
ಬೆಂಗಳೂರು (ಏ.30): ದೇಶದಲ್ಲಿ ಸಾವಯವ ಹಾಗೂ ಸಿರಿಧಾನ್ಯ ಕ್ರಾಂತಿಯ ಮೂಲಕ 2ನೇ ಹಸಿರು ಕ್ರಾಂತಿ ನಡೆಯಬೇಕಿದ್ದು, ಕರ್ನಾಟಕ ರಾಜ್ಯ ಸಾವಯವ ಹಾಗೂ ಸಿರಿಧಾನ್ಯ ಕ್ರಾಂತಿಯ ನೇತಾರನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಕಾರ್ಯದರ್ಶಿ ಎಸ್.ಕೆ.ಪಟ್ಟನಾಯಕ್ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆ ಏರ್ಪಡಿಸಿರುವ 3 ದಿನಗಳ ಸಾವಯವ ಹಾಗೂ ಸಿರಿಧಾನ್ಯಗಳ ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ 2ನೇ ದಿನವಾದ ಶನಿವಾರ ಗ್ರಾಹಕರ ಸಮಾವೇಶದಲ್ಲಿ ಮಾತನಾಡಿದರು. ಆಧುನಿಕ ಆಹಾರ ಉತ್ಪಾದನಾ ತಂತ್ರಜ್ಞಾನ ಮತ್ತು ಜೀವನಶೈಲಿಯಿಂದಾಗಿ ದೇಶದ ನಾಗರಿಕರು ಎದುರಿಸುತ್ತಿರುವ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಸಾವಯವ ಮತ್ತು ಸಿರಿಧಾನ್ಯ ಆಹಾರಗಳಿಂದಲೇ ಪರಿಹಾರ ಸಿಗಲಿದೆ. ಹೀಗಾಗಿ ಭವಿಷ್ಯದಲ್ಲಿ ಆಗಬೇಕಿರುವ ಆಹಾರ ಉತ್ಪಾದನೆ ಮತ್ತು ಬಳಕೆಯ ವಿಚಾರದಲ್ಲಿ ಕರ್ನಾಟಕ ರಾಜ್ಯ ಈಗಾಗಲೇ ಹೊಸ ಶಕೆಗೆ ನಾಂದಿ ಹಾಡಿದೆ. ಈ ಮಾರ್ಗವನ್ನೇ ದೇಶದ ಎಲ್ಲ ರಾಜ್ಯಗಳು ಅನುಸರಿಸಬೇಕಾದ ದಿನಗಳು ದೂರ ಇಲ್ಲ ಎಂದು ವಿಶ್ಲೇಷಿಸಿದರು.
ಇಕ್ರಿಸಾಟ್‌ನ ಮಹಾನಿರ್ದೇಶಕ ಡೋನಾಲ್ಡ್ ಬುರ್ಗಿನ್‌ಸನ್ ‘ಮಿಲೆಟ್ ಆ್ಯಪ್' ಎಂಬ ಡಿಜಿಟಲ್ ಅಪ್ಲಿಕೇಶನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಿಗ್ ಬಾಸ್ಕೆಟ್ ಕಂಪೆನಿಗೆ ರಾಜ್ಯದ ಸಾವಯವ ಬೆಳೆಗಾರರಿಂದಲೇ ನೇರವಾಗಿ ಧಾನ್ಯಗಳನ್ನು ಮಾರಾಟ ಮಾಡುವ ಕುರಿತು ಉತ್ತರ ಕನ್ನಡ ಸಾವಯವ ಬೆಳೆಗಾರರ ಸಂಘದ ಅಧ್ಯಕ್ಷ ವಿಶ್ವೇಶ್ವರ್ ಭಟ್ ಮತ್ತು ಬಿಗ್ ಬಾಸ್ಕೆಟ್ ಕಂಪನಿಯ ಪ್ರತಿನಿಧಿ ಶೇಷು ತಿರುಮಲ ಒಪ್ಪಂದಕ್ಕೆ ಸಹಿ ಮಾಡಿದರು. ರಾಜ್ಯ ಸರ್ಕಾರ ಸಿರಿಧಾನ್ಯಗಳ ಮಾರಾಟಕ್ಕೆ ರೂಪಿಸಿದ ‘ಸಿರಿ' ಹಾಗೂ ‘ಶ್ರೇಷ್ಠ' ಬ್ರಾಂಡ್‌ನೇಮ್‌ಗಳನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.
ಬೆಂಗಳೂರು ನಗರದಲ್ಲಿ 270 ಮಳಿಗೆಗಳಲ್ಲಿ ಸಾವಯವ ಆಹಾರ ಲಭ್ಯವಿದ್ದು, ಇಷ್ಟುಸಂಖ್ಯೆಯ ಮಳಿಗೆಗಳಿರುವುದು ದೇಶದಲ್ಲೇ ಗರಿಷ್ಠ ಎಂದರು. ಸಚಿವ ರಾಮಲಿಂಗಾರೆಡ್ಡಿ, ಬ್ರಿಟಾನಿಯಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವರುಣ್ ಬೆರ್ರಿ, ಪ್ರೋ-ನೇಚರ್‌ನ ಸಂಸ್ಥಾಪಕ ಸಿಇಓ ವರುಣ್ ಗುಪ್ತಾ, ಫä್ಯಚರ್ ಕನ್ಸೂಮರ್ ಕಂಪನಿಯ ಸಿಇಓ ಸಂಜಯ್ ಮಾಲ್ಪಾನಿ, ಐಟಿಸಿ ಕಂಪನಿಯ ಆಹಾರ ವಿಭಾಗದ ಸಿಇಒ ಹೇಮಂತ್ ಮಲ್ಲಿಕ್, ಸಾವಯವ ಕೃಷಿ ಉನ್ನತ ಸಮಿತಿ ಅಧ್ಯಕ್ಷ ಬಿ.ಸೋಮಶೇಖರ್, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ, ತೋಟಗಾರಿಕೆ ವಿವಿ ಕುಲಪತಿ ಡಾ.ವಾಸುದೇವಪ್ಪ, ಎಂಟಿಆರ್ ಫುಡ್ಸ್‌ನ ಮುಖ್ಯಸ್ಥ ಸಂಜಯ್ ಶರ್ಮಾ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.