ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರು ಪಂಚಾಯ್ತಿ ಗ್ರಾಮಸ್ಥರದ್ದು ನಿಜಕ್ಕೂ ಯಾತನಾಮಯ ಜೀವನ. ನೀರು ಕುಡಿಯದಿದ್ದರೆ ಬದುಕು ಕಷ್ಟಕರ. ಕುಡಿದರೆ ಮತ್ತಷ್ಟೂ ಘೋರ!
ಯಾದಗಿರಿ (ಮೇ. 28): ಈ ಗ್ರಾಮಸ್ಥರದ್ದು ನಿಜಕ್ಕೂ ಯಾತನಾಮಯ ಜೀವನ. ನೀರು ಕುಡಿಯದಿದ್ದರೆ ಬದುಕು ಕಷ್ಟಕರ. ಕುಡಿದರೆ ಮತ್ತಷ್ಟೂಘೋರ!
ಕಾರಣ ಇಲ್ಲಿನ ಬೋರ್‌ವೆಲ್‌ಗಳಲ್ಲಿನ ನೀರಲ್ಲಿ ಆರ್ಸೆನಿಕ್ ಸೇರಿದಂತೆ ಫ್ಲೋರೈಡ್ ಮುಂತಾದ ರಾಸಾಯನಿಕಗಳ ಮಿಶ್ರಣದಿಂದಾಗಿ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಇಲ್ಲಿನವರು ತುತ್ತಾಗಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರು ಪಂಚಾಯ್ತಿ ವ್ಯಾಪ್ತಿಯ ಏವೂರು ದೊಡ್ಡ ತಾಂಡಾದಲ್ಲಿ ಮಾರಕ ಕ್ಯಾನ್ಸರ್ ರೋಗ ‘ಕಾಮನ್’ ಅನ್ನೋ ಹಾಗಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಾದರೂ ಒಂದಿಲ್ಲವೊಂದು ಮಾರಕ ರೋಗದಿಂದ ನರಳುತ್ತಿದ್ದಾರೆ.
ಬುದ್ಧಿಮಾಂದ್ಯ, ವಿಕಲಚೇತನ, ಮೂಳೆ ರೋಗ, ಚರ್ಮರೋಗ ಸೇರಿದಂತೆ ವಿವಿಧ ಕಾಯಿಲೆಗಳು ಇಲ್ಲಿನವರನ್ನು ಪೀಡಿಸುತ್ತಿವೆ. ವಯಸ್ಸು ಮೀರಿದರೂ ಆಗದ ಬೆಳವಣಿಗೆ, ದೃಷ್ಟಿದೋಷ, ಚರ್ಮದ ಮೇಲೆ ಗುಳ್ಳೆಗಳು, ಎದ್ದೇಳಲೂ ಬಾರದಷ್ಟೂಎಲುಬು-ಕೀಲುಗಳ ಸವಕಳಿ, ತಲೆ ದೊಡ್ಡದಿದ್ದರೆ, ದೇಹದ ಉಳಿದ ಭಾಗ ಬೆಳವಣಿಗೆಯಾಗದಿರುವುದು, ಗರ್ಭಾವಸ್ಥೆಯಲ್ಲೇ ಶಿಶುವಿಗೆ ಮಾರಕ ಕಾಯಿಲೆಗಳ ಅಂಟುವಿಕೆ... ಹೀಗೆ ಈ ಎಲ್ಲ ಕಾರಣಗಳು ಏವೂರು ದೊಡ್ಡ ತಾಂಡಾ ಹಾಗೂ ಅಕ್ಕಪಕ್ಕದ ಭಾಗದಲ್ಲಿ ಜೀವ ಹಿಂಡುತ್ತ ಸಾಗಿವೆ.
ಕೆಲವು ಕಡೆಗಳಲ್ಲಿ ಈ ಭಾಗದ ಮದುವೆ ಪ್ರಸ್ತಾಪಗಳೂ ಕಡಿಮೆಯಾಗಿವೆ. ಏವೂರಷ್ಟೇ ಅಲ್ಲ, ಅಕ್ಕಪಕ್ಕದ ನಗನೂರು, ಕಿರದಳ್ಳಿ ತಾಂಡಾ, ಹದನೂರು, ಏವೂರು, ಮಲ್ಲಾ, ಮುಂತಾದ ಗ್ರಾಮಗಳಿಗೂ ವ್ಯಾಪಿಸಿ, ರೋಗಗ್ರಸ್ಥ ಗ್ರಾಮಗಳು ಎಂದೇ ಕರೆಯಲ್ಪಡುತ್ತಿವೆ.
