ್ರ ಗಳಿಸಿವೆ. ದೇಶಾದ್ಯಂತ ಇದ್ದ ಪ್ರಧಾನಿ ನರೇಂದ್ರ ಮೋದಿ ಅಲೆ ರಾಜ್ಯದಲ್ಲೂ ಬಲವಾಗಿ ಬೀಸಿರುವುದು ಸ್ಪಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮಧ್ಯಂತರ ಚುನಾವಣೆ ಎದುರಿಸಿದಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಪಡೆದು ಸ್ವಂತ ಬಲದ ಮೇಲೆ ಸರ್ಕಾರ ರಚಿಸುವುದರಲ್ಲಿ ಅನುಮಾನವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆದರೆ, ಪಕ್ಷದ ಹೆಚ್ಚಿನ ಸಂಖ್ಯೆಯ ಶಾಸಕರು ಮಧ್ಯಂತರ ಚುನಾವಣೆ ಎದುರಿಸುವ ಮನಸ್ಥಿತಿಯಲ್ಲಿ ಇಲ್ಲ. ಈಗ ಒಂದು ವರ್ಷ ಕಳೆದಿದೆ. ಕಾಂಗ್ರೆಸ್‌ ಅಥವಾ ಜೆಡಿಎಸ್‌ನ ಶಾಸಕರು ಅವರ ಪಕ್ಷಗಳಿಂದ ಹೊರಬಂದಲ್ಲಿ ಪರ್ಯಾಯ ಸರ್ಕಾರ ರಚಿಸುವುದು ಸೂಕ್ತ. ಉತ್ತಮ ಆಡಳಿತ ನೀಡುವುದಕ್ಕೆ ಸಾಧ್ಯವಿದೆ. ಲೋಕಸಭಾ ಚುನಾವಣೆಗೂ ಮತ್ತು ವಿಧಾನಸಭಾ ಚುನಾವಣೆಗೂ ಮತದಾರರ ಒಲವು-ನಿಲುವು ಬದಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ವೇಳೆ ಮಧ್ಯಂತರ ಚುನಾವಣೆಯಲ್ಲಿ ಮತ್ತೆ ಬಹುಮತ ಗಳಿಸದೇ ಇದ್ದಲ್ಲಿ ಆಗ ಏನು ಮಾಡಬೇಕು ಎಂಬ ಆತಂಕವನ್ನು ಹಲವು ಶಾಸಕರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲಿ ಮಧ್ಯಂತರ ವಿಧಾನಸಭಾ ಚುನಾವಣೆಯ ಪ್ರಸ್ತಾಪವಂತೂ ಕೇಳಿಬರುತ್ತಿದೆ. ಅದರ ಧ್ವನಿ ಸಣ್ಣದಾಗಿದ್ದರೂ ತೀಕ್ಷ್ಣವಾಗಿದೆ.

click me!