ಪೋಷಕರಿಗೆ ಗುಡ್ ನ್ಯೂಸ್ : ಈ ವರ್ಷವೇ ಸರ್ಕಾರಿ ಶಾಲೆಗಳಲ್ಲಿ ನರ್ಸರಿ

By Web DeskFirst Published May 18, 2019, 7:51 AM IST
Highlights

ಸರ್ಕಾರಿ ಶಾಲೆಗಳಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನಿಮ್ಮ ಮಕ್ಕಳನ್ನು ಈ ವರ್ಷದಿಂದಲೇ ಸರ್ಕಾರಿ ಶಾಲೆಯಲ್ಲಿ ನರ್ಸರಿ ಅಡ್ಮಿಶನ್ ಮಾಡಿಸಬಹುದಾಗಿದೆ. 

ಬೆಂಗಳೂರು : ಪೂರ್ವ ಪ್ರಾಥಮಿಕ (ಪ್ರಿ ಸ್ಕೂಲ್‌) ತರಗತಿಗಳು ಇಲ್ಲದ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2019-20ನೇ ಸಾಲಿನಿಂದಲೇ ರಾಜ್ಯದ 276 ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ.

ಶಾಲೆಗಳನ್ನು ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಕ್ರಿಯಾತ್ಮಕ ಸಂಯೋಜನೆಯೊಂದಿಗೆ ಒಗ್ಗೂಡಿಸಿ 2018-19ನೇ ಸಾಲಿನಿಂದ ತಾಲೂಕಿಗೆ ಒಂದರಂತೆ 176 ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರಸ್ತುತ ವರ್ಷದಿಂದ ಮತ್ತೆ 100 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಒಟ್ಟಾರೆ 276 ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶ ನೀಡಿದೆ.

ಪೂರ್ವ ಪ್ರಾಥಮಿಕ ತರಗತಿಗಳಿಗೆ ಕನಿಷ್ಠ 3.5 ವರ್ಷ ಮೇಲ್ಪಟ್ಟವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳಬೇಕು. ಪ್ರತಿ ಶಾಲೆಯಲ್ಲಿ 20ರಿಂದ 30 ಮಕ್ಕಳನ್ನು ಮಾತ್ರ ದಾಖಲಿಸಿಕೊಂಡು ಬೆಳಗ್ಗೆ 10ರಿಂದ ಮಧ್ಯಾಹ್ನ 3.30ರ ವರೆಗೆ ತರಗತಿ ನಡೆಸುವಂತೆ ತಿಳಿಸಿದೆ.

ಸಮಗ್ರ ಶಿಕ್ಷಣ ಕರ್ನಾಟಕದ ಅಡಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕ ಹಾಗೂ ಒಬ್ಬ ಆಯಾಗಳನ್ನು ಎಸ್‌ಡಿಎಂಸಿ ವತಿಯಿಂದಲೇ 10 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಬೇಕು. ನೇಮಕ ಮಾಡಿಕೊಂಡ ಅತಿಥಿ ಶಿಕ್ಷಕರಿಗೆ ಮಾಸಿಕ 7,500 ರು. ಮತ್ತು ಆಯಾಗಳಿಗೆ 5,000 ರು. ಸಂಭಾವನೆ ನೀಡುವಂತೆ ಸೂಚನೆ ನೀಡಿದೆ.

ಪೂರ್ವ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಅಂಗನವಾಡಿಗಳಂತೆಯೇ ಹಾಲು, ಉಪಾಹಾರ, ಊಟವನ್ನು ಮಧ್ಯಾಹ್ನ ಉಪಾಹಾರ ಯೋಜನೆ ವತಿಯಿಂದ ಸರಬರಾಜು ಮಾಡಲಾಗುತ್ತದೆ. ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಶಾಲೆಯ ಪ್ರಾಂಶುಪಾಲರು ಚುಚ್ಚುಮದ್ದುಗಳನ್ನು ಹಾಕಿಸಬೇಕು. ಶಾಲಾ ನಿರ್ಮಾಣಕ್ಕೆ ಅವಶ್ಯವಾದ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕವಾಗಿಟ್ಟಿರುವ ಹಣದಿಂದಲೇ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯುನಿಸೆಫ್‌, ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ನಿಯೋಜಿಸಿರುವ ಸಮಿತಿಯ ಶಿಫಾರಸಿನಂತೆ ಪ್ರಿ ಸ್ಕೂಲ್‌ಗೆ ಬಳಸಿಕೊಳ್ಳಬೇಕಾದ ಪಠ್ಯಕ್ರಮ, ಪಠ್ಯಪುಸ್ತಕ, ಬೋಧನೋಪಾಯಗಳನ್ನು ತಯಾರಿಸಿ ಶಿಕ್ಷಕರಿಗೆ ತರಬೇತಿ ನೀಡಬೇಕು ಎಂದೂ ಸೂಚಿಸಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

click me!