ಹೊಸ ಸುಳಿವು ನೀಡಿದ ಸಿಎಂ ಎಚ್.ಡಿ ಕುಮಾರಸ್ವಾಮಿ

By Web DeskFirst Published May 20, 2019, 9:15 AM IST
Highlights

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಸುಳಿವೊಂದನ್ನು ನೀಡಿದ್ದಾರೆ. ಏನದು.?

ಮೈಸೂರು :  ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಿಂದ ಸುದ್ದಿವಾಹಿನಿಗಳ ಜತೆಗೆ ಬಹುತೇಕ ಮುನಿಸಿಕೊಂಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೀಗ ರಾಜ್ಯದಲ್ಲಿ ಮಾಧ್ಯಮಗಳಿಗೆ ಮೂಗುದಾರ ಹಾಕುವ ಸುಳಿವು ನೀಡಿದ್ದಾರೆ. ದೃಶ್ಯ ಮಾಧ್ಯಮಗಳು ಜವಾಬ್ದಾರಿ ಮರೆತಿವೆ, ರಾಜಕಾರಣಿಗಳನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಅಭಿಪ್ರಾಯಪಟ್ಟಿರುವ ಅವರು, ಇದಕ್ಕೆಲ್ಲ ಕಡಿವಾಣ ಹಾಕಲು ಮಾಧ್ಯಮ ನಿಯಂತ್ರಣ ಕಾಯಿದೆ ಜಾರಿಗೊಳಿಸುವ ಚಿಂತನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

ನಗರದ ಕಲಾಮಂದಿರದಲ್ಲಿ ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್‌ ರಚಿಸಿರುವ ‘ಸಮುದಾಯ ನಾಯಕರು’, ‘ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾನುವಾರ ಈ ವಿಚಾರ ತಿಳಿಸಿದರು.

ದೃಶ್ಯ ಮಾಧ್ಯಮಗಳು ಜವಾಬ್ದಾರಿ ಅರಿಯದೆ ಊಹೆಯ ಮೇಲೆ ಪತ್ರಿಕೋದ್ಯಮ ನಡೆಸುತ್ತಿವೆ. ನಾನು ಅಧಿಕಾರ ವಹಿಸಿಕೊಂಡ ನಂತರ ಇಲ್ಲಿಯವರೆಗೆ ತುಂಬಾ ನೊಂದಿದ್ದೇನೆ. ಮಾಧ್ಯಮಗಳು ಕೆಲಸ ಮಾಡಲು ಬಿಡುತ್ತಿಲ್ಲ. ಟಿಆರ್‌ಪಿ ಹೆಚ್ಚಿಸಿಕೊಳ್ಳಲು ರಾಜಕಾರಣಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳೆಂದರೆ ಅಷ್ಟುಬಿಟ್ಟಿಗೆ ಬಿದ್ದಿದ್ದಾರಾ? ಕುಹಕವಾಡುವ ಎಪಿಸೋಡ್‌ ಮಾಡಿ ಹೀನವಾಗಿ, ವ್ಯಂಗ್ಯವಾಗಿ ತೋರಿಸಲಾಗುತ್ತಿದೆ. ಇದೆಲ್ಲದಕ್ಕೂ ಕಡಿವಾಣ ಹಾಕಲು ಮಾಧ್ಯಮ ನಿಯಂತ್ರಣ ಕಾಯಿದೆ ಜಾರಿಗೊಳಿಸುವ ಚಿಂತನೆಯಲ್ಲಿದ್ದೇನೆ. ಆದರೆ, ಇದು ಮಾಧ್ಯಮದ ಕತ್ತು ಹಿಸುಕುವ ಕ್ರಮ ಎನ್ನಬೇಡಿ ಎಂದು ಕುಮಾರಸ್ವಾಮಿ ಹೇಳಿದರು.

ದೃಶ್ಯ ಮಾಧ್ಯಮದವರ ಪತ್ರಿಕೋದ್ಯಮದಿಂದ ಬೇಸತ್ತು ನಾನು ಅವರ ಜತೆಗೆ ಮಾತನಾಡುವುದನ್ನೇ ನಿಲ್ಲಿಸಿದ್ದೇನೆ. ನಾನು ಮಾಧ್ಯಮಗಳಿಂದ ಬದುಕಿಲ್ಲ ಅಥವಾ ರಾಜಕೀಯ ನಡೆಸುತ್ತಿಲ್ಲ. ಜನರಿಂದ ಆಯ್ಕೆಯಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ಅವರು ಹರಿಹಾಯ್ದರು.

ಗೆಲ್ಲಿಸಲು ಮಗನನ್ನು ನಿಲ್ಲಿಸಿಲ್ಲ: ನಾನು ಮಂಡ್ಯ ಕ್ಷೇತ್ರದಿಂದ ಗೆಲ್ಲಿಸಲು ನಿಖಿಲ್‌ ಕುಮಾರಸ್ವಾಮಿಯನ್ನು ನಿಲ್ಲಿಸಿಲ್ಲ. ಅಲ್ಲಿ ನಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಕಾರ್ಯಕರ್ತರು, ಶಾಸಕರು ಹೇಳಿದ್ದರಿಂದ ನಿಖಿಲ್‌ನನ್ನು ಕಣಕ್ಕಿಳಿಸಿದೆ. ಫಲಿತಾಂಶ ಏನೇ ಬಂದರೂ ಸ್ವೀಕರಿಸುತ್ತೇನೆ. ನನಗೇ ಗೊತ್ತಿರದ ಸೀಕ್ರೆಟ್‌ ರಿಪೋರ್ಟ್‌ ಮಾಧ್ಯಮದವರಿಗೆ ಸಿಕ್ಕಿದೆಯಂತೆ? ಚುನಾವಣೆ ಆಯೋಗದವರು ಗುಪ್ತ ದಳಕ್ಕೆ ಯಾವುದೇ ವರದಿ ನೀಡದಂತೆ ಕಟ್ಟಾಜ್ಞೆ ಹೊರಡಿಸಿದ್ದಾರೆ. ನಾನು ಇದುವರೆಗೆ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿಲ್ಲ. ಅಷ್ಟರ ಮಟ್ಟಿಗೆ ಚುನಾವಣೆ ಎದುರಿಸಿದ್ದೇನೆ ಎಂದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!