ನೆರೆಯಿಂದ 6 ಲಕ್ಷ ಹೆಕ್ಟೇರ್‌ ಜಮೀನಲ್ಲಿ ಬೆಳೆ ನಾಶ

By Web DeskFirst Published Aug 14, 2019, 8:31 AM IST
Highlights

ನೆರೆಯಿಂದ 6 ಲಕ್ಷ ಹೆಕ್ಟೇರ್‌ ಜಮೀನಲ್ಲಿ ಬೆಳೆ ನಾಶ | ಇದು ಕೃಷಿ ಇಲಾಖೆ ಅಂದಾಜು | ನೀರು ಪೂರ್ಣ ತಗ್ಗಿದ ಮೇಲೆ ಸಮರ್ಪಕ ಲೆಕ್ಕ | ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆ ಹಾನಿ

ಬೆಂಗಳೂರು (ಆ. 14): ರಾಜ್ಯದಲ್ಲಿ ಮಹಾಮಳೆಯ ಆರ್ಭಟ ಮತ್ತು ಕೃಷ್ಣಾ, ಭೀಮಾ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿದ ಪರಿಣಾಮ ಈವರೆಗೆ 21 ಜಿಲ್ಲೆಗಳ 4125 ಗ್ರಾಮಗಳು ಹಾನಿಗೊಳಗಾಗಿದ್ದು, ಒಟ್ಟು 5.92 ಲಕ್ಷ ಹೆಕ್ಟೇರ್‌ಗೂ ಅಧಿಕ ಕೃಷಿ ಭೂಮಿಯಲ್ಲಿ ಬೆಳೆಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆ ಅಧಿಕೃತವಾಗಿ ಅಂದಾಜಿಸಿದೆ.

1 ವಾರದ ಮಳೆ 118 ವರ್ಷದ ದಾಖಲೆ, ಮೊದಲು ಅನಾವೃಷ್ಟಿ, ವಾರದಲ್ಲೇ ಅತಿವೃಷ್ಟಿ!

ಆದರೆ, ನೀರು ಇನ್ನೂ ತಗ್ಗದ ಹಿನ್ನೆಲೆಯಲ್ಲಿ ಬೆಳೆ ಹಾನಿಯ ಪ್ರಮಾಣವನ್ನು ಸಮರ್ಪಕವಾಗಿ ಅಂದಾಜಿಸಲು ಆಗಿಲ್ಲ. ಈ ಕಾರ್ಯ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಒಟ್ಟಾರೆ ಬೆಳೆ ಹಾನಿ ಎಷ್ಟಾಗಿದೆ ಎಂಬುದನ್ನು ಇಲಾಖೆ ಅಂದಾಜಿಸಲಿದೆ. ಸದ್ಯಕ್ಕೆ ದೊರಕಿರುವ ಮಾಹಿತಿ ಪ್ರಕಾರ ಅತಿವೃಷ್ಟಿಹಾಗೂ ಪ್ರವಾಹದಿಂದಾಗಿ ರಾಜ್ಯದಲ್ಲೇ ಅತಿ ಹೆಚ್ಚು ಬೆಳೆ ಹಾನಿ ಅನುಭವಿಸಿರುವ ಜಿಲ್ಲೆ ಬೆಳಗಾವಿಯಾಗಿದ್ದರೆ, ಅತಿ ಹೆಚ್ಚು ಗ್ರಾಮಗಳು ಹಾನಿಗೊಳಗಾದ ಜಿಲ್ಲೆ ಶಿವಮೊಗ್ಗ.

ಬೆಳಗಾವಿಯಲ್ಲಿ 2.34 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಅತೀ ಹೆಚ್ಚು ಬೆಳೆಹಾನಿಯಾದ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, ನಂತರದ ಸ್ಥಾನದಲ್ಲಿವೆ. ಹಾನಿಗೊಳಗಾದ 21 ಜಿಲ್ಲೆಗಳಲ್ಲಿ ಕೊಪ್ಪಳದಲ್ಲಿ 243 ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿಯಾಗಿದ್ದು, ಕೊನೆಯ ಸ್ಥಾನದಲ್ಲಿದೆ.

ಸದ್ಯಕ್ಕೆ ನಗರಕ್ಕಿಲ್ಲ ನೀರಿನ ಸಮಸ್ಯೆ!