ಸುಮಾರು 2 ಸಾವಿರದಷ್ಟುಜನಸಂಖ್ಯೆಯಿರುವ ಏವೂರು ದೊಡ್ಡ ತಾಂಡಾ ಜನ ಶುದ್ಧ ನೀರು ಬೇಕೆಂದರೆ ನಾಲ್ಕು ಕಿ.ಮೀ. ದೂರದೂರಿಗೆ ತೆರಳಿ ಹಣ ತೆತ್ತೇ ತರಬೇಕು. ಇಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಕೆಲ ವರ್ಷಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾದಾಗ, ಜಿಲ್ಲಾಡಳಿತ ಅಲ್ಲಿಗೆ ತೆರಳಿ ಆರ್ಸೆನಿಕ್ ಹಾಗೂ ವಿಷಕಾರಕ ರಾಸಾಯನಿಕ ಅಂಶಗಳುಳ್ಳ ಜಲಮೂಲವನ್ನು ಪತ್ತೆ ಹಚ್ಚಿ, ಅಲ್ಲಿನ ನೀರು ಕುಡಿಯಬಾರದೆಂದು ಘೋಷಿಸಿತ್ತು. ಆ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆಯನ್ನೂ ನೀಡಿತ್ತು.
ನ್ಯಾಶನಲ್ ಸೇವಾ ಡಾಕ್ಟರ್ಸ್ ಅಸೋಶಿಯೇಷನ್, ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಹಾಗೂ ನ್ಯಾಷನಲ್ ಹೆಲ್ತ್ ಮಿಷನ್ ಸಹಭಾಗಿತ್ವದಲ್ಲಿ ಇಲ್ಲಿ ಸೆ.23, 2018 ರಂದು ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸಿದ್ದ ತಜ್ಞ ವೈದ್ಯರ ತಂಡ, ಸರ್ಕಾರಕ್ಕೆ ವಿಸ್ಕೃತ ವರದಿ ನೀಡಿ ಕುಡಿಯುವ ನೀರು ಸೇರಿ ಮೂಲ ಸೌಕರ್ಯ ಕಲ್ಪಿಸಲಿ ಎಂದು ಸಲಹೆ ನೀಡಿತ್ತು. ಎಲ್ಲವೂ ಮರೀಚಿಕೆಯಾಗಿಯೇ ಉಳಿದಿದೆ.
ಏನ್ಮಾಡೋದು? ನಮ್ಮ ತಾಂಡಾದ ಹಣೇಬರಹ. ಬೋರ್ವೆಲ್ ನೀರಿನಲ್ಲಿ ವಿಷಾ ಅದ ಕುಡಿಬ್ಯಾಡಿ, ಆರ್. ಓ. ಪ್ಲಾಂಟ್ ನೀರು ಕುಡೀರಿ ಅಂತ ಹೇಳುತ್ತಾರೆ. ಆದ್ರ, ಆರ್. ಓ. ಪ್ಲಾಂಟ್ ಕೆಟ್ಟು ಹೋಗೇದ. ಹಿಂಗಾಗಿ ನಮಗ ಬೋರ್ವೆಲ್ ನೀರು ವಿಷಾ ಅಂತ ಗೊತ್ತಿದ್ದರೂ ಕುಡಿಬೇಕಾಗೇದ. ಕ್ಯಾನ್ಸರ್ ಬರ್ತದ ಅಂದ್ರೂ ಬದುಕಲು ನೀರು ಕುಡಿಯಲೇ ಬೇಕು.
-ತುಳಜಾರಾಮ್, ಏವೂರು ದೊಡ್ಡ ತಾಂಡಾ ಗ್ರಾಮಸ್ಥ.
- ಆನಂದ್ ಎಂ ಸೌದಿ