ಇನ್ನು ಭತ್ತ, ಜೋಳ, ರಾಗಿ, ಮುಸುಕಿನಜೋಳ, ಕಬ್ಬು, ಸೋಯಾ ಅವರೆ, ಶೇಂಗಾ, ಸೂರ್ಯಕಾಂತಿ, ತೊಗರಿ, ಹೆಸರು, ಉದ್ದು, ಹತ್ತಿ, ಸಜ್ಜೆ, ಅವರೆ ಸೇರಿದಂತೆ ಹಲವು ಬೆಳೆಗಳು ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಮುಸುಕಿನ ಜೋಳ ಸುಮಾರು 1.31 ಲಕ್ಷ ಹೆಕ್ಟೇರ್‌ನಲ್ಲಿ ಹಾನಿಗೊಳಗಾಗಿದ್ದರೆ, ಕಬ್ಬು 1.21 ಲಕ್ಷ ಹೆಕ್ಟೇರ್‌, ಸೋಯಾ ಅವರೆ 79276, ಹತ್ತಿ 65245, ಭತ್ತ 91250, ಜೋಳ 10,281, ಸೂರ್ಯಕಾಂತಿ 4408, ತೊಗರಿ 16262, ಶೇಂಗಾ 29962, ಉದ್ದು 35006, ಸಜ್ಜೆ 5338 ಹೀಗೆ ಅಂದಾಜು 5,92,242 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.

ಜಿಲ್ಲಾವಾರು ಹಾನಿ:

ಬೆಳಗಾವಿ-2,34,652 ಹೆಕ್ಟೇರ್‌, ಹಾವೇರಿ-1,13,404. ಧಾರವಾಡ-1,00,281, ಶಿವಮೊಗ್ಗ-15,922, ವಿಜಯಪುರ-13,270.6, ಕಲಬುರಗಿ-13,673, ಉತ್ತರ ಕನ್ನಡ-9908, ಯಾದಗಿರಿ 7638.36, ಬಾಗಲಕೋಟೆ- 40363, ದಕ್ಷಿಣ ಕನ್ನಡ- 793, ಗದಗ-13066, ಉಡುಪಿ-128.38, ರಾಯಚೂರು-12541, ಹಾಸನ-5635, ಬಳ್ಳಾರಿ-4200.69, ದಾವಣಗೆರೆ-619.29, ಕೊಡಗು-3663, ಚಿಕ್ಕಮಗಳೂರು-1335, ಕೊಪ್ಪಳ-243, ಮಂಡ್ಯ-415, ಚಾಮರಾಜನಗರ-471 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆ ಹಾನಿ ಸಂಭವಿಸಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಹಾನಿಗೊಳಗಾದ ಗ್ರಾಮಗಳು:

ರಾಜ್ಯದ ಈ 21 ಜಿಲ್ಲೆಗಳ ಪೈಕಿ ಶಿವಮೊಗ್ಗದಲ್ಲಿ 755 ಗ್ರಾಮಗಳು ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾಗಿವೆ. ಉತ್ತರ ಕನ್ನಡದಲ್ಲಿ 487 ಗ್ರಾಮಗಳು, ಯಾದಗಿರಿಯಲ್ಲಿ 56, ಬಾಗಲಕೋಟೆಯಲ್ಲಿ 191, ಬೆಳಗಾವಿಯಲ್ಲಿ 510, ದಕ್ಷಿಣ ಕನ್ನಡದಲ್ಲಿ 100, ವಿಜಯಪುರದಲ್ಲಿ 200, ಗದಗ 49, ಉಡುಪಿ 92, ಹಾವೇರಿ 494, ಧಾರವಾಡ 395, ರಾಯಚೂರು 84, ಹಾಸನ 238, ಬಳ್ಳಾರಿ 91, ದಾವಣಗೆರೆ 30, ಚಿಕ್ಕಮಗಳೂರು 195, ಕೊಪ್ಪಳ 19, ಮಂಡ್ಯ 19, ಕಲಬುರಗಿ 110 ಚಾಮರಾಜನಗರ 10 ಗ್ರಾಮಗಳು ಒಟ್ಟು ಸೇರಿ 4125 ಗ್ರಾಮಗಳಲ್ಲಿ ಮಳೆ ಮತ್ತು ನೆರೆ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿದೆ.

ಆ.13ರವರೆಗಿನ ಬೆಳೆಹಾನಿಯ ಅಂಕಿಅಂಶ ಇದಾಗಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾದರೆ ಹಾನಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ. ಬೆಳೆಹಾನಿ ಸಮೀಕ್ಷೆಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಸಿಬ್ಬಂದಿಗಳ ತಂಡ ನಡೆಸಲಿದೆ.

ಪ್ರವಾಹ ಹೆಚ್ಚಾಗಿರುವ ಪ್ರದೇಶಗಳಲ್ಲಿ ಡ್ರೋನ್‌ ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷಾ ತಂಡದ ಸಿಬ್ಬಂದಿ ಬೆಳೆ ಹಾನಿ ಕ್ಷೇತ್ರದಲ್ಲಿದ್ದು, ಜಮೀನಿನ ಫೋಟೋ, ಸರ್ವೆ ನಂಬರ್‌ ದಾಖಲಿಸುತ್ತಿದ್ದಾರೆ. ಜಮೀನುಗಳಲ್ಲಿ ನಿಂತ ನೀರು ಇಳಿದ ತಕ್ಷಣವೇ ಸರ್ವೆ ಕಾರ್ಯ ಪುನಃ ಆರಂಭಗೊಳ್ಳಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

- ಸಂಪತ್ ತರಿಕೆರೆ 

click me!